ನೆಲಜಿ ಗ್ರಾಮದ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಅಧಿಕವಾಗಿದ್ದು ರೈತರ ಗದ್ದೆ ತೋಟಗಳಿಗೆ ದಾಳಿ ಮಾಡಿ ಬಾರಿ ನಷ್ಟ ಉಂಟು ಮಾಡಿವೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ನೆಲಜಿ ಗ್ರಾಮದ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಲ ಅಧಿಕವಾಗಿದ್ದು, ರೈತರ ಗದ್ದೆ ಹಾಗೂ ತೋಟಗಳಿಗೆ ದಾಳಿ ಮಾಡಿ ಬಾರಿ ನಷ್ಟ ಉಂಟು ಮಾಡಿವೆ.ಬಲ್ಲಮಾವಟಿ ಗ್ರಾಪಂ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಭತ್ತದ ಬೆಳೆಯನ್ನು ತಿಂದು, ತುಳಿದು ಬಾರಿ ನಷ್ಟ ಉಂಟು ಮಾಡಿದ್ದಲ್ಲದೆ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ನೆಲಜಿ ಗ್ರಾಮ ನಿವಾಸಿ ಬೆಳೆಗಾರರಾದ ಚೆಟ್ಟಿನೆರವನ ಶಿವಕುಮಾರ್, ಮೊನ್ನಪ್ಪ, ಕುಶಾಲಪ್ಪ, ಕರುಂಬಯ್ಯ ಸೇರಿದಂತೆ ಸುತ್ತಮುತ್ತಲಿನ ಕೊಯ್ಲು ಮಾಡಿದ ಗದ್ದೆ ಹಾಗೂ ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ಬಾರಿ ಪ್ರಮಾಣದ ನಷ್ಟ ಉಂಟು ಮಾಡಿದ ಬಗ್ಗೆ ಅಲವತ್ತುಕೊಂಡಿದ್ದಾರೆ.ನೆಲಜಿ, ಪೇರೂರು ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ದಾಳಿ ಮಾಡುತ್ತಿರುವ ಕಾಡಾನೆಗಳಿಂದಾಗಿ ಗ್ರಾಮದ ನಿವಾಸಿಗಳಲ್ಲಿ ಜೀವ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಫಿ ಫಸಲು ಕೊಯ್ಲಿಗೆ ಸಮಯವಾಗುತ್ತಿರುವುದರಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ತೀವ್ರ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಬೆಳೆಗಾರರು
ಕೂಡಲೇ ನಷ್ಟ ಪರಿಹಾರ ಹಾಗೂ ಕಾಡಾನೆಗಳನ್ನು ಕಾಡಿಗೆ ಅಟ್ಟಿ ನಿಯಂತ್ರಿಸುವ ಕಾರ್ಯ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.