ಗಂಗಾವತಿ: ಗಂಗಾವತಿ ನೂತನ ಬಸ್ ನಿಲ್ದಾಣ ಕಾಮಗಾರಿ ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ಹೇರೂರು ರಸ್ತೆ ಮಾರ್ಗದಲ್ಲಿ ಸೆಟ್ ಲೈಟ್ ಬಸ್ ನಿಲ್ದಾಣದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.ಕೃಷಿ ವಿಜ್ಞಾನ ಕೇಂದ್ರದ ವ್ಯಾಪ್ತಿಯಲ್ಲಿ ಬರುವ 5ಎಕರೆ ಪ್ರದೇಶದಲ್ಲಿ ₹ 20 ಕೋಟಿ ವೆಚ್ಚದ ಸೆಟ್ ಲೈಟ್ ಕಾಮಗಾರಿ ಪ್ರಾರಂಭವಾಗಲಿದ್ದು, ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರಗೆ ಸೂಚಿಸಿದೆ ಎಂದರು.
ನಗರದಲ್ಲಿರುವ ರೈಲ್ವೆ ನಿಲ್ದಾಣವನ್ನು ಹೈಟೆಕ್ ನಿಲ್ದಾಣವನ್ನಾಗಿ ಪರಿವರ್ತಿಸಲಾಗುತ್ತದೆ, ಇದಕ್ಕೆ ₹25 ಕೋಟಿ ಅನುದಾನ ನೀಡಲಾಗಿದೆ. ತಾಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರಾ ನದಿ ತೀರದ ಪ್ರದೇಶವನ್ನು ₹5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಪ್ರತಿ ವರ್ಷ ಚಿಂತಾಮಣಿ ಮತ್ತು ನವವೃಂದಾವನಗಡ್ಡೆಯ ಯತಿವರೇಣ್ಯರು ಇರುವ ವೃಂದಾವನಗಳಿಗೆ ಇಲ್ಲಿಂದಲೇ ತುಂಗಾರತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಅರುಣ್ ಕುಮಾರ ಎಂ.ವೈ.ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವಾರು ಜಿಲ್ಲೆಗಳಲ್ಲಿ ಬಸ್ ನಿಲ್ದಾಣ ಸೇರಿದಂತೆ ಬಸ್ ಖರೀದಿಗೆ ಸಾಕಷ್ಟು ಅನುದಾನ ನೀಡಿದೆ. ಕಲ್ಬರ್ಗಿ ವಿಭಾಗಕ್ಕೆ 400 ಬಸ್ ನೀಡಬೇಕೆಂದು ಸಾರಿಗೆ ಸಚಿವರಿಗೆ ಮನವಿ ಮಾಡಿಕೊಂಡಿದೆ ಎಂದರು.
ಪ್ರಾಸ್ತಾವಿಕವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಮಾತನಾಡಿದರು. ವೇದಿಕೆ ಮೇಲೆ ತಾಪಂ ಇಓ ರಾಮರೆಡ್ಡಿ, ತಹಸೀಲ್ದಾರ ಮಹಾಂತಗೌಡ, ವಿರೂಪಾಕ್ಷಪ್ಪ ಸಿಂಗನಾಳ, ಗಿರೇಗೌಡ, ಜಿ. ಶ್ರೀಧರ, ನರಸಪ್ಪ ಅಮರಜ್ಯೋತಿ, ಮನೋಹರ ಹೇರೂರು, ಡಿ.ಕೆ. ಆಗೋಲಿ, ಚಂದ್ರು ಹಿರೂರು, ಚೆನ್ನಪ್ಪ ಮಳಗಿ, ಪಿಐ ಪ್ರಕಾಶ ಮಾಳೆ, ಮೌಲಾಸಾಬ್, ಟಿ.ಜಿ. ಬಾಬು,ಯಮನೂರು ಚೌಡ್ಕಿ, ಬಸಪ್ಪನಾಯಕ ಸೇರಿದಂತೆ ಪ್ರಮುಖರು ಇದ್ದರು.