ಮೆದುಳು, ಬೆನ್ನುಹುರಿ ಹಾಗೂ ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳ ತಪಾಸಣೆ ಮತ್ತು ಚಿಕಿತ್ಸೆಗೆ ಜಿಲ್ಲೆಯ ಜನರು ದೂರದ ಬೆಂಗಳೂರಿನಂತಹ ಮಹಾನಗರಗಳಿಗೆ ಅಲೆಯುವ ಅಗತ್ಯವಿಲ್ಲ. ನಗರದ ಶಿವಾಜಿನಗರದಲ್ಲಿರುವ ಪಿ.ಎಂ. ಹೆಗ್ಗೇರಿ ಆಸ್ಪತ್ರೆಯಲ್ಲಿ ಬೆಂಗಳೂರಿನ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯ ಸಹಯೋಗದಲ್ಲಿ ಮಾಸಿಕ ನ್ಯೂರೋಸರ್ಜರಿ ಹೊರರೋಗಿ ವಿಭಾಗ (ಒಪಿಡಿ) ಸೇವೆ ಆರಂಭಿಸಲಾಗಿದೆ ಎಂದು ಸ್ಪರ್ಶ್ ಆಸ್ಪತ್ರೆಯ ನ್ಯೂರೋಸರ್ಜನ್ ಡಾ. ಅಭಿನಂದನ್ ಗಂಗಣ್ಣನವರ ತಿಳಿಸಿದರು.

ಹಾವೇರಿ: ಮೆದುಳು, ಬೆನ್ನುಹುರಿ ಹಾಗೂ ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳ ತಪಾಸಣೆ ಮತ್ತು ಚಿಕಿತ್ಸೆಗೆ ಜಿಲ್ಲೆಯ ಜನರು ದೂರದ ಬೆಂಗಳೂರಿನಂತಹ ಮಹಾನಗರಗಳಿಗೆ ಅಲೆಯುವ ಅಗತ್ಯವಿಲ್ಲ. ನಗರದ ಶಿವಾಜಿನಗರದಲ್ಲಿರುವ ಪಿ.ಎಂ. ಹೆಗ್ಗೇರಿ ಆಸ್ಪತ್ರೆಯಲ್ಲಿ ಬೆಂಗಳೂರಿನ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯ ಸಹಯೋಗದಲ್ಲಿ ಮಾಸಿಕ ನ್ಯೂರೋಸರ್ಜರಿ ಹೊರರೋಗಿ ವಿಭಾಗ (ಒಪಿಡಿ) ಸೇವೆ ಆರಂಭಿಸಲಾಗಿದೆ ಎಂದು ಸ್ಪರ್ಶ್ ಆಸ್ಪತ್ರೆಯ ನ್ಯೂರೋಸರ್ಜನ್ ಡಾ. ಅಭಿನಂದನ್ ಗಂಗಣ್ಣನವರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳ ಮೂರನೇ ಗುರುವಾರದಂದು ಪಿ.ಎಂ. ಹೆಗ್ಗೇರಿ ಆಸ್ಪತ್ರೆಯಲ್ಲಿ ವಿಶೇಷ ಸಮಾಲೋಚನೆ ನಡೆಸಲಾಗುವುದು. ಮೆದುಳು ಮತ್ತು ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆಗಳು ವ್ಯಕ್ತಿಯ ಆರೋಗ್ಯದ ಜತೆಗೆ ಅವರ ಸ್ವಾವಲಂಬಿ ಜೀವನದ ಮೇಲೂ ಪರಿಣಾಮ ಬೀರುತ್ತವೆ. ನಿರಂತರ ತಲೆನೋವು, ದೀರ್ಘಕಾಲದ ಬೆನ್ನುನೋವು, ನರಗಳ ಒತ್ತಡ, ದೈಹಿಕ ದೌರ್ಬಲ್ಯ, ಕೈಕಾಲು ಮರಗಟ್ಟುವಿಕೆ, ನಡೆಯಲು ತೊಂದರೆ, ಮೆದುಳಿನ ಗಡ್ಡೆ ಹಾಗೂ ಅಪಘಾತದ ನಂತರ ಕಾಣಿಸಿಕೊಳ್ಳುವ ನರಮಂಡಲದ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಸೂಕ್ತ ಮಾರ್ಗದರ್ಶನ ದೊರೆಯಲಿದೆ ಎಂದರು.

ನ್ಯೂರೋಲಾಜಿಕಲ್ ಮತ್ತು ಬೆನ್ನುಹುರಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ. ನಿರ್ಲಕ್ಷ್ಯದಿಂದ ಸಮಸ್ಯೆಗಳು ಉಲ್ಬಣಗೊಂಡು ದೈನಂದಿನ ಚಟುವಟಿಕೆಗಳಿಗೂ ತೊಂದರೆಯಾಗಬಹುದು. ಹೀಗಾಗಿ ಲಕ್ಷಣಗಳು ಕಂಡುಬಂದ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಹಾವೇರಿಯಲ್ಲಿಯೇ ನಿಯಮಿತವಾಗಿ ಸಮಾಲೋಚನೆ ಲಭ್ಯವಾಗುವುದರಿಂದ ರೋಗಿಗಳಿಗೆ ಪ್ರಯಾಣದ ಸಮಯ ಮತ್ತು ವೆಚ್ಚ ಉಳಿತಾಯವಾಗಲಿದೆ. ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಪಿ.ಎಂ. ಹೆಗ್ಗೇರಿ ಆಸ್ಪತ್ರೆಯ ನಿರ್ದೇಶಕ ಡಾ. ಪ್ರಮೋದ್ ಹೆಗ್ಗೇರಿ ಮಾತನಾಡಿ, ಹಾವೇರಿ ಮತ್ತು ಸುತ್ತಮುತ್ತಲಿನ ಜನರಿಗೆ ಆಧುನಿಕ ವೈದ್ಯಕೀಯ ಸೇವೆಗಳನ್ನು ಸ್ಥಳೀಯವಾಗಿಯೇ ಒದಗಿಸುವ ಉದ್ದೇಶದಿಂದ ಸ್ಪರ್ಶ್ ಆಸ್ಪತ್ರೆಯೊಂದಿಗೆ ಸಹಯೋಗ ಮಾಡಿಕೊಳ್ಳಲಾಗಿದೆ. ನ್ಯೂರೋಸರ್ಜರಿ ಸೇರಿದಂತೆ ವಿಶೇಷ ಚಿಕಿತ್ಸೆಗಳಿಗಾಗಿ ದೂರದ ನಗರಗಳಿಗೆ ತೆರಳುವ ಅನಿವಾರ್ಯತೆ ತಪ್ಪಿಸುವುದು ನಮ್ಮ ಉದ್ದೇಶವಾಗಿದೆ. ತಜ್ಞ ವೈದ್ಯರ ಸಮಾಲೋಚನೆಯಿಂದ ರೋಗಿಗಳಿಗೆ ಆರಂಭಿಕ ತಪಾಸಣೆ, ಸೂಕ್ತ ಚಿಕಿತ್ಸಾ ಮಾರ್ಗದರ್ಶನ ಹಾಗೂ ಅಗತ್ಯವಿದ್ದಲ್ಲಿ ಮುಂದಿನ ಚಿಕಿತ್ಸೆಗೆ ನೆರವಾಗಲಿದೆ. ಸಾರ್ವಜನಿಕರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಸ್ಪರ್ಶ್ ಆಸ್ಪತ್ರೆಯು ಮೆದುಳು ಮತ್ತು ಬೆನ್ನುಹುರಿ ಶಸ್ತ್ರಚಿಕಿತ್ಸೆ, ಸ್ಟ್ರೋಕ್ ನಿರ್ವಹಣೆ, ನರಮಂಡಲದ ಕಾಯಿಲೆಗಳು ಸೇರಿದಂತೆ ವಿವಿಧ ನ್ಯೂರೋಸೈನ್ಸ್ ಸೇವೆಗಳನ್ನು ಒದಗಿಸುತ್ತಿದೆ. ಪಿ.ಎಂ. ಹೆಗ್ಗೇರಿ ಆಸ್ಪತ್ರೆಯಲ್ಲಿಯೂ ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಆಧುನಿಕ ವೈದ್ಯಕೀಯ ಉಪಕರಣಗಳು ಹಾಗೂ 24 ಗಂಟೆಗಳ ತುರ್ತು ಸೇವೆ ಲಭ್ಯವಿದೆ. ಪ್ರತಿ ತಿಂಗಳ ಮೂರನೇ ಗುರುವಾರ ಹಾವೇರಿಯ ಪಿ.ಎಂ. ಹೆಗ್ಗೇರಿ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರು ನ್ಯೂರೋಸರ್ಜರಿ ತಜ್ಞರ ಸಮಾಲೋಚನೆ ಪಡೆಯಬಹುದು ಎಂದು ತಿಳಿಸಿದರು.

ಸ್ಪರ್ಶ ಆಸ್ಪತ್ರೆ ಸಿಬ್ಬಂದಿ ರಾಜೇಂದ್ರ, ಮಂಜುನಾಥ ಇತರರು ಇದ್ದರು.