ಕ್ಯೂಆರ್‌ ಕೋಡ್‌ ಆಧಾರಿತ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಚಾಲನಾ ಅನುಜ್ಞಾಪತ್ರ (ಡಿಎಲ್‌) ಸ್ಮಾರ್ಟ್‌ಕಾರ್ಡ್‌ ಅನ್ನು ರಾಮಲಿಂಗಾರೆಡ್ಡಿ ಅವರು ಬುಧವಾರ ಅರ್ಜಿದಾರರಿಗೆ ವಿತರಿಸಿದರು.

 ಬೆಂಗಳೂರು : ಕ್ಯೂಆರ್‌ ಕೋಡ್‌ ಆಧಾರಿತ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಚಾಲನಾ ಅನುಜ್ಞಾಪತ್ರ (ಡಿಎಲ್‌) ಸ್ಮಾರ್ಟ್‌ಕಾರ್ಡ್‌ ಅನ್ನು ರಾಮಲಿಂಗಾರೆಡ್ಡಿ ಅವರು ಬುಧವಾರ ಅರ್ಜಿದಾರರಿಗೆ ವಿತರಿಸಿದರು.

‘ಒನ್‌ ನೇಷನ್‌, ಒನ್‌ ಕಾರ್ಡ್‌’ ಯೋಜನೆ ಅಡಿಯಲ್ಲಿ ನೂತನ ಸ್ಮಾರ್ಟ್‌ ಕಾರ್ಡ್‌ ವಿತರಣೆಗೆ ಬುಧವಾರ ಸಾರಿಗೆ ಇಲಾಖೆ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ಆರ್‌ಸಿ ಮತ್ತು ಡಿಎಲ್‌ಗೆ ಅರ್ಜಿ ಸಲ್ಲಿಸಿದವರಿಗೆ ಹೊಸ ಸ್ಮಾರ್ಟ್‌ಕಾರ್ಡ್‌ಗಳು ಸಿಗಲಿವೆ. ಹೊಸ ಕಾರ್ಡ್‌ನಲ್ಲಿ ಕ್ಯೂಆರ್‌ ಅಳವಡಿಸಲಾಗಿದೆ. ಅವನ್ನು ಸ್ಕ್ಯಾನ್‌ ಮಾಡಿದರೆ ವಾಹನ ಮತ್ತು ಚಾಲಕರ ಮಾಹಿತಿಗಳು ದೊರೆಯಲಿವೆ. ಒಂದು ಕಾರ್ಡ್‌ಗೆ 200 ರು. ಶುಲ್ಕ ವಿಧಿಸಲಾಗುತ್ತಿದ್ದು, ಅದರಲ್ಲಿ 135 ರು. ಸರ್ಕಾರಕ್ಕೆ, 65 ರು. ಸೇವಾದಾರರಿಗೆ ದೊರೆಯಲಿದೆ ಎಂದರು.

ದೇಶದಲ್ಲಿಯೇ ಮೊದಲ ಬಾರಿಗೆ ಹೊಸ ಸ್ಮಾರ್ಟ್‌ಕಾರ್ಡ್‌

ದೇಶದಲ್ಲಿಯೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೊಸ ಸ್ಮಾರ್ಟ್‌ಕಾರ್ಡ್‌ ಮುದ್ರಿಸಲಾಗುತ್ತಿದೆ. ಪ್ರತಿ ದಿನ 15 ಸಾವಿರ ಕಾರ್ಡ್‌ಗಳನ್ನು ಮುದ್ರಿಸಿ ವಿತರಿಸಲಾಗುವುದು. ಇಟಲಿ ಮೂಲದ ಸಂಸ್ಥೆಯಿಂದ ಎರಡು ಯಂತ್ರಗಳನ್ನು ಸ್ಮಾರ್ಟ್‌ಕಾರ್ಡ್‌ ತಯಾರಿಕೆಗಾಗಿ ಮೀಸಲಿಡಲಾಗಿದೆ. ಹೀಗೆ ಮುದ್ರಿಸಲಾಗುವ ಸ್ಮಾರ್ಟ್‌ಕಾರ್ಡ್‌ಗಳನ್ನು ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯಿಂದ ಜಿಲ್ಲೆಗಳಿಗೆ ರವಾನಿಸಲಾಗುತ್ತದೆ. ಹಳೇ ಕಾರ್ಡ್‌ ಕೂಡ ಎಂದಿನಂತೆ ಚಲಾವಣೆಯಲ್ಲಿರಲಿದ್ದು, ಅರ್ಜಿ ಸಲ್ಲಿಸಿದವರಿಗೆ ಹೊಸ ಕಾರ್ಡ್‌ ಮುದ್ರಿಸಿ ವಿತರಿಸಲಾಗುವುದು. ಡಿ. 15ರಿಂದ ಹೊಸ ಆರ್‌ಸಿ ಮತ್ತು ಡಿಎಲ್‌ ವಿತರಿಸಲಾಗುತ್ತದೆ ಎಂದು ವಿವರಿಸಿದರು.

ಸ್ಮಾರ್ಟ್‌ ಕಾರ್ಡ್‌ ವಿಶೇಷತೆ

ನೂತನ ಸ್ಮಾರ್ಟ್‌ಕಾರ್ಡ್‌ಗಳನ್ನು ಪಾಲಿಕಾರ್ಬೋನೇಟ್‌ ಮೆಟಿರಿಯಲ್‌ನಿಂದ ತಯಾರಿಸಲಾಗುತ್ತಿದ್ದು, ಲೇಸರ್‌ ಎನ್‌ಗ್ರೇವಿಂಗ್‌ ಮೂಲಕ ಮುದ್ರಿಸಲಾಗುತ್ತದೆ. ಸ್ಮಾರ್ಟ್‌ಕಾರ್ಡ್‌ನಲ್ಲಿ 64 ಕೆಬಿ ಸಾಮರ್ಥ್ಯದ ಮೈಕ್ರೋಚಿಪ್‌ ಅಳವಡಿಸಲಾಗುತ್ತದೆ. ಹೆಚ್ಚುವರಿಯಾಗಿ ಎನ್‌ಐಸಿ ತಂತ್ರಾಂಶದ ಕ್ಯೂಆರ್‌ ಕೋಡ್‌ ಅನ್ನು ಮುದ್ರಿಸಲಾಗುತ್ತದೆ. ವಾಹನ ನೋಂದಣಿ ಪ್ರಮಾಣಪತ್ರದ ಸ್ಮಾರ್ಟ್‌ಕಾರ್ಡ್‌ನಲ್ಲಿ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಮಾಲೀಕರ ಹೆಸರು, ವಾಹನದ ವಿವರ, ಮಾಲಿನ್ಯದ ಪ್ರಮಾಣ ಸೇರಿದಂತೆ ಇನ್ನಿತರ ವಿವರಗಳಿರಲಿವೆ.