ಉಪ್ಪಿನಂಗಡಿ: ನನೆಗುದಿಗೆ ಬಿದ್ದಿದ್ದ ನೆಲ್ಯಾಡಿ ಪೇಟೆಯಲ್ಲಿನ ಎತ್ತರಿಸಿದ ರಸ್ತೆಯ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು ೧ ಬದಿ ವಾಹನ ಸಂಚಾರ ಆರಂಭಗೊಂಡಿದೆ. ಪ್ರಸಕ್ತ ಮಂಗಳೂರಿನಿಂದ ಬೆಂಗಳೂರು ಕಡೆಗೆ ಓಡಾಟ ನಡೆಸುವ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.ರಾಷ್ಟ್ರೀಯ ಹೆದ್ದಾರಿ ೭೫ರ ಅಡ್ಡಹೊಳೆ-ಬಿಸಿರೋಡು ನಡುವೆ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಈ ಪೈಕಿ ಪೆರಿಯಶಾಂತಿಯಿಂದ ಬಿ.ಸಿ.ರೋಡು ತನಕ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಕೆಎನ್‌ಆರ್ ಕಂಪನಿ ನಿರ್ವಹಿಸುತ್ತಿದೆ. ಬಿ.ಸಿ.ರೋಡು-ಪೆರಿಯಶಾಂತಿ ನಡುವಿನ ಬಹುತೇಕ ಕಡೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಓಡಾಟ ನಡೆಸುತ್ತಿದ್ದರೂ ನೆಲ್ಯಾಡಿಯಲ್ಲಿ ವೇಗ ಪಡೆದಿದ್ದ ಎತ್ತರಿಸಿದ ರಸ್ತೆಯ ನಿರ್ಮಾಣ ಕಾರ್ಯ ಸ್ಥಳೀಯರ ಮೇಲ್ಸೇತುವೆ ನಿರ್ಮಾಣದ ಬೇಡಿಕೆಯಿಂದಾಗಿ ಸ್ಥಗಿತಗೊಂಡಿತ್ತು.
ಎತ್ತರಿಸಿದ ರಸ್ತೆ ನಿರ್ಮಾಣವಾಗುತ್ತಿದ್ದಂತೆಯೇ ರಸ್ತೆ ಮಧ್ಯೆ ಕೋಟೆ ನಿರ್ಮಾಣವಾದ ಭಾವನೆ ಮೂಡಿ ರಸ್ತೆಯ ಒಂದು ಕಡೆಯ ಕಟ್ಟಡಗಳು ಇನ್ನೊಂದು ಕಡೆಗೆ ಕಾಣಿಸದೇ ಹೋದಾಗ ಕಲ್ಲಡ್ಕ ಮಾದರಿಯ ಮೇಲ್ಸೇತುವೆಯೇ ಬೇಕೆಂಬ ಬೇಡಿಕೆ ಸ್ಥಳೀಯರಿಂದ ವ್ಯಕ್ತವಾಗಿತ್ತು. ಈ ಬೇಡಿಕೆಯ ಅನುಷ್ಠಾನ ಸಾಧ್ಯತೆಯ ಬಗ್ಗೆ ಯಾವುದೇ ನಿಖರತೆ ಇಲ್ಲದೆ ಅಂದಿನ ರಾಜಕೀಯ ಮುಖಂಡರು ಭರವಸೆ ನೀಡುತ್ತಿದ್ದರಿಂದ ಸ್ಥಳೀಯರು ತಮ್ಮ ಬೇಡಿಕೆಯ ಈಡೇರಿಕೆಗೆ ಪಟ್ಟು ಹಿಡಿದಿದ್ದರು. ತನ್ಮೂಲಕ ೨ ವರ್ಷ ಕಾಮಗಾರಿ ಸ್ಥಗಿತವಾಗಿತ್ತು.ಸಂಸದರಿಗೆ ಮನವಿ: ಪ್ರಸಕ್ತ ಸಂಸದರಾಗಿರುವ ಬ್ರಿಜೇಶ್ ಚೌಟ ಸ್ಥಳೀಯರಿಗೆ ವಸ್ತು ಸ್ಥಿತಿಯ ಬಗ್ಗೆ ಮನವರಿಕೆ ಮಾಡಿ, ಬಹಳಷ್ಟು ಪ್ರಗತಿ ಕಂಡ ಕಾಮಗಾರಿಯನ್ನು ಪುನರ್ ಬದಲಾಯಿಸಲು ಅವಕಾಶವಿಲ್ಲವೆಂದೂ ತಿಳಿಸಿ, ಜನತೆಯ ಅನುಕೂಲತೆಗಾಗಿ ಈ ಗಾಗಲೇ ಇರುವ ೨ ಅಂಡರ್ ಪಾಸ್ ಗಳನ್ನು ಬೇಕಾದರೆ ಹೆಚ್ಚಿಸುವ ಪ್ರಸ್ತಾಪವನ್ನು ಜನರ ಮುಂದಿರಿಸಿ ಒಪ್ಪಿಸಿದ ಕಾರಣಕ್ಕೆ ಕಾಮಗಾರಿ ಮರು ಚಾಲನೆ ಪಡೆದಿತ್ತು. ಅದರಂತೆ ಕೆಲ ತಿಂಗಳ ಹಿಂದೆ ನೆಲ್ಯಾಡಿ ಪೇಟೆಯಲ್ಲಿ ಹೆಚ್ಚುವರಿ ಮೂರು ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಯೂ ಆರಂಭಿಸಲಾಗಿತ್ತು. ಇದೀಗ ಈ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ಎತ್ತರಿಸಿದ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪ್ರಸಕ್ತ ಮಂಗಳೂರಿನಿಂದ ಬೆಂಗಳೂರು ಕಡೆಗೆ ಓಡಾಟ ನಡೆಸುವ ಎಲ್ಲಾ ವಾಹನಗಳು ಎತ್ತರಿಸಿದ ರಸ್ತೆಯ ಮೂಲಕ ಓಡಾಟ ನಡೆಸುತ್ತಿವೆ.
ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಸರ್ವೀಸ್ ರಸ್ತೆ ಮೂಲಕವೇ ಓಡಾಟ ನಡೆಸುತ್ತಿವೆ. ಇನ್ನೊಂದು ತಿಂಗಳೊಳಗೆ ಇನ್ನೊಂದು ಪಾರ್ಶ್ವದ ಕಾಮಗಾರಿಯೂ ಪೂರ್ಣಗೊಂಡು ಎರಡೂ ಬದಿಯೂ ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಹೇಳಲಾಗಿದೆ.ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಗೊಂಡ ದಿನದಿಂದಲೇ ನೆಲ್ಯಾಡಿ ಪೇಟೆಯ ಜನ ಬಹಳ ಸಂಕಷ್ಟ ಪಡುತ್ತಿದ್ದಾರೆ. ಸರ್ವೀಸ್ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇದೀಗ ಎತ್ತರಿಸಿದ ರಸ್ತೆಯಲ್ಲಿ ೧ ಬದಿ ವಾಹನ ಸಂಚಾರ ಆರಂಭಗೊಂಡಿದೆ. ಆದ್ದರಿಂದ ಸರ್ವೀಸ್ ರಸ್ತೆಯ ಕೆಲಸ ಶೀಘ್ರ ಪೂರ್ಣಗೊಳಿಸಬೇಕು. ಚರಂಡಿ ವ್ಯವಸ್ಥೆ ಸರಿಪಡಿಸಬೇಕು. -ಸತೀಶ್ ಕೆ.ಎಸ್. ಅಧ್ಯಕ್ಷರು, ವರ್ತಕರ ಸಂಘ ನೆಲ್ಯಾಡಿ