ಹೊಸ ಆಟೋ ನೋಂದಣಿ ಸ್ಥಗಿತ, ಪರಿಶೀಲಿಸಿ ಕ್ರಮ

| Published : Sep 26 2024, 10:36 AM IST

ಸಾರಾಂಶ

ಆಟೋ ರಿಕ್ಷಾಗಳಲ್ಲಿ ಮಿತಿಗಿಂತ ಹೆಚ್ಚಾಗಿ ಶಾಲಾ ಮಕ್ಕಳನ್ನು‌ ಕರೆದೊಯ್ಯುವ ಆಟೋ ಚಾಲಕರ ಚಾಲನಾ ಪರವಾನಗಿ ರದ್ದುಪಡಿಸಲು ಕ್ರಮ‌ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಆಟೋ ರಿಕ್ಷಾಗಳಲ್ಲಿ ಮಿತಿಗಿಂತ ಹೆಚ್ಚಾಗಿ ಶಾಲಾ ಮಕ್ಕಳನ್ನು‌ ಕರೆದೊಯ್ಯುವ ಆಟೋ ಚಾಲಕರ ಚಾಲನಾ ಪರವಾನಗಿ ರದ್ದುಪಡಿಸಲು ಕ್ರಮ‌ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ‌ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದಿನ‌ ತಿಂಗಳಿಂದ ನಗರದ ಎಲ್ಲ‌ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಲಾಗುವುದು. ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಹಾಗೂ ಪೊಲೀಸ್‌ ಇಲಾಖೆ ವತಿಯಿಂದ ಆಟೋ ರಿಕ್ಷಾ ಅಸೋಶಿಯೇಷನ್‌ ಮುಖಂಡರೊಂದಿಗೆ ಸಭೆ ಜರುಗಿಸಲು ಸೂಚಿಸಿದರು.ನಗರದಲ್ಲಿ ಈಗಾಗಲೇ ಆಟೋ ರಿಕ್ಷಾಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೊಸ ಆಟೋ ರಿಕ್ಷಾಗಳ ನೋಂದಣಿ ಕಾರ್ಯ ಸ್ಥಗಿತಗೊಳಿಸುವ ಕುರಿತು ಆಟೋ‌ ಅಸೋಷಿಯೇಷನ್‌ ಮುಖಂಡರ ಮನವಿ ಕುರಿತು ಮಾತನಾಡಿದ ಅವರು, ಈ ಕುರಿತು ಪರಿಶೀಲಿಸಿ ಶೀಘ್ರವೇ ಕ್ರಮ‌ ಜರುಗಿಸಲಾಗುವುದು ಎಂದರು. ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗ ಹಾಗೂ ಲೋಕೋಪಯೋಗಿ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ಜರುಗಿಸಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತ ಸಂಭವಿಸುವ ಸ್ಥಳಗಳ ಹಾಗೂ ಬ್ಲಾಕ್ ಸ್ಪಾಟ್‌ಗಳ ವರದಿ ನೀಡಲು ಸೂಚಿಸಿದ ಅವರು, ಬೆಳಗಾವಿ‌ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವ ಕುರಿತು ಖಾತರಿಪಡಿಸಿಕೊಳ್ಳಬೇಕು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ವಾಹನಗಳ ವೇಗ ನಿಯಂತ್ರಿಸಲು ವೇಗ ನಿಯಂತ್ರಣ ಅಳವಡಿಸಬೇಕು ಎಂದರು.ರಸ್ತೆಯಲ್ಲಿನ ಗುಂಡಿಗಳ ದುರಸ್ತಿಗೆ ಕೂಡಲೇ‌ ಕ್ರಮ‌ ವಹಿಸಬೇಕು. ಈ ಸಂಬಂಧ ಸಂಬಂಧಿಸಿದ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಸುವಂತೆ ಜಾಗೃತಿ ಮೂಡಿಸಬೇಕು. ಹೆಲ್ಮೆಟ್ ಬಳಸದ ದ್ವಿಚಕ್ರ ವಾಹನ ಸವಾರರ ವಿರುದ್ಧ ದಂಡ‌ ಹಾಗೂ ಪ್ರಕರಣ ದಾಖಲಿಸಬೇಕು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳ‌ ದುರಸ್ತಿಗೆ ಕ್ರಮ ವಹಿಸುವ ಮೂಲಕ ಅಪಘಾತಗಳ‌‌ ನಿಯಂತ್ರಣಕ್ಕೆ ಕ್ರಮ‌ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಳೆದ‌ ಮೂರು ವರ್ಷಗಳಲ್ಲಿ ಆದಂತಹ ಅಪಘಾತಗಳ ಸಂಖ್ಯೆ, ಅಪಘಾತದಿಂದ ಮೃತರ ಸಂಖ್ಯೆ ಹಾಗೂ ಬ್ಲಾಕ್ ಸ್ಪಾಟ್(ಅಪಘಾತ ಸ್ಥಳ) ಗಳ ಕ್ರೋಢೀಕೃತ ವರದಿಯನ್ನು ಸಲ್ಲಿಸಲು ತಿಳಿಸಿದರು. ಈಗಾಗಲೇ ಗುರುತಿಸಲಾದ ಬ್ಲಾಕ್ ಸ್ಪಾಟ್‌ಗಳಲ್ಲಿ ಅಪಘಾತಗಳ‌ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರದ್ದಾಗಿರುವ ಚಾಲನಾ ಪರವಾನಗಿಗಳ ವಿವರವನ್ನು ಒದಗಿಸುವ ಜೊತೆಗೆ ಆ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಲು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಅತೀ ವೇಗದಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ಇದರ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಸರಕು ಸಾಗಾಣಿಕೆ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿಗೆ ಸರಕು ಸಾಗಾಣಿಕೆ ನಿಯಂತ್ರಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ, ಚಾಲನಾ ಸಂದರ್ಭದಲ್ಲಿ ಮೊಬೈಲ್ ಬಳಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ದಂಡ‌ ವಸೂಲಿ ಮಾಡಬೇಕು. ಇದರ ಜೊತೆಗೆ ವಾಹನಗಳ ದಾಖಲೆಗಳ ಪರಿಶೀಲನೆ ಜರುಗಿಸುವಂತೆ ಗುಳೇದ ತಿಳಿಸಿದರು.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಶೃತಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ.ಸೊಬರದ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.