ಸಮೀಕ್ಷೆ ಕಾರ್ಯಕ್ಕೆ ಅಗತ್ಯವಾದ ಆನ್‌ಲೈನ್ ಸೌಲಭ್ಯ ಇಲ್ಲದ ಕಾರಣ ಗಣತಿದಾರರಿಗೆ ತೊಂದರೆ ಉಂಟಾಗುತ್ತಿದೆ.
ಕಂಪ್ಲಿ: ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ಭಾನುವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಸಮೀಕ್ಷೆ ಕಾರ್ಯಕ್ಕೆ ಅಗತ್ಯವಾದ ಆನ್‌ಲೈನ್ ಸೌಲಭ್ಯ ಇಲ್ಲದ ಕಾರಣ ಗಣತಿದಾರರಿಗೆ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮದಲ್ಲಿ ಹಲವು ವರ್ಷಗಳಿಂದಲೇ ಸರಿಯಾದ ನೆಟ್‌ವರ್ಕ್ ಸೌಲಭ್ಯವಿಲ್ಲ. ಕಳೆದ ಐದು ವರ್ಷಗಳಿಂದಲೂ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಇನ್ನೂ ಪರಿಹಾರ ದೊರೆಯಲಿಲ್ಲ. ಈಗ ಸಮೀಕ್ಷೆಗೆ ಕೂಡ ನೆಟ್‌ವರ್ಕ್ ಹುಡುಕಿಕೊಂಡು ದೂರದ ಊರಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥ ಹನುಮಯ್ಯಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಮದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆಯೇ ತಹಸೀಲ್ದಾರ್ ಜೂಗಲ ಮಂಜುನಾಯಕ ತಕ್ಷಣ ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಅವರು ಗ್ರಾಮಸ್ಥರನ್ನು ಸಮಾಧಾನ ಪಡಿಸಿ, ಸಮೀಕ್ಷೆಯಿಂದ ಯಾರೂ ಹೊರಗುಳಿಯಬಾರದು. ಎಲ್ಲರೂ ತಾಳ್ಮೆಯಿಂದ ವರ್ತಿಸಬೇಕು. ಸಮೀಕ್ಷಾ ಕಾರ್ಯಕ್ಕೆ ತೊಂದರೆ ಆಗದಂತೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಗ್ರಾಮಕ್ಕೆ ಶೀಘ್ರದಲ್ಲೇ ಉತ್ತಮ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವಂತೆ ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ತಹಸೀಲ್ದಾರರ ಭರವಸೆಯನ್ನು ಗ್ರಾಮಸ್ಥರು ಒಪ್ಪಿಕೊಂಡು, ಸಮೀಕ್ಷೆಗೆ ಸಹಕರಿಸುವುದಾಗಿ ಹೇಳಿದರು.
ಆರ್‌ಐ ವೈ.ಎಂ. ಜಗದೀಶ, ಗಣತಿದಾರ ಮಲ್ಲಿಕಾರ್ಜುನ, ವಿಎ ಅಬ್ದುಲ್, ಗ್ರಾಮಸ್ಥರಾದ ಹನುಮಯ್ಯಗೌಡ, ಮಾಯಪ್ಪ, ಗುರು, ತಿಮ್ಮಪ್ಪ, ಗುರಪ್ಪ ಬಾದನಟ್ಟಿ, ಹನುಮಯ್ಯ, ಗುರಿಕಾರ ಹನುಮಂತಪ್ಪ ಸೇರಿದಂತೆ ಅನೇಕರಿದ್ದರು.