ಭೂ ಸ್ವಾಧೀನ ವಿಚಾರವಾಗಿ ಎಲ್ಲವನ್ನು ಬಗೆಹರಿಸಿ ಹೊಸ ಅಧ್ಯಾಯವನ್ನು ಪ್ರಾರಂಭ ಮಾಡಿದ್ದೇವೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ ಕರ್ನಾಟಕದ ರಾಯದುರ್ಗ-ತುಮಕೂರು, ತುಮಕೂರು ದಾವಣಗೆರೆ ಸುಮಾರು ೪೦೦ ಕ್ಕೂ ಹೆಚ್ಚು ಕಿ.ಮೀ. ರೈಲ್ವೆ ಯೋಜನೆಯನ್ನು ೨೦೨೮ ಫೆಬ್ರವರಿ ಒಳಗೆ ಮುಗಿಸಲು ಕಾರ್ಯೋನ್ಮುಖರಾಗಿದ್ದೇವೆ. ಭೂ ಸ್ವಾದೀನ ವಿಚಾರವಾಗಿ ಎಲ್ಲವನ್ನು ಬಗೆಹರಿಸಿ ಹೊಸ ಅಧ್ಯಾಯವನ್ನು ಪ್ರಾರಂಭ ಮಾಡಿದ್ದೇವೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಹೇಳಿದರು.ಅವರು ತುಮಕೂರು-ದಾವಣಗೆರೆ ರೈಲ್ವೆ ಮಾರ್ಗದ ಕಾಮಗಾರಿಯನ್ನು ಪರಿಶೀಲನೆ ನಡೆಸಿ ನಂತರ ಶಿರಾ ಮಿನಿ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ತುಮಕೂರು-ದಾವಣಗೆರೆ ೧೯೨ ಕಿ.ಮೀ. ರೈಲ್ವೆ ಕಾಮಗಾರಿಯಲ್ಲಿ ದಾವಣಗೆರೆ ಬಳಿಯ ಆನೆಗೋಡು, ಭರಮಸಾಗರ, ಹೆಬ್ಬಾಳು ಚಿತ್ರದುರ್ಗ ಇಲ್ಲಿವರೆಗೂ ಏನೇನು ಕೆಲಸ ಆಗಿದೆ ಎಂದು ಇಂದು ಪರಿಶೀಲನೆ ನಡೆಸಿದ್ದೇನೆ ಶಿರಾದಿಂದ ಬೈರೇನಹಳ್ಳಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯ ಮೊದಲ ಹಂತವಾಗಿ ಶಿರಾ ಬಡವನಹಳ್ಳಿಯ ಸುಮಾರು ೨೫.೨೦ ಕಿ.ಮೀ. ರಸ್ತೆ ಕಾಮಗಾರಿಗೆ ಪ್ರಧಾನಮಂತ್ರಿಗಳ ಸೂಚನೆ ಮೇರೆಗೆ ಸುಮಾರು ೫೮೫ ಕೋಟಿಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಟೆಂಡರ್ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಭೂಮಿ ಪೂಜೆ ಮಾಡಲಾಗುವುದು. ನಂತರ ಬಡವನಹಳ್ಳಿಯಿಂದ ಬೈರೇನಹಳ್ಳಿಯವರೆಗೆ ೫೨ ಕಿಮೀ ಒಟ್ಟು ಸುಮಾರು ೧೬೦೦ ಕೋಟಿ ರೂಗಳ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ರೈಲುಗಳ ರಿಪೇರಿಗೆ ಬೆಂಗಳೂರಿನ ಯಲಹಂಕದಲ್ಲಿ ಸುಮಾರು ೫೯೦೦ ಕೋಟಿ ರುಗಳ ವೆಚ್ಚದಲ್ಲಿ ಮೆಗಾ ಟರ್ಮಿನಲ್ ಮಾಡಲಾಗುತ್ತಿದೆ. ಅಲ್ಲಿ ಕರ್ನಾಟಕದ ಎಲ್ಲಾ ರೈಲುಗಳ ರಿಪೇರಿ ಮಾಡಲಾಗುವುದು. ಅದಕ್ಕಾಗಿ ೮ ಪಥಗಳಲ್ಲಿ ಮೇಲ್ಸೇತುವೆ, ಕೆಳ ಸೇತುವೆ ಮಾಡಲಾಗುತ್ತಿದೆ. ಇಂತಹ ಟರ್ಮಿನಲ್ ದೇಶದಲ್ಲಿ ಮೂರು ಕಡೆಗಳಲ್ಲಿತ್ತು, ಈಗ ಕರ್ನಾಟಕದಲ್ಲಿ ಪ್ರಾರಂಭವಾಗುತ್ತಿದೆ. ಇದು ಎಲ್ಲಕ್ಕಿಂತ ದೊಡ್ಡದಾಗಿದೆ ಎಂದರು. ಕರ್ನಾಟಕದ ನೀರಾವರಿ ಯೋಜನೆಗಳಾದ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಮೇಕೆದಾಟು ಯೋಜನೆಗಳಿಗೆ ಕೇಂದ್ರ ಸರಕಾರ ಹಣ ನೀಡುವ ವಿಚಾದರಲ್ಲಿ ನಾವ್ಯಾರೂ ನಿರೀಕ್ಷೆ ಮಾಡದಷ್ಟು ಅನುಕೂಲವಾಗಲಿದೆ ಭದ್ರಾ ಮೇಲ್ದಂಡೆ ಯೋಜನೆಗೂ ಹಾಗೂ ಮೇಕೆದಾಟು ಯೋಜನೆಯೂ ಆಗುತ್ತದೆ ಎಂದರು. ಮಧುಗಿರಿ ಬೆಟ್ಟಕ್ಕೆ ರೋಪ್ ವೇ: ಮಾರ್ಚ್ ಕೊನೆ ವಾರದಲ್ಲಿ ಮಧುಗಿರಿಯ ಏಕಶಿಲಾ ಬೆಟ್ಟ, ಸಿದ್ದರ ಬೆಟ್ಟ, ದೇವರಾಯನ ದುರ್ಗ, ತುರುವೆಕೆರೆಯಲ್ಲಿ ರಂಗನಾಥ ಸ್ವಾಮಿ ದೇವಸ್ಥಾನದ ಬೆಟ್ಟಗಳನ್ನು ಕೇಂದ್ರ ಸರ್ಕಾರದ ತಂಡವನ್ನು ಕರೆತಂದು ತೋರಿಸುತ್ತೇನೆ. ಅಲ್ಲಿ ರೋಪ್ ವೇ ಮಾಡಲು ತೀರ್ಮಾನ ಮಾಡಿದ್ದೇವೆ. ಇದರ ಜೊತೆಗೆ ನಂದಿ ಬೆಟ್ಟವನ್ನು ಸೇರಿಸುವಂತೆ ಟಿ.ಬಿ.ಜಯಚಂದ್ರ ಸಲಹೆ ನೀಡಿದ್ದು, ಅದನ್ನೂ ಸೇರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಶಾಸಕ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ರೈಲ್ವೆ ಇಲಾಖೆಯ ಮುಖ್ಯ ಇಂಜಿನಿಯರ್ ಪ್ರದೀಪ್ ಪುರು, ಎಸ್ ಡಬ್ಲುಆರ್ ನ ಮುಖ್ಯ ಇಂಜಿನಿಯರ್ ರಜತ್, ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಆನಂದ ಕುಮಾರ್, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಪೌರಾಯುಕ್ತ ರುದ್ರೇಶ್, ನಗರಸಭೆ ಸದಸ್ಯರಾದ ಉಮಾ ವಿಜಯರಾಜ್ ಸೇರಿದಂತೆ ಹಲವರು ಹಾಜರಿದ್ದರು.