​ರಾಜ್ಯದಲ್ಲಿ ಮೊದಲ ಬಾರಿಗೆ ಆಲ್ಕೋಹಾಲ್‌ ಪ್ರಮಾಣ ಆಧರಿಸಿ ತೆರಿಗೆ ವಿಧಿಸುವ ಆಲ್ಕೋಹಾಲ್ ಇನ್ ಬೇವರೇಜ್ (ಎಐಬಿ) ಎಂಬ ಐತಿಹಾಸಿಕ ಹೊಸ ಅಬಕಾರಿ ನೀತಿಯನ್ನು ಮೇ 11ರಿಂದ ಜಾರಿಗೆ ತಂದಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಹಳೇ ಸ್ಟಾಕ್ ಹೆಸರಿನಲ್ಲಿ ಮದ್ಯಪ್ರಿಯರಿಗೆ ಹೆಚ್ಚಿನ ದರ ವಿಧಿಸಲಾಗುತ್ತಿದೆ.

ಶಿವಕುಮಾರ ಕುಷ್ಟಗಿ

ಗದಗ: ​ರಾಜ್ಯದಲ್ಲಿ ಮೊದಲ ಬಾರಿಗೆ ಆಲ್ಕೋಹಾಲ್‌ ಪ್ರಮಾಣ ಆಧರಿಸಿ ತೆರಿಗೆ ವಿಧಿಸುವ ಆಲ್ಕೋಹಾಲ್ ಇನ್ ಬೇವರೇಜ್ (ಎಐಬಿ) ಎಂಬ ಐತಿಹಾಸಿಕ ಹೊಸ ಅಬಕಾರಿ ನೀತಿಯನ್ನು ಮೇ 11ರಿಂದ ಜಾರಿಗೆ ತಂದಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಹಳೇ ಸ್ಟಾಕ್ ಹೆಸರಿನಲ್ಲಿ ಮದ್ಯಪ್ರಿಯರಿಗೆ ಹೆಚ್ಚಿನ ದರ ವಿಧಿಸಿ, ಮದ್ಯ ವ್ಯಾಪಾರಿಗಳಿಂದ ನಿತ್ಯವೂ ಲೂಟಿ ನಡೆಯುತ್ತಿದೆ.

ಪ್ರಿಮಿಯಂ ಹಾಗೂ ಐಷಾರಾಮಿ ವಿದೇಶಿ ಬ್ರಾಂಡ್‌ಗಳ ಮದ್ಯದ ದರ ಶೇ. 16ರಿಂದ 25ರಷ್ಟು ಇಳಿಕೆಯಾಗಿದೆ. ಅಲ್ಕೋಹಾಲ್ ಹೆಚ್ಚಿರುವ ಮದ್ಯದ ಬೆಲೆ ಶೇ. 20ರಿಂದ 30ರಷ್ಟು ದುಬಾರಿಯಾಗಿದೆ. ​ಆದರೆ, ಆದೇಶ ಜಾರಿಯಾಗಿ 15 ದಿನ ಕಳೆದರೂ ಜಿಲ್ಲೆಯಲ್ಲಿ ಮಾತ್ರ ಇಂದಿಗೂ ಹಳೆಯ ದರದಲ್ಲಿಯೇ ಮಾರಾಟ ಮಾಡುತ್ತಿದ್ದಾರೆ.

ಕುಂಟು ನೆಪ: ​ದರ ಇಳಿಕೆಯಾಗಿರುವ ಪ್ರಿಮಿಯಂ ಮದ್ಯಕ್ಕೆ ಹೊಸ ಸ್ಟಾಕ್ ಬಂದಿಲ್ಲ, ಹಳೇ ಸ್ಟಾಕ್ ಇದೆ. ಅದೇ ರೇಟ್‌ನಲ್ಲಿಯೇ ಮಾರಾಟ ಮಾಡುತ್ತೇವೆ ಎನ್ನುವ ಸಬೂಬು ಹೇಳುವ ಮದ್ಯದ ವ್ಯಾಪಾರಿಗಳು, ದರ ಏರಿಕೆಯಾಗಿರುವ ಅಗ್ಗದ ಮದ್ಯಕ್ಕೆ ಮಾತ್ರ ಸರ್ಕಾರದ ಆದೇಶದ ನೆಪವೊಡ್ಡಿ ತಕ್ಷಣವೇ ಹೆಚ್ಚಿನ ಬೆಲೆಯನ್ನು ವಸೂಲಿ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿ ತಪ್ಪಿತಸ್ಥ ಅಂಗಡಿ ಮಾಲೀಕರಿಗೆ ಶಿಕ್ಷೆ ವಿಧಿಸಬೇಕಾದ ಅಬಕಾರಿ ಇಲಾಖೆ ಮಾತ್ರ ನಿದ್ದೆಗೆ ಜಾರಿದೆ.

ದರ್ಪ ಬಲು ಜೋರು: ಕಡಿಮೆ ಬೆಲೆಗೆ ಸಿಗಬೇಕಾದ ಮದ್ಯವನ್ನು ಇನ್ನೂ ಹಳೆಯ ದರದಲ್ಲೇ ಮಾರಿ ಲಾಭ ಮಾಡಿಕೊಳ್ಳಲಾಗುತ್ತಿದೆ. ಗ್ರಾಹಕರು ಪ್ರಶ್ನಿಸಿದರೆ, ನಮಗೆ ಹೊಸ ಸ್ಟಾಕ್ ಬರಬೇಕು. ಅದರ ಮೇಲೆ ಪರಿಷ್ಕೃತ ಎಂಆರ್‌ಪಿ ಮುದ್ರಣವಾಗಿ ಬಂದಾಗ ಮಾತ್ರ ಕಡಿಮೆ ದರಕ್ಕೆ ಕೊಡಲು ಸಾಧ್ಯ. ಈಗ ಇರುವುದೆಲ್ಲ ಹಳೇ ಸ್ಟಾಕ್, ಬೇಕಿದ್ದರೆ ಬಾಟಲಿ ಮೇಲಿರುವ ದರ ನೋಡಿ ಎನ್ನುತ್ತಾರೆ.

​ಇದೇ ವ್ಯಾಪಾರಿಗಳು ಅಗ್ಗದ ಮದ್ಯ ಕೇಳಿದರೆ ಹಳೇ ಸ್ಟಾಕ್‌ನ್ನೇ ಹೊಸ ದರದಲ್ಲಿ ಮಾರಾಟ ಮಾಡುತ್ತಾರೆ. ಇದೆಲ್ಲ ಹಿಂಗ್ಯಾಕೆ ಅಂದರೆ ನೀವ್ಯಾರು ಕೇಳೋಕೆ? ನಾವು ಅಬಕಾರಿ ಇಲಾಖೆಗೆ ಮಾಮೂಲು ಕೊಡುತ್ತೇವೆ ಹೋಗ್ರಿ ಎಂದು ದಬಾಯಿಸುತ್ತಾರೆ ಎನ್ನುತ್ತಾರೆ ಮದ್ಯಪ್ರಿಯರು.

ರಸೀದಿ ನೀಡುತ್ತಿಲ್ಲ: ​ಅಬಕಾರಿ ನಿಯಮಾವಳಿಗಳ ಪ್ರಕಾರ ಗ್ರಾಹಕರು ಖರೀದಿಸಿದ ಪ್ರತಿ ಮದ್ಯದ ಬಾಟಲಿಗೂ ರಸೀದಿ ನೀಡಬೇಕಿರುವುದು ಕಡ್ಡಾಯ. ಆದರೆ ಜಿಲ್ಲೆಯ ಯಾವುದೇ ಮದ್ಯದಂಗಡಿಗಳಲ್ಲೂ ರಸೀದಿ ನೀಡುತ್ತಿಲ್ಲ. ​ಒಂದು ವೇಳೆ ರಸೀದಿ ಕೊಟ್ಟರೆ ಗ್ರಾಹಕರು ಅಬಕಾರಿ ಇಲಾಖೆ ಅಥವಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಬಹುದು ಎನ್ನುವ ಭಯ ಮದ್ಯದಂಗಡಿ ಮಾಲೀಕರನ್ನು ಕಾಡುತ್ತಿದೆ. ಇದಕ್ಕಾಗಿಯೇ, ರಸೀದಿ ಕೊಡುವುದಿಲ್ಲ, ಬೇಕಾದರೆ ಮದ್ಯ ಖರೀದಿಸಿ, ಇಲ್ಲವೇ ಬಿಡಿ ಎನ್ನುತ್ತಾರೆ.

ಗ್ರಾಮೀಣ ಭಾಗ ಹೊರತಾಗಿಲ್ಲ: ​ಗದಗ- ಬೆಟಗೇರಿ ಅವಳಿ ನಗರ ಸಹಿತ ಜಿಲ್ಲೆಯಲ್ಲಿ 112ಕ್ಕೂ ಹೆಚ್ಚು ಮದ್ಯದಂಗಡಿಗಳಿವೆ. ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ರೋಣ, ಮುಂಡರಗಿ, ನರಗುಂದ, ಗಜೇಂದ್ರಗಡದಲ್ಲೂ ದರ ಪರಿಷ್ಕರಣೆ ಸಮರ್ಪಕವಾಗಿ ಆಗಿಲ್ಲ. ಈ ಬಗ್ಗೆ ಸಾರ್ವಜನಿಕರು ದೂರು ನೀಡುವ ಗೊಡವೆಗೆ ಹೋಗುತ್ತಿಲ್ಲ. ಯಾರಾದರೂ ಇಲಾಖೆ ಸಂಪರ್ಕಿಸಿ ಮಾಹಿತಿ ನೀಡಿದರೆ ಗ್ರಾಮೀಣ ಭಾಗದಲ್ಲಿ ಅವನಿಗೆ ಗೂಸಾ ಬಿತ್ತಂತಲೆ ಲೆಕ್ಕ. ಇಷ್ಟೊಂದು ಪ್ರಮಾಣದಲ್ಲಿ ಮದ್ಯ ಮಾರಾಟಗಾರರು ದಬ್ಬಾಳಿಕೆ ನಡೆಸುತ್ತಿದ್ದಾರೆ.

ಅನುಮತಿ ಇಲ್ಲ: ಹೊಸ ಆದೇಶದನ್ವಯ ಪರಿಷ್ಕೃತ ದರದಂತೆ ಮದ್ಯ ಮಾರಾಟ ಮಾಡಬೇಕು. ಈ ಬಗ್ಗೆ ಮದ್ಯದಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಆದರೆ ಮಾಧ್ಯಮಗಳಿಗೆ ಹೇಳಿಕೆ ಕೊಡಲು ನಮಗೆ ಅನುಮತಿ ಇಲ್ಲ. ದಯವಿಟ್ಟು ನಮ್ಮ ಹೆಸರು ಪ್ರಕಟಿಸಬೇಡಿ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.ಕಟ್ಟುನಿಟ್ಟಾಗಿ ಜಾರಿ ಮಾಡಿ: ಅಬಕಾರಿ ಅಧಿಕಾರಿಗಳು ಕೇವಲ ಭರವಸೆ ನೀಡಿದರೆ ಸಾಲದು. ತಕ್ಷಣವೇ ಜಿಲ್ಲಾದ್ಯಂತ ಬಾರ್ ಮತ್ತು ವೈನ್ ಶಾಪ್‌ಗಳ ಮೇಲೆ ದಾಳಿ ನಡೆಸಿ, ಸರ್ಕಾರದ ಹೊಸ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ರಸೀದಿ ನೀಡದ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು ಎಂದು ಸಾಮಾಜಿಕ ಹೋರಾಟಗಾರ ವಿ.ಆರ್. ಗೋವಿಂದಗೌಡ್ರ ಹೇಳಿದರು.