ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಭಾರತದಲ್ಲಿ ಕೇವಲ ಬ್ರಿಟಿಷರನ್ನು ಓಡಿಸಿದರೆ ಸಾಲದು, ಭಾರತದಲ್ಲಿ ಹೊಸದೊಂದು ಸಾಮಾಜಿಕ ವ್ಯವಸ್ಥೆ ನಿರ್ಮಿಸಲು ಮತ್ತೊಂದು ಕ್ರಾಂತಿ ಜರುಗಿಸಬೇಕು. ಯಾವ ಜಾತಿ ಧರ್ಮ ಇಲ್ಲದೇ ಸ್ವಾತಂತ್ರ್ಯಕ್ಕಾಗಿ ಜನರು ಒಂದಾಗಬೇಕು. ಮಾನವನಿಂದ ಮಾನವನ ಶೋಷಣೆ ಕೊನೆಗಾಣಿಸಿ ಸಮಾಜವಾದಿ ಭಾರತ ಕಟ್ಟಬೇಕು ಎನ್ನುವುದು ನೇತಾಜಿ ಕನಸಾಗಿತ್ತು ಎಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆ ಮುಖಂಡ ಶರಣು ಹೇರೂರ ಹೇಳಿದರು.ತಾಲೂಕಿನ ಹಲಕಟ್ಟಾ ಗ್ರಾಮದಲ್ಲಿ ನಡೆದ ದೇಶ ಕಂಡ ಅಪ್ರತಿಮ ಕ್ರಾಂತಿಕಾರಿ ಸ್ವಾತಂತ್ರ್ಯ ಹೊರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ ೧೨೭ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೇತಾಜಿ ಕನಸ್ಸಿನ ವಿರುದ್ಧವಾಗಿ ಇಂದು ನಮ್ಮನ್ನು ಆಳುತ್ತಿರುವ ಸರ್ಕಾರಗಳು ಸಾಗುತ್ತಿವೆ. ಪ್ರತಿ ವರ್ಷ ಉನ್ನತ ಶಿಕ್ಷಣದ ಶುಲ್ಕ ಹೆಚ್ಚಿಸಿ, ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ. ಅವೈಜ್ಞಾನಿಕ, ಅಂಧಕಾರ, ಕೋಮುವಾದ, ಮೂಡನಂಬಿಕೆ ವಿಚಾರಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಲಾಗುತ್ತಿದೆ. ಇನ್ನೊಂದೆಡೆ ಈ ದೇಶದ ಯುವಜನತೆ ಹಾಳುಮಾಡುವ ಉದ್ದೇಶದಿಂದ ಯಾವುದೇ ಅಡೆ ತಡೆ ಇಲ್ಲದೇ ಅಶ್ಲೀಲ ಸಿನಿಮಾ, ಸಾಹಿತ್ಯಗಳನ್ನು ಬಿಡಲಾಗುತ್ತಿದೆ. ಮತ್ತೆ ರೈತರ ಆತ್ಮಹತ್ಯೆಗಳು ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇಂತಹ ತಾರತಮ್ಯ ವ್ಯವಸ್ಥೆ ವಿರುದ್ಧ ರೈತರು, ವಿದ್ಯಾರ್ಥಿ, ಯುವಜನರು, ನೇತಾಜಿ ಆದರ್ಶದೊಂದಿಗೆ ಅವರು ಕಂಡಂತಹ ಸಮಾಜವಾದಿ ಭಾರತ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.
ಎಐಕೆಕೆಎಂಎಸ್ ರೈತ ಸಂಘಟನೆ ಮುಖಂಡ ಶಿವಕುಮಾರ ಆಂದೊಲಾ, ಎಐಡಿವೈಓ ಯುವ ಜನ ಸಂಘಟನೆ ಗೌತಮ ಪರತೂಕರ್ ಮಾತನಾಡಿದರು.ಜೈಭೀಮ ದಾಸರ್, ವೆಂಕಟೇಶ ದೇವದುರ್ಗ, ದತ್ತಾತ್ರೆಯ ಹುಡೇಕರ್, ಸಿದ್ದಾರ್ಥ ತಿಪ್ಪನೊರ, ಗ್ರಾಮಸ್ಥರಾದ ದತ್ತಾತ್ರೆಯ ಬುಕ್ಕಾ, ಈರಣ್ಣ ಚೆನ್ನೂರ, ಕರಣಪ್ಪ ಇಸಬಾ, ಮಹಾಂತೇಶ ಹುಳಗೊಳ, ವೀರೇಶ ನಾಲವಾರ, ಶಿವುಯೊಗಿ ಬುಳ್ಳಾ, ಭೀಮಾಶಂಕರ ಪರತೂಕರ್ ಇತರರು ಇದ್ದರು.