ಎಸಿ ಇಲ್ಲದ ನವಜಾತ ಶಿಶು ಆರೋಗ್ಯ ಘಟಕ: ತರಾಟೆ

| Published : Dec 29 2023, 01:30 AM IST / Updated: Dec 29 2023, 01:31 AM IST

ಸಾರಾಂಶ

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ಆಸ್ಪತ್ರೆಗೆ ಮಕ್ಕಳ ದಾಖಲಾತಿ ಇಲ್ಲದಿರುವುದನ್ನು ಕಂಡು ಗರಂ ಆದ ಅವರು, 1500 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಹೂವಿನಹಡಗಲಿ: ಇಲ್ಲಿನ ನೂರು ಹಾಸಿಗೆ ಆಸ್ಪತ್ರೆ, ಮಹಿಳಾ ಕಾಲೇಜು, ವಿವಿಧ ವಸತಿನಿಲಯ ಸೇರಿದಂತೆ ವಿವಿಧ ಕಡೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಅವ್ಯವಸ್ಥೆಯನ್ನು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ನೂರು ಹಾಸಿಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ಆಸ್ಪತ್ರೆಗೆ ಮಕ್ಕಳ ದಾಖಲಾತಿ ಇಲ್ಲದಿರುವುದನ್ನು ಕಂಡು ಗರಂ ಆದ ಅವರು, 1500 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆದರೆ 7 ತಿಂಗಳ ಅವಧಿಯಲ್ಲಿ ಕೇವಲ 28 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಇದು ದುರಂತ. ಈ ಕುರಿತು ಸಿಡಿಪಿಒ ಹಾಗೂ ಆರೋಗ್ಯ ಇಲಾಖೆಗೆ ಹೆಚ್ಚು ಗಮನ ಹರಿಸಬೇಕೆಂದು ಹೇಳಿದರು.

ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಆರೋಗ್ಯ ಘಟಕದಲ್ಲಿ ಹವಾ ನಿಯಂತ್ರಿತ ಕೋಣೆ ನಿರ್ಮಾಣ ಮಾಡಿರಲಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸುತ್ತಾ, ಇಂತಹ ವಾತಾವರಣದಲ್ಲಿ ಮಕ್ಕಳಿಗೆ ಹೇಗೆ ಚಿಕಿತ್ಸೆ ನೀಡುತ್ತಿದ್ದೀರಿ? ನಿಯಾಮಾವಳಿ ಪ್ರಕಾರ ವ್ಯವಸ್ಥೆಯನ್ನು ಯಾಕೆ ಮಾಡಿಲ್ಲ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದಲ್ಲಿ ಮೆಟ್ರಿಕ್‌ ನಂತರದ ವಸತಿನಿಲಯ ಹಾಗೂ ವೃತ್ತಿಪರ ವಸತಿನಿಲಯದಲ್ಲಿ ಮಕ್ಕಳಿಗೆ ಶೌಚಾಲಯವಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸ್ವಚ್ಛತೆ ಇಲ್ಲ, ಸಿಸಿ ಕ್ಯಾಮೆರಾ ಇಲ್ಲ, ಬಯೋಮೆಟ್ರಿಕ್‌ ವ್ಯವಸ್ಥೆ ಇಲ್ಲ. ಈ ಕುರಿತು ಹೊಸಪೇಟೆಯಲ್ಲಿ ನಡೆಯುವ ಸಭೆಯಲ್ಲಿ ಉತ್ತರ ನೀಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಡಿಸಿಪಿಎ ಸುಭದ್ರಾದೇವಿ, ಸಿಪಿಡಿಒ ರಾಮನಗೌಡ, ಬಿಇಒ ಮಹೇಶ ಪೂಜಾರ, ವೈದ್ಯಾಧಿಕಾರಿ ಡಾ. ಶಿವಕುಮಾರ, ಟಿಎಚ್‌ಎ ಸ್ವಪ್ನಾ ಕಟ್ಟಿ ಇತರರಿದ್ದರು.