ಮಂಡ್ಯ ತಾಲೂಕಿನ ಹಂಪಾಪುರದಲ್ಲಿ ೪೦೦/೨೨೦/೩೩ ಕೆವಿ ಸಾಮರ್ಥ್ಯದ ಗ್ಯಾಸ್ ಇನ್ಸುಲೇಟೆಡ್ ಸಬ್ಸ್ಟೇಷನ್ ನಿರ್ಮಾಣವಾಗಲಿದ್ದು, ಇದರಲ್ಲಿ ತಲಾ ೫೦೦ ಎಂವಿಎ ಸಾಮರ್ಥ್ಯದ ಎರಡು ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲಾಗುವುದು. ಇದರೊಂದಿಗೆ ೮೦೦ಕ್ಕೂ ಹೆಚ್ಚು ಸರ್ಕ್ಯೂಟ್ ಕಿಲೋಮೀಟರ್ ಉದ್ದದ ಹೈವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಹಂಪಾಪುರ ಗ್ರಾಮದಲ್ಲಿ ನಿರ್ಮಾಣವಾಗಲಿರುವ ೪೦೦/೨೨೦/೩೩ ಕೆವಿ ಸಾಮರ್ಥ್ಯದ ಗ್ಯಾಸ್ ಇನ್ಸುಲೇಟೆಡ್ ಸಬ್ ಸ್ಟೇಷನ್ ಯೋಜನೆಯಿಂದ ಜಿಲ್ಲೆಯ ವಿದ್ಯುತ್ ಮೂಲಸೌಕರ್ಯಕ್ಕೆ ಮಹತ್ವದ ಬಲ ದೊರೆಯುವ ನಿರೀಕ್ಷೆಯಿದೆ. ಈ ಯೋಜನೆಯಿಂದ ವಿದ್ಯುತ್ ಪೂರೈಕೆಯಲ್ಲಿ ಸ್ಥಿರತೆ ಹೆಚ್ಚುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಅಲ್ಲದೆ, ಕೈಗಾರಿಕಾ ಬೆಳವಣಿಗೆಗೂ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ವಿದ್ಯುತ್ ಪ್ರಸರಣ ಜಾಲವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ೨೦೨೬ರ ಸೆಪ್ಟೆಂಬರ್ನಲ್ಲಿ ಹಂಪಾಪುರ ಪವರ್ ಟ್ರಾನ್ಸ್ಮಿಷನ್ ಲಿಮಿಟೆಡ್ ಸಂಸ್ಥೆಗೆ ಹಂಪಾಪುರದಲ್ಲಿ ೪೦೦ ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಹಾಗೂ ಅದಕ್ಕೆ ಸಂಬಂಧಿಸಿದ ವಿದ್ಯುತ್ ಪ್ರಸರಣ ಮಾರ್ಗಗಳನ್ನು ನಿರ್ಮಿಸಲು ಪರವಾನಗಿ ನೀಡಿದೆ.೨೦೨೮ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ:
ಮಂಡ್ಯ ತಾಲೂಕಿನ ಹಂಪಾಪುರದಲ್ಲಿ ೪೦೦/೨೨೦/೩೩ ಕೆವಿ ಸಾಮರ್ಥ್ಯದ ಗ್ಯಾಸ್ ಇನ್ಸುಲೇಟೆಡ್ ಸಬ್ಸ್ಟೇಷನ್ ನಿರ್ಮಾಣವಾಗಲಿದ್ದು, ಇದರಲ್ಲಿ ತಲಾ ೫೦೦ ಎಂವಿಎ ಸಾಮರ್ಥ್ಯದ ಎರಡು ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲಾಗುವುದು. ಇದರೊಂದಿಗೆ ೮೦೦ಕ್ಕೂ ಹೆಚ್ಚು ಸರ್ಕ್ಯೂಟ್ ಕಿಲೋಮೀಟರ್ ಉದ್ದದ ಹೈವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ.ಯೋಜನೆ ಪೂರ್ಣಗೊಂಡು ಕಾರ್ಯಾರಂಭ ಮಾಡಿದ ಬಳಿಕ ೧೦೦೦ ಮೆಗಾವ್ಯಾಟ್ವರೆಗೆ ವಿದ್ಯುತ್ ಪ್ರಸರಣಕ್ಕೆ ಅನುಕೂಲವಾಗಲಿದೆ. ಇದರಿಂದ ದಕ್ಷಿಣ ಕರ್ನಾಟಕದ ವಿದ್ಯುತ್ ಪ್ರಸರಣ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ. ಯೋಜನೆಯನ್ನು ೨೪ ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ೨೦೨೮ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ವಿದ್ಯುತ್ ಬೇಡಿಕೆ ಹೆಚ್ಚಳ:ಜಿಲ್ಲೆಯಲ್ಲಿ ವಿದ್ಯುತ್ ಬೇಡಿಕೆ ನಿರಂತರವಾಗಿ ಹೆಚ್ಚಾಗುತ್ತಿದ್ದರೂ, ಹಲವು ಪ್ರದೇಶಗಳಲ್ಲಿ ಕಡಿಮೆ ವೋಲ್ಟೇಜ್ ಹಾಗೂ ವಿದ್ಯುತ್ ಪೂರೈಕೆಯ ಏರಿಳಿತದ ಸಮಸ್ಯೆಗಳು ಮುಂದುವರೆದಿವೆ. ವಿಶೇಷವಾಗಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರಾವರಿ ಪಂಪ್ಸೆಟ್ಗಳು ಹಾಗೂ ಇತರೆ ಉಪಕರಣಗಳನ್ನು ಬಳಸಲು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಬೆಳೆಗಳು ನಿರ್ಣಾಯಕ ಹಂತಗಳಲ್ಲಿ ಒಣಗಿ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ.
ಹಂಪಾಪುರ ವಿದ್ಯುತ್ ಪ್ರಸರಣ ಯೋಜನೆಯಿಂದ ಪ್ರಾದೇಶಿಕ ವಿದ್ಯುತ್ ಗ್ರಿಡ್ ಮತ್ತಷ್ಟು ಬಲಗೊಳ್ಳಲಿದ್ದು, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಸಮರ್ಪಕವಾಗಿ ನಿಭಾಯಿಸಲು ಅನುಕೂಲವಾಗಲಿದೆ. ವೋಲ್ಟೇಜ್ ನಿರ್ವಹಣೆ ಸುಧಾರಿಸುವುದರೊಂದಿಗೆ ಗ್ರಾಮೀಣ ಮನೆಗಳು, ಕೃಷಿ ಬಳಕೆದಾರರು ಹಾಗೂ ಉದ್ಯಮಗಳಿಗೆ ಹೆಚ್ಚು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯಾಗುವ ನಿರೀಕ್ಷೆಯಿದೆ. ವಿದ್ಯುತ್ ವ್ಯತ್ಯಯ ಸಂದರ್ಭದಲ್ಲಿ ಡೀಸೆಲ್ ಆಧಾರಿತ ಪರ್ಯಾಯ ವ್ಯವಸ್ಥೆಗಳ ಮೇಲಿನ ರೈತರ ಅವಲಂಬನೆಯನ್ನೂ ಕಡಿಮೆ ಮಾಡಲು ಇದು ಸಹಕಾರಿಯಾಗಬಹುದು.ಪ್ರಸರಣ ವ್ಯವಸ್ಥೆಯಲ್ಲಿನ ಅಡಚಣೆ ದೂರ:
ಪ್ರಾದೇಶಿಕ ವಿದ್ಯುತ್ ಪ್ರಸರಣ ಜಾಲವನ್ನು ಬಲಪಡಿಸುವುದರ ಜೊತೆಗೆ ಭವಿಷ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ. ನವೀಕರಿಸಬಹುದಾದ ಇಂಧನ ಬಳಕೆಯ ದೃಷ್ಟಿಯಿಂದಲೂ ಇದಕ್ಕೆ ವಿಶೇಷ ಮಹತ್ವವಿದೆ. ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ರಾಜ್ಯದ ಉತ್ತರ ಭಾಗಗಳಲ್ಲಿ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿದೆ. ಈ ವಿದ್ಯುತ್ನ್ನು ಹೆಚ್ಚಿನ ಬಳಕೆ ಇರುವ ಪ್ರದೇಶಗಳಿಗೆ ಸಾಗಿಸಲು ಬಲಿಷ್ಠ ಪ್ರಸರಣ ಮೂಲಸೌಕರ್ಯದ ಅಗತ್ಯವಿದೆ. ಹಂಪಾಪುರ ಯೋಜನೆಯು ದಕ್ಷಿಣ ಕರ್ನಾಟಕದತ್ತ ನವೀಕರಿಸಬಹುದಾದ ಇಂಧನ ಪ್ರಸರಣಕ್ಕೆ ನೆರವಾಗುವುದರ ಜೊತೆಗೆ ಗ್ರಿಡ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಪ್ರಸರಣ ವ್ಯವಸ್ಥೆಯಲ್ಲಿನ ಅಡಚಣೆಗಳನ್ನು ನಿವಾರಿಸಲು ಸಹಕಾರಿಯಾಗಲಿದೆ ಎನ್ನುವುದು ವಿದ್ಯುತ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುವ ಮಾತು.ಕೃಷಿ-ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲ:
ಕೃಷಿಯ ಜೊತೆಗೆ ಹೈನುಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಕೋಲ್ಡ್ ಚೈನ್ ವ್ಯವಸ್ಥೆ, ಸಣ್ಣ ಕೈಗಾರಿಕೆಗಳು ಹಾಗೂ ಸ್ಥಿರ ವಿದ್ಯುತ್ ಪೂರೈಕೆಯನ್ನು ಅವಲಂಬಿಸಿರುವ ಗ್ರಾಮೀಣ ಉದ್ಯಮಗಳ ಬೆಳವಣಿಗೆಗೂ ಈ ಯೋಜನೆ ಪೂರಕ ವಾತಾವರಣ ನಿರ್ಮಿಸಲಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುವರಿ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಕೃಷಿ ಕುಟುಂಬಗಳಿಗೆ ವಿದ್ಯುತ್ ಅತ್ಯಂತ ಅಗತ್ಯವಾಗಿದೆ. ವೋಲ್ಟೇಜ್ ಏರಿಳಿತ ಹಾಗೂ ವಿದ್ಯುತ್ ವ್ಯತ್ಯಯದಿಂದ, ವಿಶೇಷವಾಗಿ ನೀರಾವರಿ ಪಂಪ್ಸೆಟ್ಗಳನ್ನು ಚಾಲನೆ ಮಾಡುವ ಸಂದರ್ಭದಲ್ಲಿ ರೈತರು ತೊಂದರೆ ಅನುಭವಿಸುತ್ತಾರೆ. ಈ ಯೋಜನೆಯಿಂದ ವಿದ್ಯುತ್ ಜಾಲ ಬಲಗೊಂಡು ಪೂರೈಕೆ ಸುಧಾರಣೆಯಾಗಬಹುದೆನ್ನುವ ನಿರೀಕ್ಷೆ ರೈತರಲ್ಲಿದೆ.೨೦೨೮ರಲ್ಲಿ ಕಾರ್ಯಾರಂಭ ಮಾಡುವ ಗುರಿ ಹೊಂದಿರುವ ಹಂಪಾಪುರ ವಿದ್ಯುತ್ ಪ್ರಸರಣ ಯೋಜನೆಯು ಮಂಡ್ಯ ಜಿಲ್ಲೆಯ ವಿದ್ಯುತ್ ಮೂಲಸೌಕರ್ಯದಲ್ಲಿ ದೀರ್ಘಕಾಲೀನ ಹೂಡಿಕೆಯಾಗಿದೆ. ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸುವುದಷ್ಟೇ ಅಲ್ಲದೆ, ಕೃಷಿ ಉತ್ಪಾದಕತೆ ಹೆಚ್ಚಿಸುವುದು, ಗ್ರಾಮೀಣ ಉದ್ಯಮಗಳಿಗೆ ಉತ್ತೇಜನ ನೀಡುವುದು ಹಾಗೂ ಭವಿಷ್ಯದ ಇಂಧನ ಅಗತ್ಯಗಳನ್ನು ಪೂರೈಸಲು ಜಿಲ್ಲೆಯನ್ನು ಸಜ್ಜುಗೊಳಿಸುವ ಸಾಮರ್ಥ್ಯವನ್ನು ಈ ಯೋಜನೆ ಹೊಂದಿದೆ.
-----------------ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯ ಅಗತ್ಯಗಳನ್ನು ಪೂರೈಸಲು ಜಿಲ್ಲೆಯ ವಿದ್ಯುತ್ ಜಾಲವನ್ನು ಬಲಪಡಿಸಲು ಈ ಯೋಜನೆ ನೆರವಾಗಲಿದೆ. ಹಂಪಾಪುರ ಬಳಿ ೨೫ ಎಕರೆ ಸರ್ಕಾರಿ ಜಾಗದಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣಗೊಳ್ಳಲಿದ್ದು, ರೈತರಿಂದ ಯಾವುದೇ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ. ಈ ಯೋಜನೆಯಿಂದ ಜಿಲ್ಲೆಯ ವಿದ್ಯುತ್ ಸಮಸ್ಯೆಗೆ ಸಂಪೂರ್ಣ ಪರಿಹಾರ ದೊರಕಲಿದೆ. ಬೇಡಿಕೆ ಇರುವಷ್ಟು ವಿದ್ಯುತ್ನ್ನು ಪೂರೈಸುವುದಕ್ಕೆ ಸಾಧ್ಯವಾಗಲಿದೆ.
- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ-------------------
ಜಿಲ್ಲೆಯ ವಿದ್ಯುತ್ ಬೇಡಿಕೆಯನ್ನು ಮನಗಂಡು ಹಂಪಾಪುರದಲ್ಲಿ ೪೦೦ ಕೆವಿ ಸಾಮರ್ಥ್ಯದ ಉಪಕೇಂದ್ರವನ್ನು ತಂದಿದ್ದೇನೆ. ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ವಿದ್ಯುತ್ ಸಮಸ್ಯೆಗೆ ಇದರಿಂದ ಪರಿಹಾರ ದೊರೆಯಲಿದೆ. ನಿರಂತರ ವಿದ್ಯುತ್ ಸರಬರಾಜಾಗುವುದರಿಂದ ರೈತರು ರಾತ್ರಿ ವೇಳೆ ಜಮೀನುಗಳಿಗೆ ತೆರಳುವ ಅವಶ್ಯಕತೆ ಇರುವುದಿಲ್ಲ. ಗ್ರಾಮೀಣ ಜನರ ವಿದ್ಯುತ್ ಸಮಸ್ಯೆಗೂ ಮುಕ್ತಿ ಸಿಗಲಿದೆ.- ಪಿ.ರವಿಕುಮಾರ್, ಶಾಸಕ, ಮಂಡ್ಯ ವಿಧಾನಸಭಾ ಕ್ಷೇತ್ರ