ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬೆಂಗಳೂರಿನ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯವು ‘ಶಿಕ್ಷಣ ಶೈಕ್ಷಣಿಕ ಮೌಲ್ಯಮಾಪನ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ’ ಕೋರ್ಸ್ ಪ್ರವೇಶಾತಿ ಆರಂಭಿಸಿದೆ ಎಂದು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಇಂದು ಪ್ರಸಾದ್ ತಿಳಿಸಿದ್ದಾರೆ.ಒಂದು ವರ್ಷದ ಈ ಅರೆಕಾಲಿಕ ಕಾರ್ಯಕ್ರಮವು ಮೌಲ್ಯಮಾಪನಗಳ ವಿಷಯದಲ್ಲಿ ತಾತ್ವಿಕ ಮತ್ತು ಪ್ರಾಯೋಗಿಕ ವಿಷಯಗಳ ಸಂತುಲಿತ ಸಂಯೋಜನೆಯಾಗಿದೆ. ಇದನ್ನು ಆನ್‌ಲೈನ್ ಮತ್ತು ಕ್ಯಾಂಪಸ್ ತರಗತಿಗಳನ್ನು ಒಳಗೊಂಡಂತೆ ಸಂಯೋಜಿತ ವಿಧಾನದಲ್ಲಿ ನೀಡಲಾಗುವುದು. ಈ ಕಾರ್ಯಕ್ರಮವು ಮೌಲ್ಯಮಾಪನದ ಸಂಸ್ಕೃತಿಯಲ್ಲಿ ಸಕಾರತ್ಮಕ ಬದಲಾವಣೆಯನ್ನು ತರುವುದಕ್ಕಾಗಿ ಶಿಕ್ಷಕರು, ಶಿಕ್ಷಕ ಪ್ರಶಿಕ್ಷಕರು, ಶೈಕ್ಷಣಿಕ ಅಧಿಕಾರಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರ ವೃತ್ತಿಪರರು ಸೇರಿದಂತೆ ಪ್ರಮುಖ ಸಹಭಾಗಿಗಳಲ್ಲಿ ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ಮನೋಧರ್ಮವನ್ನು ಒದಗಿಸುವ ಮೂಲಕ ಅವರಲ್ಲಿ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶ ಹೊಂದಿದೆ ಎಂದರು.
ಕನಿಷ್ಟ ಎರಡು ವರ್ಷಗಳಿಂದ ಅಗತ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವೃತ್ತಿಪರರಿಗಾಗಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಇವರಲ್ಲಿ ಶಿಕ್ಷಕರು, ಶೈಕ್ಷಣಿಕ ಸಂಯೋಜಕರು, ಶಿಕ್ಷಕ ಬೋಧಕರು, ಪಠ್ಯಕ್ರಮ ವಿನ್ಯಾಸಕರು, ಪ್ರಶ್ನೆ ಪತ್ರಿಕೆಯನ್ನು ಅಭಿವೃದ್ಧಿಪಡಿಸುವವರು, ಪಠ್ಯಪುಸ್ತಕದ ಲೇಖಕರು, ಶೈಕ್ಷಣಿಕ ಸಮಾಲೋಚಕರು, ಮೌಲ್ಯಮಾಪನ ವೃತ್ತಿಯವರು ಮತ್ತು ಇತರ ಯಾವುದೇ ಎನ್ ಜಿಒ ವೃತ್ತಿಪರರು ಸೇರ್ಪಡೆಯಾಗಬಹುದು ಎಂದು ಮಾಹಿತಿ ನೀಡಿದರು.ಮೌಲ್ಯಮಾಪನದ ಪರಿಕಲ್ಪನೆಗಳು, ತತ್ವಗಳು, ವಿಧಾನಗಳು ಮತ್ತು ಶಿಕ್ಷಣದ ಗುಣಮಟ್ಟದ ಸುಧಾರಣೆಯಲ್ಲಿ ಅವರು ಹೊಂದಿರುವ ಪಾತ್ರದ ಕುರಿತು ಸಮಗ್ರ ಗ್ರಹಿಕೆ ಬೆಳೆಸಿಕೊಳ್ಳಲು ಇದು ಅನುಕೂಲವಾಗುತ್ತದೆ. ಸಾಮರ್ಥ್ಯ ಆಧರಿತ ಪ್ರಶ್ನಾಪತ್ರಿಕೆಗಳು, ಚಟುವಟಿಕೆಗಳು, ಪೋರ್ಟ್ ಪೋಲಿಯೋಗಳು, ಅಧ್ಯಾಯ ಶೀರ್ಷಿಕೆಗಳು, ಪರಿಶೀಲನಾ ಪಟ್ಟಿಗಳು, ಗುಂಪಿನ ಮೌಲ್ಯಮಾಪನಗಳು ಮತ್ತು ಸ್ವಯಂ ಮೌಲ್ಯಮಾಪನಗಳ ಸರಿಯಾದ ಮತ್ತು ವಿಶ್ವಾಸಾರ್ಹ ಮೌಲ್ಯಮಾಪನ ಸಾಧನಗಳನ್ನು ಹೆಚ್ಚಿಸಿಕೊಂಡು ವಿದ್ಯಾರ್ಥಿಗಳ ಕಲಿಕೆ ಮತ್ತು ತರಗತಿ ಕೋಣೆಯ ಒಟ್ಟಾರೆ ಪ್ರಕ್ರಿಯೆಗಳಲ್ಲಿ ಮೌಲ್ಯಮಾಪನದ ದತ್ತಾಂಶ ಬಳಸಿಕೊಳ್ಳಲು ಈ ಶಿಕ್ಷಣ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ 2024 ರ ನವೆಂಬರ್ 20 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ರಶ್ಮಿ ಪ್ರಭಾಕರ್-8951978091 ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.