ಸಾರಾಂಶ
ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ ನಗರದಲ್ಲಿ ಆಯೋಜಿಸಿದ್ದ ‘ವಿಶ್ವ ಜೈವಿಕ ಇಂಧನ ದಿನಾಚರಣೆ’ಯನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಈ. ಸುಧೀಂದ್ರ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ರಾಜ್ಯದ ಉದ್ದೇಶಿತ ನೂತನ ಜೈವಿಕ ಇಂಧನ ನೀತಿಯು ಜೈವಿಕ ಇಂಧನ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ಹಾಗೂ ರಾಜ್ಯದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕುತ್ತದೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಇ. ಸುಧೀಂದ್ರ ಹೇಳಿದ್ದಾರೆ.ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ ನಗರದಲ್ಲಿ ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಉದ್ಘಾಟಸಿ ಮಾತನಾಡಿದ ಅವರು, ಜೈವಿಕ ಇಂಧನ ನೀತಿ ಅನುಷ್ಠಾನದಿಂದ ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಕೋಟಿ ರು.ಗೂ ಹೆಚ್ಚಿನ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. 3 ಲಕ್ಷಕ್ಕೂ ಹೆಚ್ಚು ನೇರ ಹಾಗೂ ಪರೋಕ್ಷ ಉದ್ಯೋಗ ಸೃಜನೆ, ರೈತರ ಕುಟುಂಬಗಳ ಆದಾಯದ ಹೆಚ್ಚಳದ ಜೊತಗೆ ಯುವ ಉದ್ದಿಮೆದಾರರಿಗೆ ಪ್ರೋತ್ಸಾಹ ದೊರೆಯಲಿದೆ ಎಂದರು.
ಮುಂದಿನ ಐದು ವರ್ಷಗಳು ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಲಿದೆ. ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಲು ತನ್ನದೇ ಆದ ಕೊಡುಗೆಯನ್ನು ನೀಡಲಿದೆ ಎಂದು ಸುಧೀಂದ್ರ ವ್ಯಾಖ್ಯಾನಿಸಿದರು.ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಗಾಯತ್ರಿ ರೆಡ್ಡಿ, ಮಂಡಳಿಯ ಕಾರ್ಯ ಸಮಿತಿಯ ಸದಸ್ಯ ಡಾ. ಬಾಲಕೃಷ್ಣ ಗೌಡ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.