ವರ್ಷವೂ ಬರಕ್ಕೆ ತುತ್ತಾಗುವ ನೇತ್ರಾವತಿ ಈ ಬಾರಿ ಬತ್ತಿಲ್ಲ!

| Published : Apr 12 2024, 01:06 AM IST

ಸಾರಾಂಶ

೨೦೨೩ ರ ಡಿಸೆಂಬರ್ ಆರಂಭದಿಂದಲೇ ಅಣೆಕಟ್ಟನ್ನು ಕಾರ್ಯಾಚರಣೆಗೆ ಒಳಪಡಿಸಲಾಗಿದ್ದು, ಒಟ್ಟು ೪ ಮೀಟರ್ ಎತ್ತರದ ಗೇಟು ಅಳವಡಿಸಲಾಗಿದೆ. ಮೊದಲ ಎರಡುವರೆ ತಿಂಗಳಲ್ಲಿ ನೀರಿನ ಹರಿವು ಇದ್ದು ಗೇಟು ದಾಟಿ ನೀರು ಹೊರಗೆ ಹರಿಯುತ್ತಿತ್ತು. ಪ್ರಸಕ್ತ ನಾಲ್ಕು ಮೀಟರ್ ಗೇಟಿನ ಮಿತಿಯಲ್ಲಿ ನೀರಿನ ಸಂಗ್ರಹವಿದೆ. ಹೊರ ಹರಿವು ನಿಂತಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಎಲ್ಲೆಡೆ ನೀರ ನೆಲೆಗಳೆಲ್ಲಾ ಬತ್ತಿ ಹೋಗಿ ಬರದ ಕಾವು ಕಾಡುತ್ತಿದ್ದರೆ, ಕಳೆದ ವರ್ಷ ಬತ್ತಿ ಹೋಗಿದ್ದ ನೇತ್ರಾವತಿ ನದಿಯ ಒಡಲು ಈ ಬೇಸಿಗೆಯಲ್ಲಿ ಜಲರಾಶಿಯಿಂದ ತುಂಬಿದೆ. ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಲಾದ ಅಣೆಕಟ್ಟಿನಿಂದಾಗಿ ನಾಲ್ಕು ಮೀಟರ್ ಎತ್ತರದಲ್ಲಿ ಜಲ ರಾಶಿ ಸಂಗ್ರಹಗೊಂಡು ಉಪ್ಪಿನಂಗಡಿ ಪ್ರದೇಶದುದ್ದಕ್ಕೂ ಹಿನ್ನೀರು ಸಂಗ್ರಹಗೊಳ್ಳುವಂತಾಗಿ ನೀರಿನ ಕೊರತೆ ನೀಗಿಸಿದಂತಾಗಿದೆ.

ಕಳೆದ ವರ್ಷ ೨೦೨೩ ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಹರಿವು ನಿಂತು ಹೋಗಿ ಉಪ್ಪಿನಂಗಡಿ ಭಾಗದಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ನೇತ್ರಾವತಿ, ಮಳೆಗಾಲದಲ್ಲಿ ಕುಮಾರಧಾರೆ ಸಂಗಮಿಸಿದ ಬಳಿಕ ಮತ್ತೆ ಜೀವ ತಾಳಿ ಹರಿಯುತ್ತಿತ್ತು. ಆ ವೇಳೆ ಮಂಗಳೂರಿನ ಪರಿಸರದ ಪ್ರಿಯ ಸಂಘಟನೆಗಳು ಬತ್ತಿ ಹೋಗಿದ್ದ ನೇತ್ರಾವತಿ ನದಿಯ ಒಡಲಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿತ್ತು.

ನದಿ ಬತ್ತಿ ಹೋಗಲು ಎತ್ತಿನಹೊಳೆ ಯೋಜನೆಯೇ ಕಾರಣವೆಂದು ಆಪಾದಿಸಿ ಎತ್ತಿನಹೊಳೆ ಯೋಜನೆಯ ಜನಕರಾದ ರಾಜಕೀಯ ನಾಯಕರ ಮುಖವಾಡ ಧರಿಸಿ ಕ್ರಿಕೆಟ್ ಆಟ ಆಡಲಾಗಿತ್ತು.

ಅದೇ ವೇಳೆ ಬಂಟ್ವಾಳ ತಾಲೂಕು ವ್ಯಾಪ್ತಿಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಬಿಳಿಯೂರು ಎಂಬಲ್ಲಿ ೫೫ ಕೊಟಿ ರು.ಗೂ ಮಿಕ್ಕಿದ ವೆಚ್ಚದಲ್ಲಿ ನಿರ್ಮಿಸಲಾದ ಅಣೆಕಟ್ಟಿನ ಕೆಲಸ ಪೂರ್ಣಗೊಂಡು ಜೂನ್ ತಿಂಗಳಾರಂಭದಲ್ಲಿ ಪ್ರಾಯೋಗಿಕವಾಗಿ ಅಣೆಕಟ್ಟಿನ ಗೇಟು ಅಳವಡಿಸಲಾಯಿತು. ನೀರು ಸಂಗ್ರಹಣೆಗೊಳ್ಳುವ ಪ್ರದೇಶದ ನಿಖರತೆ ಗುರುತಿಸಲಾಗಿತ್ತು. ಪ್ರಾರಂಭಿಕ ಹಂತದಲ್ಲಿ ನೆಕ್ಕಿಲಾಡಿ ಗ್ರಾಮದವರೆಗೆ ಮಾತ್ರ ನೀರು ಸಂಗ್ರಹಣೆಗೊಳ್ಳಬಹುದೆಂಬ ನಿರೀಕ್ಷೆ ಹೊಂದಿದ್ದ ಈ ಯೋಜನೆ ನಿರೀಕ್ಷೆಯನ್ನು ಮೀರಿ ಒಟ್ಟು ೬ ಕಿ.ಮೀ. ವ್ಯಾಪ್ತಿಯಲ್ಲಿ ಹಿನ್ನೀರು ಸಂಗ್ರಹಣೆಗೊಂಡದ್ದು ಕಂಡುಬಂತು.

೨೦೨೩ ರ ಡಿಸೆಂಬರ್ ಆರಂಭದಿಂದಲೇ ಅಣೆಕಟ್ಟನ್ನು ಕಾರ್ಯಾಚರಣೆಗೆ ಒಳಪಡಿಸಲಾಗಿದ್ದು, ಒಟ್ಟು ೪ ಮೀಟರ್ ಎತ್ತರದ ಗೇಟು ಅಳವಡಿಸಲಾಗಿದೆ. ಮೊದಲ ಎರಡುವರೆ ತಿಂಗಳಲ್ಲಿ ನೀರಿನ ಹರಿವು ಇದ್ದು ಗೇಟು ದಾಟಿ ನೀರು ಹೊರಗೆ ಹರಿಯುತ್ತಿತ್ತು. ಪ್ರಸಕ್ತ ನಾಲ್ಕು ಮೀಟರ್ ಗೇಟಿನ ಮಿತಿಯಲ್ಲಿ ನೀರಿನ ಸಂಗ್ರಹವಿದೆ. ಹೊರ ಹರಿವು ನಿಂತಿದೆ.

ನದಿ ತಟದುದ್ದಕ್ಕೂ ಅಂತರ್ಜಲ ವೃದ್ಧಿ:

ನೇತ್ರಾವತಿ ನದಿಯಲ್ಲಿ ೬ ಕಿ ಮೀ ವ್ಯಾಪ್ತಿಯುದ್ದಕ್ಕೂ ಅಣೆಕಟ್ಟಿನ ಹಿನ್ನೀರು ಸಂಗ್ರಹಗೊಂಡ ಪರಿಣಾಮ ನದಿಯ ಈ ಭಾಗದ ಸುತ್ತಮುತ್ತಲಿನ ಪರಿಸರದಾದ್ಯಂತ ಅಂತರ್ಜಲ ವೃದ್ಧಿಸಲ್ಪಟ್ಟಿದೆ. ಏಳೆಂಟು ಕಿ.ಮೀ. ದೂರದ ಕೃಷಿ ಪ್ರದೇಶದಲ್ಲಿ ನೀರಿಲ್ಲದೆ ಸೊರಗಿದ್ದ ಕೊಳವೆ ಬಾವಿಗಳಲ್ಲಿ , ಕೆರೆ ಬಾವಿಗಳಲ್ಲಿ ಈ ಬಾರಿ ನೀರು ಯಥೇಚ್ಛ ಸಂಗ್ರಹಣೆಗೊಂಡು ಕೃಷಿಕರ ಮನದಲ್ಲಿ ಸಂತಸ ಮೂಡಿದೆ. ಎಲ್ಲೆಡೆ ನೀರಿಲ್ಲದೆ ಬವಣೆ ಪಡುವ ವ್ಯಥೆಯ ಕಥೆಗಳೇ ಕೇಳಿ ಬರುತ್ತಿರುವ ಸಂಧರ್ಭದಲ್ಲಿ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಈ ಮೂರು ತಾಲೂಕಿನ ಹಲವು ಗ್ರಾಮಗಳು ಜಲರಾಶಿಯ ಪ್ರಯೋಜನ ಪಡೆಯುತ್ತಿವೆ.

ಪ್ರಾಣಿಗಳಿಗೂ ವರದಾನ:

ಈ ಹಿಂದಿನ ಯಾವುದೇ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳದ ಕಾಡಾನೆಗಳು ಈ ಬಾರಿ ನೇತ್ರಾವತಿ ನದಿಯ ಅಂಚಿನಲ್ಲಿ ನಿರಂತರ ಕಾಣಿಸತೊಡಗಿವೆ. ಸುಡುವ ಬಿಸಿಲ ಝಳದ ನಡುವೆ ದಾಹ ತೀರಿಸಲು ನೇತ್ರಾವತಿ ಒಡಲಿನಲ್ಲಿ ಯಥೇಚ್ಛವಾಗಿರುವ ನೀರನ್ನು ಆಶ್ರಯಿಸಿ ಕಾಡಾನೆ ಸಹಿತ ಕಾಡು ಪ್ರಾಣಿಗಳು ಈ ಪ್ರದೇಶದಲ್ಲಿ ಆಗಾಗ ಕಾಣಲಾರಂಭಿಸಿದೆ. ಕೆಲ ದಿನಗಳಿಂದ ಮೊಗ್ರು, ಬಂದಾರು ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕಾಡಾನೆ ನದಿ ನೀರಿನಲ್ಲಿ ನೀರಾಟವಾಡುತ್ತಿದ್ದ ದೃಶ್ಯಗಳನ್ನು ಇಲ್ಲಿ ಸ್ಮರಿಸಬಹುದಾಗಿದೆ. ನೇತ್ರಾವತಿ ನದಿಯ ಉಪ ನದಿಗಳು ಬತ್ತುತ್ತಿದ್ದರೂ ನೇತ್ರಾವತಿ ಈ ಭಾಗದಲ್ಲಿ ತನ್ನ ಒಡಲಿನಲ್ಲಿ ಮೈ ತುಂಬಾ ಜಲಸಿರಿಯನ್ನು ಹೊಂದಿರುವುದು ಕಾಡುಪ್ರಾಣಿಗಳಿಗೂ ಅನುಕೂಲ ಕಲ್ಪಿಸಿದೆ.

ಉದ್ಭವಲಿಂಗಕ್ಕೆ ಪೂಜೆ:

ಶತಮಾನಗಳಿಂದ ಪೂಜಿಸಿಕೊಂಡು ಬರಲಾಗುತ್ತಿದ್ದ ಉಪ್ಪಿನಂಗಡಿಯ ನೇತ್ರಾವತಿ ನದಿ ಗರ್ಭದಲ್ಲಿರುವ ಉದ್ಭವಲಿಂಗಕ್ಕೆ ಈ ಬಾರಿ ಹಿನ್ನೀರು ನದಿಯಲ್ಲಿ ಆವರಿಸಿಕೊಂಡಿರುವ ಕಾರಣ ನೇರವಾಗಿ ಪೂಜೆ ಸಲ್ಲಿಸಲಾಗಲಿಲ್ಲ. ಆದರೆ ಜಲಾಧಿವಾಸ ಸ್ಥಿತಿಯಲ್ಲಿಯೇ ಮಳೆಗಾಲದಲ್ಲಿ ಸಲ್ಲಿಸಲಾಗುತ್ತಿದ್ದ ಪೂಜೆಯ ಕ್ರಮವನ್ನೇ ಈ ಬಾರಿ ವರ್ಷದುದ್ದಕ್ಕೂ ಅನುಷ್ಠಾನಿಸಲಾಗಿದೆ.

ಅಂತರ್ಜಲವೃದ್ಧಿಯ ಸಲುವಾಗಿಯೇ ನಿರ್ಮಾಣವಾಗಿರುವ ಬಿಳಿಯೂರು ಅಣೆಕಟ್ಟಿನಲ್ಲಿ ಪ್ರಸಕ್ತ ನಾಲ್ಕು ಮೀಟರ್ ಎತ್ತರದಷ್ಟು ನೀರು ಸಂಗ್ರಹವಾಗಿದೆ. ಮಂಗಳೂರು ನಗರಕ್ಕೆ ನೀರು ಸರಬರಾಜಿಗೆ ಸಂಬಂಧಿಸಿ ನೀರಿನ ಕೊರತೆ ನೀಗಿಸಲು ಇಲ್ಲಿನ ಅಣೆಕಟ್ಟಿನ ನೀರು ಪಡೆಯುವ ಅವಶ್ಯಕತೆ ಈ ವರೆಗೆ ಬಂದಿಲ್ಲ. ಆ ಬಗ್ಗೆ ಸರ್ಕಾರದಿಂದ ಆದೇಶ ಬಂದರೆ ಮಾತ್ರ ಬಿಳಿಯೂರು ಅಣೆಕಟ್ಟಿನಿಂದ ನೀರನ್ನು ಹೊರ ಬಿಡಬೇಕಾಗುತ್ತದೆ ಎನ್ನುತ್ತಾರೆ ಅಣೆಕಟ್ಟು ಮೇಲ್ವಿಚಾರಕ ಅವಿನಾಶ್.ಕಿಂಡಿ ಅಣೆಕಟ್ಟಿನಂತಹ ಯೋಜನೆ ಅನುಷ್ಠಾನವಾದರೆ ಯಾವ ರೀತಿ ಪ್ರಯೋಜನಕಾರಿ ಯಾಗಬಲ್ಲದು ಎನ್ನುವುದಕ್ಕೆ ಬಿಳಿಯೂರು ಅಣೆಕಟ್ಟೇ ಸಾಕ್ಷಿ. ಎರಡು ತಾಲೂಕುಗಳ ಹಲವು ಗ್ರಾಮಗಳಿಗೆ ಸಂಪರ್ಕ ಸೇತುವೆಯಾಗಿ, ಅಂತರ್ಜಲ ವೃದ್ಧಿಗೆ ಕಾರಣವಾಗಿರುವ ಈ ಅಣೆಕಟ್ಟು ಕುಡಿಯುವ ನೀರಿನ ಕೊರತೆಯನ್ನು ನೀಗಿಸಿದ್ದು ಮಾತ್ರವಲ್ಲದೆ ಕೃಷಿ ಕಾರ್ಯಚಟುವಟಿಕೆಗೂ ಅನುಕೂಲಕರವಾಗಿದೆ ಎಂದು ರಾಮಚಂದ್ರ ಮಣಿಯಾಣಿ ಅಭಿಪ್ರಾಯಪಟ್ಟರು. ನಿತ್ಯ ನದಿಯ ಹಿನ್ನೀರಿನಲ್ಲಿ ತೆಪ್ಪದಲ್ಲಿ ಮೀನುಗಾರಿಕೆ ನಡೆಸುತ್ತಿರುವುದರಿಂದ ಮೀನುಗಳ ಸಂತತಿ ನಾಶವಾಗುತ್ತಿದೆ. ಇದು ನೀರಿನ ಸ್ವಚ್ಚತೆಗೆ ಸಮಸ್ಯೆ ತಂದೊಡ್ಡಬಲ್ಲದು . ಈ ದಿಶೆಯಲ್ಲಿ ಸ್ಥಳೀಯಾಡಳಿತ ಕನಿಷ್ಠ ಎರಡು ವರ್ಷಗಳ ಕಾಲ ಮೀನು ಹಿಡಿಯುವುದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಹಾಸ ಹೆಗ್ಡೆ ಹೇಳುತ್ತಾರೆ.