ವಿಧಾನಸೌಧದ ಎದುರು ರೀಲ್ಸ್‌ಗಾಗಿ ನೇಪಾಳಿಗಳ ಗಲಾಟೆ:13ಮಂದಿ ಸೆರೆ

| Published : Nov 22 2025, 02:15 AM IST

ವಿಧಾನಸೌಧದ ಎದುರು ರೀಲ್ಸ್‌ಗಾಗಿ ನೇಪಾಳಿಗಳ ಗಲಾಟೆ:13ಮಂದಿ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ವಿಧಾನಸೌಧ ಮೆಟ್ರೋ ನಿಲ್ದಾಣದ ಸಮೀಪ ಕ್ಷುಲ್ಲಕ ಕಾರಣಕ್ಕೆ ಬಡಿದಾಡಿಕೊಂಡಿದ್ದ ಇಬ್ಬರು ಅಪ್ರಾಪ್ತರು ಸೇರಿದಂತೆ 13 ಮಂದಿ ನೇಪಾಳ ದೇಶದ ಪ್ರಜೆಗಳನ್ನು ಕಬ್ಬನ್ ಪಾರ್ಕ್ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ವಿಧಾನಸೌಧ ಮೆಟ್ರೋ ನಿಲ್ದಾಣದ ಸಮೀಪ ಕ್ಷುಲ್ಲಕ ಕಾರಣಕ್ಕೆ ಬಡಿದಾಡಿಕೊಂಡಿದ್ದ ಇಬ್ಬರು ಅಪ್ರಾಪ್ತರು ಸೇರಿದಂತೆ 13 ಮಂದಿ ನೇಪಾಳ ದೇಶದ ಪ್ರಜೆಗಳನ್ನು ಕಬ್ಬನ್ ಪಾರ್ಕ್ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ನೇಪಾಳ ಮೂಲದ ಉಪೇಂದ್ರ ಚೌಲಾಗೆ, ಗೋಪಾಲ್‌, ಧರ್ಮೇಂದ್ರ, ರಾಹುಲ್ ಸಿಂಗ್‌, ನಿರ್ಮಲ್ ಅಲಿಯಾಸ್ ಗುರು, ಮನೋಜ್‌, ಪರಶ್ ಬೋಹ್ರಾ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಬಂಧಿತರಾಗಿದ್ದಾರೆ.

ಕಳೆದ ಭಾನುವಾರ ವಿಧಾನಸೌಧದ ದೀಪಾಂಲಕಾರ ವೀಕ್ಷಣೆ ಸಲುವಾಗಿ ಬಂದಿದ್ದಾಗ ನೇಪಾಳಿಗಳು ಗಲಾಟೆ ಮಾಡಿದ್ದರು. ಈ ಘರ್ಷಣೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಗಲಾಟೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವೈರಲ್ ವಿಡಿಯೋ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೀಲ್ಸ್‌ಗೆ ನೇಪಾಳಿಗಳ ಗಲಾಟೆ

ಸಾಮಾಜಿಕ ಜಾಲತಾಣದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ವಿಧಿಯ ಮೆಟ್ರೋ ನಿಲ್ದಾಣದ ಬಳಿ ಗಲಾಟೆ ವಿಡಿಯೋ ವೈರಲ್ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವಿಡಿಯೋ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಕಬ್ಬನ್‌ ಪಾರ್ಕ್ ಉಪ ವಿಭಾಗದ ಎಸಿಪಿ ಪ್ರಿಯದರ್ಶಿನಿ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಲಾಯಿತು. ಬಂಧಿತರೆಲ್ಲರು ನೇಪಾಳ ದೇಶದ ನಾಗರಿಕರಾಗಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚ್ಚಿಂದ್ರ ಹಾಕೆ ತಿಳಿಸಿದ್ದಾರೆ.

ಈ ನೇಪಾಳಿ ನಾಗರಿಕರು ರೀಲ್ಸ್ ಮಾಡುತ್ತಿದ್ದರು. ಈ ವಿಡಿಯೋಗಳು ನೇಪಾಳ ದೇಶದಲ್ಲಿ ಹೆಚ್ಚು ವೀಕ್ಷಣೆ ಪಡೆಯುತ್ತಿದ್ದವು. ಹಾಗಾಗಿ ರಜೆ ದಿನಗಳಲ್ಲಿ ವಿಧಾನಸೌಧ ಸೇರಿದಂತೆ ನಗರದ ಪ್ರಮುಖ ಸ್ಥಳಗಳಿಗೆ ತೆರಳಿ ವಿಡಿಯೋ ಮಾಡಿ ಅವರು ರೀಲ್ಸ್ ಮಾಡುತ್ತಿದ್ದರು. ಅಂತೆಯೇ ವಿಧಾನಸೌಧ ಬಳಿ ರೀಲ್ಸ್ ಮಾಡುವ ಸಲುವಾಗಿ ನೇಪಾಳಿಗಳ ಒಂದು ಗುಂಪು ಬಂದಿದೆ. ಅದೇ ವೇಳೆ ಇನ್ನೊಂದು ಗುಂಪು ಸಹ ಎದುರಾಳಿ ಗುಂಪು ಬಂದಿದೆ ಎಂದು ತಿಳಿದು ಅಲ್ಲಿಗೆ ತೆರಳಿದೆ. ಪರಸ್ಪರ ಮಾತುಕತೆ ನಡೆಸಿ ಕಬ್ಬನ್ ಪಾರ್ಕ್ ಬಳಿಗೆ ಎರಡು ಗುಂಪುಗಳು ಹೋಗಿದ್ದವು ಎಂದು ಡಿಸಿಪಿ ವಿವರಿಸಿದರು.

ಈ ಗಲಾಟೆ ಹಿನ್ನೆಲೆ ಮೊಬೈಲ್ ವಿಚಾರವಾಗಿದೆ. ತಿಂಗಳ ಹಿಂದೆ ಪರಸ್ಪರ ಮೊಬೈಲ್ ಕೊಡುವ ವಿಷಯವಾಗಿ ಘರ್ಷಣೆ ಮಾಡಿಕೊಂಡಿದ್ದರು. ಆಗ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಾಲ್ವರು ದಸ್ತಗಿರಿ ಆಗಿದ್ದರು. ನಮ್ಮ ಮೇಲೆ ದೂರು ಕೊಟ್ಟು ಅರೆಸ್ಟ್ ಮಾಡಿಸಿದ್ದೀರಿ ಎಂದು ಎದುರಾಳಿಗಳ ಮೇಲೆ ಸಿಟ್ಟಿತ್ತು. ಅಲ್ಲದೆ ಗಲಾಟೆ ನಡೆದ ದಿನ ವಿಧಾನಸೌಧ ಬಳಿಗೆ ಬರುವ ಮುನ್ನ ಜೆ.ಪಿ. ನಗರದಲ್ಲಿ ಸಹ ಜಗಳವಾಗಿತ್ತು. ಇನ್ನು ವಿಧಾನಸೌಧ ಬಳಿ ಗುರಾಯಿಸಿಕೊಂಡಿದ್ದರು. ಹೀಗೆ ಮೂರ್ನಾಲ್ಕು ಕಾರಣಗಳಿಂದ ಆರೋಪಿಗಳು ಗಲಾಟೆ ಮಾಡಿಕೊಂಡಿದ್ದರು ಎಂದು ಡಿಸಿಪಿ ಮಾಹಿತಿ ನೀಡಿದರು.

ಸಣ್ಣಪುಟ್ಟ ಕೆಲಸ: ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದಿದ್ದ ಈ ನೇಪಾಳಿಗಳು, ನಗರ ಹಾಗೂ ಹೊರ ವಲಯದ ಖಾಸಗಿ ಕಂಪನಿಗಳು ಹಾಗೂ ಹೋಟೆಲ್‌ಗಳಲ್ಲಿ ದುಡಿಯುತ್ತಿದ್ದರು. ಈಗ ರೀಲ್ಸ್ ಹುಚ್ಚಿಗೆ ಬಿದ್ದು ಗಲಾಟೆ ಮಾಡಿಕೊಂಡು ಕಾರ್ಮಿಕರು ಜೈಲು ಸೇರಿದ್ದಾರೆ ಎಂದು ತಿಳಿದು ಬಂದಿದೆ.