ಸಬ್‌ ಅರ್ಬನ್‌ ಕಾಮಗಾರಿಗೆ ಹೊಸ ಗುತ್ತಿಗೆ

| Published : Oct 07 2025, 02:00 AM IST

ಸಬ್‌ ಅರ್ಬನ್‌ ಕಾಮಗಾರಿಗೆ ಹೊಸ ಗುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಗಿತಗೊಂಡಿರುವ ಬೆಂಗಳೂರು ಉಪನಗರ ರೈಲು ಯೋಜನೆಯ ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣವಾರ ಸಂಪರ್ಕಿಸುವ ಮಲ್ಲಿಗೆ ಮಾರ್ಗದ (2ನೇ ಕಾರಿಡಾರ್‌) ಬಾಕಿ ಕಾಮಗಾರಿಗೆ ಹೊಸ ಟೆಂಡರ್‌ ಆಹ್ವಾನಿಸಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ಥಗಿತಗೊಂಡಿರುವ ಬೆಂಗಳೂರು ಉಪನಗರ ರೈಲು ಯೋಜನೆಯ ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣವಾರ ಸಂಪರ್ಕಿಸುವ ಮಲ್ಲಿಗೆ ಮಾರ್ಗದ (2ನೇ ಕಾರಿಡಾರ್‌) ಬಾಕಿ ಕಾಮಗಾರಿಗೆ ಹೊಸ ಟೆಂಡರ್‌ ಆಹ್ವಾನಿಸಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ನಿರ್ಧರಿಸಿದೆ.

ಸೋಮವಾರ ಕೆ-ರೈಡ್‌ ಅಧ್ಯಕ್ಷರೂ ಆಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ನೇತೃತ್ವದ ಕೆ-ರೈಡ್‌ ಮಂಡಳಿಯು ಬಾಕಿ ಸಿವಿಲ್ ಕಾಮಗಾರಿಗಳಿಗೆ ಮೂರು ಪ್ಯಾಕೇಜ್‌ಗಳಲ್ಲಿ ಹೊಸ ಟೆಂಡರ್‌ಗಳನ್ನು ಆಹ್ವಾನಿಸಲು ಕೆ-ರೈಡ್‌ಗೆ ನಿರ್ದೇಶನ ನೀಡಿದೆ. ಜತೆಗೆ ಶೀಘ್ರವೆ ಕಾಮಗಾರಿ ನಡೆಸಲು ಎಲ್ಲ ಕ್ರಮಕ್ಕಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರವನ್ನು ನೀಡಿದೆ.

ಎಲ್ ಆ್ಯಂಡ್‌ ಟಿ ಕಾರಿಡಾರ್ 2 ಮತ್ತು 4ರ ಎರಡೂ ಒಪ್ಪಂದಗಳನ್ನು ಏಕಪಕ್ಷೀಯ ಮತ್ತು ಕಾನೂನುಬಾಹಿರವಾಗಿ ಮುಕ್ತಾಯಗೊಳಿಸಿದ ಹಿನ್ನೆಲೆಯಲ್ಲಿ ಮಂಡಳಿಯು ಈ ನಿರ್ಣಾಯಕ ನಿರ್ಧಾರ ತೆಗೆದುಕೊಂಡಿದೆ ಎಂದು ಕೆ-ರೈಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಅವರ ಸಲಹೆಯ ಮೇರೆಗೆ ಮಧ್ಯಸ್ಥಿಕೆ ಪ್ರಕ್ರಿಯೆ ಚಾಲ್ತಿಯಲ್ಲಿ ಇರಿಸಿಕೊಂಡು ಬಾಕಿ ಇರುವ ಸಿವಿಲ್ ಕಾಮಗಾರಿಗಳಿಗೆ ಹೊಸ ಟೆಂಡರ್‌ಗಳನ್ನು ಆಹ್ವಾನಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದರಂತೆ, ಡಿಸೆಂಬರ್ ಒಳಗೆ ಟೆಂಡರ್‌ ಕಾರ್ಯಾದೇಶವನ್ನು ನೀಡಲಾಗುವುದು.

ಅದೇ ರೀತಿ ಹೀಲಲಿಗೆ-ರಾಜನುಕುಂಟೆ ಸಂಪರ್ಕಿಸುವ ಕಾರಿಡಾರ್-4ಕ್ಕೆ (ಕನಕ) ಬಾಕಿ ಸಿವಿಲ್ ಕಾಮಗಾರಿಗಳಿಗೆ ನವೆಂಬರ್‌ನಲ್ಲಿ ಸೂಕ್ತ ಟೆಂಡರ್ ಪ್ಯಾಕೇಜ್‌ಗಳೊಂದಿಗೆ ಟೆಂಡರ್‌ ಆಹ್ವಾನಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ವಾಣಿಜ್ಯ ನ್ಯಾಯಾಲಯವು ಎಲ್‌ ಆ್ಯಂಡ್‌ ಟಿಯ ಬ್ಯಾಂಕ್ ಗ್ಯಾರಂಟಿಯನ್ನು ನಗದೀಕರಿಸುವ ಬಗ್ಗೆ ನೀಡಿರುವ ತಡೆಯಾಜ್ಞೆಯನ್ನು ಅದೇ ನ್ಯಾಯಾಲಯದಲ್ಲಿ ಕೆ-ರೈಡ್‌ ಪ್ರಶ್ನಿಸಿದ್ದು, ಪ್ರಕರಣದ ವಿಚಾರಣೆ ನಡೆದಿದೆ ಎಂದು ಕೆ-ರೈಡ್‌ ತಿಳಿಸಿದೆ.

ಏಕಪಪಕ್ಷೀಯವಾಗಿ ಕಾಮಗಾರಿ

ಸ್ಥಗಿತಗೊಳಿಸಿದ ಎಲ್‌ ಆ್ಯಂಡ್‌ ಟಿ2022ರಲ್ಲಿ ಉಪನಗರ ರೈಲು ಯೋಜನೆಯ ಮಲ್ಲಿಗೆ ಕಾರಿಡಾರ್‌ಗೆ ಹಾಗೂ 2023ರಲ್ಲಿ ಕನಕ ಮಾರ್ಗದ ಕಾಮಗಾರಿಗಾಗಿ ಎಲ್‌ ಆ್ಯಂಡ್‌ ಟಿ ಕಂಪನಿಯು ಕೆ-ರೈಡ್‌ ಜೊತೆ ಎರಡು ಒಪ್ಪಂದಗಳನ್ನು ಮಾಡಿಕೊಂಡಿತ್ತು. ಗುತ್ತಿಗೆದಾರರ ಕೋರಿಕೆಯ ಮೇರೆಗೆ ಒಪ್ಪಂದದ ಅವಧಿಯನ್ನು ಕ್ರಮವಾಗಿ ಸೆಪ್ಟೆಂಬರ್-2026 ಮತ್ತು ಅಕ್ಟೋಬರ್ -2026ರವರೆಗೆ ವಿಸ್ತರಿಸಲಾಗಿತ್ತು. ಆದರೆ, ಭೂಮಿ ಹಸ್ತಾಂತರ ಸಮಸ್ಯೆ ಸೇರಿ ಇತರೆ ಕಾರಣ ನೀಡಿ ಏಕಪಪಕ್ಷೀಯವಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದ ಎಲ್‌ ಆ್ಯಂಡ್‌ ಟಿ ಪರಿಹಾರಕ್ಕಾಗಿ ವಾಣಿಜ್ಯ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಸಂಬಂಧ ಎಲ್ ಆ್ಯಂಡ್‌ ಟಿ ಮತ್ತು ಕೆ-ರೈಡ್‌ ನಡುವಿನ ಮಧ್ಯಸ್ಥಿಕೆ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರನ್ನು ಮೂವರು ಸದಸ್ಯರ ಮಂಡಳಿಯ ಮಧ್ಯಸ್ಥಿಕೆದಾರರನ್ನಾಗಿ ರಾಜ್ಯ ಸರ್ಕಾರದಿಂದ ನಾಮನಿರ್ದೇಶನ ಮಾಡಲಾಗಿದೆ.