ಸಾರಾಂಶ
ಅರ್ಧಕ್ಕೆ ನಿಂತ ನೂತನ ಕಟ್ಟಡ ಕಾಮಗಾರಿ । ಶಿಥಿಲಗೊಳ್ಳುತ್ತಿರುವ ಹಳೆ ಕಟ್ಟಡ
ನೆಮ್ಮಾರ್ ಅಬೂಬಕರ್ಕನ್ನಡಪ್ರಭ ವಾರ್ತೆ, ಶೃಂಗೇರಿ
ಕಟ್ಟಡ ಕಾಮಗಾರಿ ಆರಂಭಗೊಂಡು ಅನೇಕ ವರ್ಷಗಳು ಕಳೆಯುತ್ತಾ ಬಂದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಅರ್ಧಕ್ಕೆ ನಿಂತಿದೆ. ಗಾಳಿ ಮಳೆಗೆ ಗೋಡೆಗಳು ಶಿಥಿಲಗೊಂಡು, ಬಿರುಕುಬಿಟ್ಟು ಕುಸಿಯುವ ಹಂತದಲ್ಲಿದೆ. ಗಿಡಗಂಟಿಗಳು ಬೆಳೆದು ಕಟ್ಟಡವೇ ಪೊದೆಗಳಿಂದ ಮುಚ್ಚಿಹೋಗುತ್ತಿವೆ. ಇದು ನೆಮ್ಮಾರು ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿ ಕಥೆ ವ್ಯಥೆ.ಗ್ರಾಮ ವಿಕಾಸ ಯೋಜನೆಯಡಿ 2016-17 ರಲ್ಲಿ ಈ ನೂತನ ಕಟ್ಟಡದ ಕಾಮಗಾರಿ ಆರಂಭಗೊಂಡಿದೆ. ಸುಮಾರು ₹33 ಲಕ್ಷ ಅಂದಾಜು ವೆಚ್ಚದಿಂದ ಕಾಮಗಾರಿ ಆರಂಭವಾಗಿ ಮೊದಲ ಹಂತದ ಕಾಮಗಾರಿ ಪೂರ್ಣವಾದರೂ ಅನುದಾನದ ಕೊರತೆ ಯಿಂದ 2ನೇ ಹಂತದ ಕಾಮಗಾರಿ ಸ್ಥಗಿತಗೊಂಡಿತು. ಈಗ ಅನೇಕ ವರ್ಷಗಳು ಕಳೆದರೂ ಕಾಮಗಾರಿ ಮಾತ್ರ ಪುನರಾರಂಭ ಗೊಳ್ಳಲೇ ಇಲ್ಲ.
ಈಗಾಗಲೇ ನಿರ್ಮಾಣಗೊಂಡ ಗೋಡೆಗಳು ಮಳೆ, ಬಿಸಿಲಿಗೆ ಪಾಚಿಗಟ್ಟಿ, ಬಿರುಕುಗೊಂಡು ಇಂದೋ ನಾಳೆಯೋ ಕುಸಿದು ಬೀಳುವ ಹಂತ ತಲುಪಿವೆ. ಇನ್ನು ಗೋಡೆಗಳ ನಡುವೆ, ಗಿಡಗಂಟಿಗಳು ಬೆಳೆದು ನಿಂತು, ಸುತ್ತಮುತ್ತಲು ಪೊದೆಗಳು ಆವರಿಸಿಕೊಂಡಿದೆ. ಕಾಮಗಾರಿಯೂ ಮುಂದುವರಿಯದೆ ಉಪಯೋಗಕ್ಕೆ ಬಾರದಂತೆ ನಿರ್ಲಕ್ಷಕೆ ಒಳಗಾಗಿ ನಿಂತಿದೆ. ಇನ್ನೂ ಈ ಕಟ್ಟಡಕ್ಕೆ ಮಾತ್ರ ಪೂರ್ತಿ ಕಾಮಗಾರಿ ಭಾಗ್ಯ ಒದಗಿ ಬಂದಿಲ್ಲ.ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಳೆ ಕಟ್ಟಡವೂ ಶಿಥಿಲವಾಗಿದ್ದು ಮಳೆ ಬಂದಾಗಲೆಲ್ಲ ಸೋರುತ್ತಿದೆ. ದಾಖಲೆಗಳ ಸಂಗ್ರಹಕ್ಕೆ, ಸಭೆ ನಡೆಸಲು ಕೊಠಡಿಗಳಾಗಲೀ, ಸಭಾಂಗಣಕ್ಕಾಗಲೀ ಸ್ಥಳವಿಲ್ಲದೇ ಇಕ್ಕಟ್ಟಾಗಿದೆ. ಗ್ರಾಮಸಭೆ, ವಾರ್ಡ ಸಭೆ ಗಳನ್ನು ಶಾಲಾವರಣದಲ್ಲೋ ಅಥವಾ ಇತರೆ ಕಡೆಗಳಲ್ಲಿ ನಡೆಸಬೇಕಾದ ಅನಿವಾರ್ಯತೆ ಇದೆ. ಸಂಪೂರ್ಣ ಹಳೆ ಕಾಲದ ಕಟ್ಟಡವಾಗಿದೆ. ಮೂಲಸೌಕರ್ಯ ಕೊರತೆ ನಡುವೆಯೂ ಕಟ್ಟಡದಲ್ಲಿ ಕಾರ್ಯ ಕಲಾಪಗಳನ್ನು ನಿರ್ವಹಿಸಿಕೊಂಡು ಬರಲಾಗುತ್ತಿದೆ. ಅಲ್ಲದೇ ಇದೇ ಕಟ್ಟಡದಲ್ಲಿ ಸಾರ್ವಜನಿಕ ಗ್ರಂಥಾಲಯ, ಅಂಚೆ ಕಚೇರಿಯೂ ಕಾರ್ಯ ನಿರ್ವಹಿಸುತ್ತಿರುವುದರಿಂದ ಇನ್ನಷ್ಠು ಇಕ್ಕಟ್ಟಾಗಿದೆ. ಪ್ರತ್ಯೇಕ ಗ್ರಂಥಾಲಯ ಕಟ್ಟಡವಾಗಲೀ, ಅಂಚೆ ಕಚೇರಿಯಾಗಲೀ ಇಲ್ಲ. ಎಲ್ಲದಕ್ಕೂ ಗ್ರಾಮಪಂಚಾಯಿತಿ ಕಟ್ಟಡವೇ ಮೂಲದಾರವಾಗಿದೆ.
ನೆಮ್ಮಾರು,ನೆಮ್ಮಾರು ಎಸ್ಟೇಟ್, ಮಲ್ನಾಡ್, ಹರೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳನ್ನು ಒಳಗೊಂಡಿರುವ ನೆಮ್ಮಾರು ಕೇಂದ್ರ ಬಿಂದುವಾಗಿದೆ. ವಾರ್ಡ ಸಭೆ, ಗ್ರಾಮ ಸಭೆಗಳನ್ನು ಆಯೋಜಿಸಲು ಸ್ಥಳವಿಲ್ಲ. ಶಾಲೆಗಳು, ರಂಗ ಮಂದಿರಗಳಲ್ಲಿ ಸಭೆ ನಡೆಸಲಾಗುತ್ತಿದೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಅನೇಕ ದಶಕಗಳ ಸಮಸ್ಯೆ. ಅನೇಕ ಸರ್ಕಾರಗಳು ಬಂದು ಹೋದರು, ಜನಪ್ರತಿನಿಧಿಗಳು ಬದಲಾಗಿದ್ದರೂ ಈ ಕಟ್ಟಡ ಮಾತ್ರ ಬದಲಾಗಿಲ್ಲ. ಹೊಸಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ತೋರಲಿಲ್ಲ. ಕಟ್ಟಡ ಹಳೆಯದಾಗುತ್ತಾ, ಶಿಥಿಲಗೊಳ್ಳುತ್ತಿದ್ದರೂ ಸೂಕ್ತ ವ್ಯವಸ್ಥೆ ಕೈಗೊಳ್ಳಲು ಮೀನಾಮೇಷ ಎಣಿಸಲಾಗುತ್ತಿದೆ.ಇಲ್ಲಿಗೊಂದು ಸುವ್ಯವಸ್ಥಿತ ಗ್ರಾಪಂ ಕಟ್ಟಡದ ಅನಿವಾರ್ಯತೆಯಿದ್ದು, ಸರ್ಕಾರ ಅರ್ಧಕ್ಕೆ ನಿಂತ ಈ ನೂತನ ಕಟ್ಟಡದ ಪೂರ್ತಿ ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕಿದೆ. ಸರ್ಕಾರ, ಜನಪ್ರತಿನಿಧಿಗಳು ಇತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಎರಡನೇ ಹಂತದ ಕಾಮಗಾರಿ ತುರ್ತಾಗಿ ಆರಂಭವಾಗಬೇಕು. ಈ ಅಪೂರ್ಣ ಕಟ್ಟಡಕ್ಕೆ ಶಾಶ್ವತ ಪರಿಹಾರ ಒದಗಿಸಬೇಕಿದೆ.
-- ಬಾಕ್ಸ್--ಕಚೇರಿ ಕಾರ್ಯಕ್ಕೆ ತುರ್ತಾಗಿ ಕಟ್ಟಡ ನಿರ್ಮಾಣ ಅಗತ್ಯಹಾಲಿ ಈಗಿರುವ ಕಟ್ಟಡ ತುಂಬಾ ಹಳೆಯದಾಗಿದೆ. ದಾಖಲೆಗಳನ್ನು ಸಂಗ್ರಹಿಸಿ ಇಡಲು ಪ್ರತ್ಯೇಕ ಕೊಠಡಿಯಿಲ್ಲ. ಇರುವ ಕೊಠಡಿಗಳಲ್ಲಿಯೇ ದಾಖಲೆ, ಕಚೇರಿ, ಕಂಪ್ಯೂಟರ್ ಕೊಠಡಿಗಳನ್ನಾಗಿ ವಿರ್ವಹಿಸಿಕೊಂಡು ಹೋಗಲಾಗುತ್ತಿದೆ. ಮಳೆ ಬಂದರೆ ಸೋರುತ್ತಿದೆ. ತುರ್ತಾಗಿ ಕಟ್ಟಡ ನಿರ್ಮಾಣವಾದರೆ ಕಚೇರಿ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ಎರಡನೇ ಹಂತದ ಕಾಮಗಾರಿ ಆರಂಭಗೊಂಡಲ್ಲಿ ಕಟ್ಟಡ ಪೂರ್ಣಗೊಳ್ಳಲಿದೆ.
--ಹಳೆ ಕಟ್ಟಡ ಶಿಥಿಲಗೊಳ್ಳುತ್ತಿರುವುದರಿಂದ ಇಲ್ಲಿಗೆ ಸುಸಜ್ಜಿತ ಪಂಚಾಯಿತಿ ಕಟ್ಟಡದ ಅಗತ್ಯವಿದೆ. ನಾವು ಅನೇಕ ವರ್ಷಗಳಿಂದಲೂ ನಿರಂತರ ಪ್ರಯತ್ನ, ಹೋರಾಟ ಮಾಡುತ್ತಾ ಬಂದಿದ್ದೇವೆ. ಅನುದಾನದ ಕೊರತೆಯಿದ್ದು, ಜಿಲ್ಲಾ ಪಂಚಾಯಿತಿ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಈಗಾಗಲೇ ಉಳಿದ ₹12 ಲಕ್ಷ ಅನುದಾನ ಸಾಲದು. ಇನ್ನಷ್ಟು ಅನುದಾನ ಬಿಡುಗಡೆಯಾಗಿ ತುರ್ತಾಗಿ 2ನೇ ಹಂತದ ಕಾಮಗಾರಿ ಮುಂದುವರೆಯಬೇಕು.
- ರವಿಶಂಕರ್ಹೊಸದೇವರ ಹಡ್ಲು.
--ಈಗಾಗಲೇ ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದರೂ, 2ನೇ ಹಂತದ ಕಾಮಗಾರಿ ನಡೆಯದೇ ಕಟ್ಟಡ ಅಪೂರ್ಣಗೊಂಡಿದೆ. ಹೆಚ್ಚಿನ ಅನುದಾನದ ಅಗತ್ಯವಿದೆ. ಸರ್ಕಾರ ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ತ್ವರಿತವಾಗಿ ಕಾಮಗಾರಿ ಮುಂದುವರೆಯುವಂತಾಗಬೇಕು.
- ಎಚ್.ಜಿ.ಪುಟ್ಟಪ್ಪ ಹೆಗ್ಡೆನೆಮ್ಮಾರು ಗ್ರಾಪಂ ಸದಸ್ಯ
--13 ಶ್ರೀ ಚಿತ್ರ 1-
ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮಪಂಚಾಯಿತಿ ನೂತನ ಕಟ್ಟಡ ಕಾಮಗಾರಿ ಕಳೆದ ಕೆಲ ವರ್ಷಗಳಿಂದ ಅಪೂರ್ಣಗೊಂಡಿರುವುದು.13 ಶ್ರೀ ಚಿತ್ರ 2-
ರವಿಶಂಕರ್ ಹೊಸದೇವರ ಹಡ್ಲು.13 ಶ್ರೀ ಚಿತ್ರ 3-
ಎಚ್.ಜಿ,ಪುಟ್ಟಪ್ಪ ಹೆಗ್ಡೆ