ದಾವಣಗೆರೆ ಹೊರ ವಲಯದ ಕರೂರು ಪ್ರದೇಶದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಹೊರ ವಲಯದ ಕರೂರು ಪ್ರದೇಶದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.

ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯ ನಂತರ ಸಭೆಯ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿ, ಕರೂರು ಪ್ರದೇಶದಲ್ಲಿ ಸುಮಾರು 200 ಎಕರೆ ಜಾಗವನ್ನು ಗುರುತಿಸಿದ್ದು, ಅಲ್ಲಿ ಹೊಸ ಲೇಔಟ್‌ ನಿರ್ಮಿಸಲಾಗುವುದು ಎಂದರು.

ಬಡವರು, ಮಧ್ಯಮ ವರ್ಗದವರಿಗೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ಕರೂರು ಪ್ರದೇಶದ ಲೇಔಟ್ ಅಭಿವೃದ್ಧಿಪಡಿಸಲಾಗುವುದು. ಪ್ರಾಧಿಕಾರದಿಂದ ದಾವಣಗೆರೆ-ಹರಿಹರದಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ನಡೆದ ದೂಡಾ ಸಭೆಯಲ್ಲಿ ದಾವಣಗೆರೆ-ಹರಿಹರ ನಗರಗಳ ಸಮಗ್ರ ಅಭಿವೃದ್ಧಿ, ಮೂಲ ಸೌಕರ್ಯಗಳ ಸುಧಾರಣೆ ಹಾಗೂ ಸಾರ್ವಜನಿಕರ ಅಗತ್ಯತೆಗಳಿಗೆ ಅನುಗುಣವಾಗಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆಯಾಯಿತು.

ಜಿಲ್ಲಾ ಕೇಂದ್ರದ ವಿವಿಧ ಭಾಗಗಳ ಅಗತ್ಯತೆಗಳನ್ನು ಗುರುತಿಸಿ, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವುದು, ಕೈಗೊಂಡಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವದಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳಿಂದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಶಾಸಕ ಸಮರ್ಥ ಶಾಮನೂರು ಮಾಹಿತಿ ಪಡೆದರು.

ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ಮೂಲಕ ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಭಿವೃದ್ಧಿ ಕಾಮಗಾರಿಗಳ ಅನುಷ್ಟಾನದಲ್ಲಿ ಯಾವುದೇ ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಂಡು, ಕಾಮಗಾರಿಗಳ ಗುಣಮಟ್ಟದ ಮೇಲೂ ವಿಶೇಷ ಗಮನ ಹರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಎಚ್.ಟಿ.ಶೇಖರ, ದೂಡಾ ಆಯುಕ್ತರಾದ ರೇಣುಕಾ, ಪಾಲಿಕೆ ಆಯುಕ್ತ ಡಾ.ಮಹಾಂತೇಶ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿದ್ದರು.

ಮತ್ತೆ ಶಾಸಕ ಹರೀಶ್‌ ವಿರುದ್ಧ ಹರಿಹಾಯ್ದ ಸಚಿವ ಎಸ್ಸೆಸ್ಸೆಂ

ದಾವಣಗೆರೆ: ಅವನಿಗೆ ಕೆಲಸ ಇಲ್ಲ ಅಂದ್ರೆ, ನನಗೆ ಕೆಲಸ ಇಲ್ಲವಾ? ಫಸ್ಟ್ ಆಫ್ ಆಲ್ ರೈತರನ್ನು ದಿಕ್ಕು ತಪ್ಪಿಸದೇ, ಕರೆಕ್ಟ್ ಆಗಿ ಏನಿದೆ ಅಂತಾ ವಾಸ್ತವವನ್ನು ಹೇಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪರೋಕ್ಷವಾಗಿ ಹರಿಹರ ಶಾಸಕ ಬಿ.ಪಿ.ಹರೀಶ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಏನು ಪ್ರತಿಭಟನೆ ಮಾಡುತ್ತಾರೆ? ಕರೆಕ್ಟ್ ಆಗಿ ಏನಿದೆ ವಾಸ್ತವ ವಿಚಾರ ರೈತರಿಗೆ ತಿಳಿಸುವ ಕೆಲಸ ಮಾಡಲಿ ಎಂದರು.

ಭದ್ರಾ ಡ್ಯಾಂನ ಎಡ ಮತ್ತು ಬಲ ದಂಡೆ ಅಚ್ಚುಕಟ್ಟು ರೈತರು ಕುಳಿತು ಮಾತನಾಡಿಯೆಂದು ಭದ್ರಾ ಕಾಡಾ ಸಮಿತಿ ಸಭೆಯಲ್ಲಿ ಹೇಳಿದ್ದೇನೆ. ಆ ಸಭೆಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ನೀರಾವರಿ ತಜ್ಞ ಪ್ರೊ.ಸಿ.ನರಸಿಂಹಪ್ಪ ಸೇರಿದಂತೆ ಎಲ್ಲಾ ಶಾಸಕರೂ ಭಾಗವಹಿಸಿದ್ದು, ಅಂದಿನ ಸಭೆಯಲ್ಲಿ ಏನೂ ಮಾತನಾಡಲಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು. ಎಲ್ಲಾ ಕುಂದು ಕೊರತೆ ಪ್ರಾಕ್ಟಿಕಲ್ ಆಗಿ ಸಾಲ್ವ್ ಮಾಡಿ ಹೋಗಬೇಕು. ಅದನ್ನು ಬಿಟ್ಟು ಮಂತ್ರಿಯನ್ನು ಕೇಳಿ ಅಂತಾ ಹೇಳುವುದು ಶಾಸಕನ ಕೆಲಸವಲ್ಲ. ಎಲ್ಲರೂ ಸೇರಿ, ಜೊತೆಗೆ ಕುಳಿತು ಮಾತನಾಡಿ, ಕೆಲಸ ಮಾಡಬೇಕು. ಎಲ್ಲರಿಗೂ ಬಾಯಿ ಇದೆ. ನಾಲಿಗೆ ಇದೆಯಲ್ಲ. ಆದರೆ, ನಾಲಿಗೆಗೆ ಎಲುಬು ಇಲ್ಲ ಎಂದು ಅವರು ಹರಿಹಾಯ್ದರು.

ಗಣೇಶ ಹಬ್ಬದಲ್ಲಿ ಡಿಜೆ ಅನುಮತಿ ನೀಡುವ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದಾರೆ. ಡಿಜೆ ಬಗ್ಗೆ ಪೊಲೀಸ್ ಇಲಾಖೆಯವರೇ ಒಂದು ಹೇಳುತ್ತಾರೆ. ಜಿಲ್ಲಾಡಳಿತವೇ ಒಂದು ರೀತಿ ಹೇಳುತ್ತಿದೆ. ನಾಳೆ ಅಥವಾ ನಾಡಿದ್ದು ಈ ಬಗ್ಗೆ ಸಭೆ ಮಾಡಿ, ಕೂಲಂಕುಷವಾಗಿ ಪರಿಶೀಲಿಸುತ್ತೇವೆ ಎಂದು ಎಸ್ಸೆಸ್ ಮಲ್ಲಿಕಾರ್ಜುನ ತಿಳಿಸಿದರು.

ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮುಖಂಡರಾದ ಬೂದಾಳ್ ಬಾಬು, ಎ.ಬಿ.ರಹೀಂ ಸಾಬ್‌, ಎ.ನಾಗರಾಜ ಇತರರು ಇದ್ದರು.