ಸಾರಾಂಶ
ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿವಚನ ಸಾಹಿತ್ಯದ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಜನ್ಮಸ್ಥಳ ದೇವರಹಿಪ್ಪರಗಿ ಪಟ್ಟಣದಲ್ಲಿ ನಿರ್ಮಿಸಲಾಗಿರುವ ನೂತನ ಕೇಂದ್ರ ಬಸ್ ನಿಲ್ದಾಣವು ಉದ್ಘಾಟನೆಗೆ ಸಿದ್ಧಗೊಂಡಿದ್ದು, ಮಂಗಳವಾರ (ಏ.8) ಲೋಕಾರ್ಪಣೆಗೊಳ್ಳಲಿದೆ. ಅಲ್ಲದೇ, ವೀರ ಶರಣ ಮಡಿವಾಳ ಮಾಚಿದೇವರ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಮಫಲಕ ಕೂಡ ಅನಾವರಣಗೊಳಿಸಲಿದ್ದಾರೆ.
ಏ.8 ರಂದು ಬೆಳಗ್ಗೆ 11.30ಕ್ಕೆ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ವಿಭಾಗೀಯ ಸಾರಿಗೆ ಅಧಿಕಾರಿ ಎಂ.ಎಸ್.ಹಿರೇಮಠ ಸೇರಿದಂತೆ ರಾಜಕೀಯ ಮುಖಂಡರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.ಕನಸು ನನಸು:
ಪಟ್ಟಣದ ನೂತನ ಬಸ್ ನಿಲ್ದಾಣಕ್ಕೆ ಮಡಿವಾಳ ಮಾಚಿದೇವರ ಹೆಸರು ನಾಮಕರಣ ಮಾಡುವಂತೆ ಅನೇಕ ವರ್ಷಗಳಿಂದ ಜನರು ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದರು. ಪಟ್ಟಣದ ಪ್ರಮುಖರಾದ ಬಿ.ಕೆ.ಪಾಟೀಲ ನೇತೃತ್ವದ ಅನೇಕ ಮಹನೀಯರು, ಗೆಳೆಯರ ಬಳಗ, ರಾಜಕೀಯ ಮುಖಂಡರು ಹಾಗೂ ಸ್ವಾಮೀಜಿಗಳು ಶರಣರ ಜನ್ಮಸ್ಥಳ ಅಭಿವೃದ್ಧಿಗೆ ಬಸ್ ನಿಲ್ದಾಣಕ್ಕೆ ಅವರ ಹೆಸರು ನಾಮಕರಣ ಮಾಡುವಂತೆ ಒತ್ತಡ ಹೇರಿದ್ದರು.ಪಟ್ಟಣದ ಹೃದಯ ಭಾಗದಲ್ಲಿ ಸುಮಾರು 1.16 ಎಕರೆ ಜಾಗದಲ್ಲಿ ಸುಮಾರು ₹ 4.95 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಈ ನಿಲ್ದಾಣದಲ್ಲಿ ಏಕಕಾಲಕ್ಕೆ 16 ಬಸ್‌ಗಳ ನಿಲುಗಡೆ ಅವಕಾಶ, ಸಂಚಾರ ನಿಯಂತ್ರಕರ ಕೊಠಡಿ, ಪಾಸ್ ವಿತರಣಾ ಕೊಠಡಿ, ಶೌಚಾಲಯದ ವ್ಯವಸ್ಥೆ, ಪ್ರಯಾಣಿಕರ ಪ್ರಾಂಗಣ ಹಾಗೂ ಶುದ್ಧ ಕುಡಿಯುವ ನೀರು(ಆರ್ ಒ ಪ್ಲಾಂಟ್) ಫ್ಯಾನ್ ಅಳವಡಿಸಿದ್ದು ಈ ಬಸ್ ನಿಲ್ದಾಣದ ವಿಶೇಷವಾಗಿದೆ.
ಶಕ್ತಿ ಯೋಜನೆಯಡಿ ಸಿಂದಗಿ ಘಟಕದಿಂದ 118.74 ಲಕ್ಷ ಮಹಿಳಾ ಪ್ರಯಾಣಿಕರು ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಇದರಿಂದ ಪ್ರತಿದಿನ ಸುಮಾರು 17,910 ಜನ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಸುಮಾರು 425 ಜನ ಸಿಬ್ಬಂದಿ ಘಟಕದಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು 106 ವಾಹನಗಳಿವೆ. ಪ್ರತಿದಿನ 34,677 ಕಿ.ಮೀ ಕಾರ್ಯಾಚರಣೆಯ ಮೂಲಕ 30,295 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇದರಿಂದ ಘಟಕಕ್ಕೆ ₹ 14.96 ಲಕ್ಷ ಪ್ರತಿದಿನ ಆದಾಯ ಲಭಿಸುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಕೋಟ್ಶರಣರ ನಾಡಿನ ನೂತನ ಬಸ್ ನಿಲ್ದಾಣಕ್ಕೆ ಶರಣ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಬರುತ್ತಿದ್ದಾರೆ. ಸುಸಜ್ಜಿತ ಬಸ್ ನಿಲ್ದಾಣ ಜೊತೆಗೆ ಸಚಿವರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣಕ್ಕೆ ಫ್ಯಾನ್ ವ್ಯವಸ್ಥೆ ಇಲ್ಲದಿದ್ದರೂ ದೇವರಹಿಪ್ಪರಗಿ ಹಾಗೂ ಸಿಂದಗಿ ಬಸ್ ನಿಲ್ದಾಣಗಳಿಗೆ ಕಲ್ಪಿಸಲಾಗಿದೆ. ಕುಡಿಯುವ ನೀರಿಗಾಗಿ ಆರ್ ಒ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ.
-ನಾರಾಯಣಪ್ಪ ಕುರುಬರ, ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಪುರ.--------
ಕೋಟ್ಮಡಿವಾಳ ಮಾಚಿದೇವರ ಜನ್ಮಸ್ಥಳ ದೇವರಹಿಪ್ಪರಗಿ ಪಟ್ಟಣದ ಅಭಿವೃದ್ಧಿ ಜೊತೆ ಅವರ ಹೆಸರನ್ನು ಅಜರಾಮರವಾಗಿ ಉಳಿಸುವ ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಅವರ ಪ್ರತಿಮೆ ನಿರ್ಮಾಣಕ್ಕೆ ಸಚಿವರ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ನೂತನ ಬಸ್ ನಿಲ್ದಾಣಕ್ಕೆ ಅವರ ಹೆಸರಿಡುವ ಮೂಲಕ ಈ ಭಾಗದ ಜನರ ಕನಸನ್ನು ನನಸಾಗಿಸಲು ಸಾಕಷ್ಟು ಜನ ಮುಖಂಡರು ಸ್ವಾಮೀಜಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಯತ್ನಿಸಿದ್ದಾರೆ. ನಮ್ಮೆಲ್ಲರ ಪ್ರಯತ್ನದಿಂದ ಆ ಕನಸು ಇಂದು ನನಸಾಗಿದೆ.
-ರಾಜುಗೌಡ ಪಾಟೀಲ ಕುದುರಿಸಾಲವಾಡಗಿ, ಶಾಸಕರು--------
ಕೋಟ್ಶರಣರ ಹುಟ್ಟೂರನ್ನು ವಿಶ್ವಕ್ಕೆ ಪರಿಚಯಿಸುವ ಸಲುವಾಗಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಮಾಜಿ ಸಚಿವರು, ಉಸ್ತುವಾರಿ ಸಚಿವರು, ಶಾಸಕರು, ಮಾಜಿ ಶಾಸಕರು, ರಾಜಕೀಯ ಮುಖಂಡರು, ಗೆಳೆಯರ ಬಳಗ, ಸ್ವಾಮೀಜಿಗಳು ಹಾಗೂ ಪಟ್ಟಣದ ಜನರ ಆಶಯದಂತೆ ನೂತನ ಬಸ್ ನಿಲ್ದಾಣ ಉದ್ಘಾಟನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಅದ್ದೂರಿಯಾಗಿ ಪಟ್ಟಣಕ್ಕೆ ಸ್ವಾಗತಿಸಲು ಜಾತ್ಯತೀತವಾಗಿ ಕೈಜೋಡಿಸಬೇಕಾಗಿದೆ. ಈ ಸುದೈವಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ, ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು.
-ಬಿ.ಕೆ.ಪಾಟೀಲ, ಪಟ್ಟಣದ ಪ್ರಮುಖರು