ಕುಮಾರ್ ಬಂಗಾರಪ್ಪ ಅಲಕ್ಷಿಸಿದ್ರೆ ಬಿಜೆಪಿಗೆ ಸೋಲು: ಎಂ.ಡಿ.ಉಮೇಶ್

| Published : Apr 12 2024, 01:06 AM IST

ಕುಮಾರ್ ಬಂಗಾರಪ್ಪ ಅಲಕ್ಷಿಸಿದ್ರೆ ಬಿಜೆಪಿಗೆ ಸೋಲು: ಎಂ.ಡಿ.ಉಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಸೋಲಿಗೆ ಕಾರಣವಾದ ನಮೋ ವೇದಿಕೆ ಕಾರ್ಯಕರ್ತರನ್ನು ಹಾಗೂ ಅದರ ಮುಖಂಡರನ್ನು, ಬಿಜೆಪಿ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಎಂ.ಡಿ.ಉಮೇಶ್ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಆನವಟ್ಟಿ

ಏಳು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ವಿರೋಧಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಅವರ ಸೋಲಿಗೆ ಕಾರಣರಾದ ನಮೋ ವೇದಿಕೆ ಕಾರ್ಯಕರ್ತರನ್ನು ಹಾಗೂ ಅದರ ಮುಖಂಡರನ್ನು, ಬಿಜೆಪಿ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಮಾಜಿ ಪುರಸಭಾಧ್ಯಕ್ಷ ಎಂ.ಡಿ.ಉಮೇಶ್ ಆಗ್ರಹಿಸಿದರು.

ಬುಧವಾರ ಆನವಟ್ಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷವಾದರೂ ಕೂಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕೆಲವರು ಬಂಡಾಯದ ಬಾವುಟ ಹಾರಿಸಿ, ಸ್ವಾರ್ಥ ಸಾಧನೆಗಾಗಿ ನಮೋ ವೇದಿಕೆ ಸೃಷ್ಠಿಸಿ, ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾದ ನಮೋ ವೇದಿಕೆಯ ಮುಂಚೂಣಿ ಮುಖಂಡರಿಗೆ, ಬಿಜೆಪಿ ಪಕ್ಷದ ಜಿಲ್ಲಾ ಹಂತದಿಂದ ಬೂತ್ ಮಟ್ಟದವರೆಗೆ ವಿವಿಧ ಅಧಿಕಾರಗಳನ್ನು ನೀಡಿ, ಲೋಕಸಭಾ ಚುನಾವಣೆ ಮಾಡಲು ಹೊರಟಿರುವ ಬಿಜೆಪಿ ಪಕ್ಷದ ನಾಯಕರ ನಡೆಯನ್ನು ಕಾರ್ಯಕರ್ತರು ಖಂಡಿಸಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಚಂದ್ರಗುತ್ತಿ, ಉಳುವಿ, ಸೊರಬ, ತಾಳಗುಪ್ಪ ಹಾಗೂ ಆನವಟ್ಟಿ ಭಾಗದ ಮಹಾ ಶಕ್ತಿಕೇಂದ್ರಗಳಲ್ಲಿ ಸಮಾನ ಮನಸ್ಕರರ ಸಭೆ ನಡೆಸಲಾಗಿದ್ದು. ನಮೋ ವೇಧಿಕೆಯವರನ್ನು ಮುಂದಿಟ್ಟುಕೊಂಡು ಮತ ಕೇಳಲು ಮುಂದಾದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮುಜುಗರಕ್ಕೀಡಾಗಬೇಕಾಗುತ್ತದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ ಎಂದರು.

ಮಲ್ಲಿಕಾರ್ಜುನ ವೃತ್ತಿಕೊಪ್ಪ ಮಾತನಾಡಿ, ಸೊರಬ ತಾಲೂಕಿನಿಂದ ಬೈಂದೂರು ವರೆಗೂ ಒಬಿಸಿ ಮತದಾರರು ಕುಮಾರ್ ಬಂಗಾರಪ್ಪ ಅವರನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರ ಸತತ ಪ್ರಯತ್ನದಿಂದಾಗಿ ಸೊರಬ, ಸಾಗರ, ಹೊಸನಗರ, ತೀರ್ಥಹಳ್ಳಿ, ಬೈಂದೂರು ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಅತಿ ಹೆಚ್ಚಿನ ಮತ ಬರಲು ಕಾರಣವಾಯಿತು. ಈಗಲೂ ಸಹ ಈ ಭಾಗಗಳ ಒಬಿಸಿ ಮತದಾರರು ಬಿಜೆಪಿ ಪಕ್ಷ, ಕುಮಾರ್ ಬಂಗಾರಪ್ಪ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದರ ಮೇಲೆ ಮತ ನಿರ್ಣಯ ಮಾಡಲು ಕಾಯುತ್ತಿದ್ದಾರೆ. ಒಂದು ವೇಳೆ ಪಕ್ಷದಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಕಡೆಗಣಿಸಿದರೆ ಪಕ್ಷದ ಅಭ್ಯರ್ಥಿಯ ಸೋಲು ಖಚಿತ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಗುರುಕುಮಾರ್ ಪಾಟೀಲ್, ಚನ್ನಬಸಪ್ಪ ಗೌಡ ಕೋಟಿಪುರ, ಹನುಮಂತಪ್ಪ ಭಾರಂಗಿ, ಅಭಿಷೇಕ್ ಗೌಡ, ಗುರುಮೂರ್ತಿ, ಪ್ರವೀಣ್ ನೇರಲಿಗಿ, ಲಿಂಗರಾಜ ಯಲಿವಾಳ, ಪ್ರಕಾಶ್, ಶಿವಾನಂದ ಕುಬಟೂರು ಇತರರಿದ್ದರು.