ಎಮಿಷನ್‌ ಟೆಸ್ಟ್‌ ನಕಲು ತಡೆಗೆ ಹೊಸ ಸಾಫ್ಟ್‌ವೇರ್‌!

| Published : Apr 01 2024, 12:49 AM IST / Updated: Apr 01 2024, 06:32 AM IST

ಸಾರಾಂಶ

ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ತಡೆಗೆ ತಪಾಸಣೆ ನಡೆಸಿ ನೀಡಲಾಗುವ ಪ್ರಮಾಣಪತ್ರ ನಕಲಿಯಾಗುವುದನ್ನು ತಡೆಯಲು ಸಾರಿಗೆ ಇಲಾಖೆ ಹೊಸ ವ್ಯವಸ್ಥೆ ಜಾರಿ 

ಗಿರೀಶ್‌ ಗರಗ

 ಬೆಂಗಳೂರು :  ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ತಡೆಗೆ ತಪಾಸಣೆ ನಡೆಸಿ ನೀಡಲಾಗುವ ಪ್ರಮಾಣಪತ್ರ ನಕಲಿಯಾಗುವುದನ್ನು ತಡೆಯಲು ಸಾರಿಗೆ ಇಲಾಖೆ ಹೊಸ ವ್ಯವಸ್ಥೆ ಜಾರಿಗೊಳಿಸುತ್ತಿದ್ದು, ಪ್ರಸ್ತುತ ಇರುವ ತಂತ್ರಾಂಶವನ್ನು ಬದಲಿಸಿ ಹೊಸ ಬಗೆಯ ಸುರಕ್ಷಿತ ಮತ್ತು ಪ್ರತಿ ಮಾಹಿತಿಯೂ ಸಾರಿಗೆ ಇಲಾಖೆಗೆ ತಲುಪುವಂತಹ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ನೋಂದಣಿ ಸಂಖ್ಯೆ ಶೇ.4ರಿಂದ 7ರಷ್ಟು ಹೆಚ್ಚುತ್ತಿದೆ. ಅದರಂತೆ 2019ರಲ್ಲಿ 2.45 ಕೋಟಿಯಿದ್ದ ವಾಹನಗಳ ಸಂಖ್ಯೆ 2024ರ ಫೆಬ್ರವರಿ ತಿಂಗಳ ಅಂತ್ಯಕ್ಕೆ 3.14 ಕೋಟಿಗೆ ಹೆಚ್ಚಳವಾಗಿದೆ. ಅದರಿಂದಾಗಿ ವಾಯು ಮಾಲಿನ್ಯದಲ್ಲಿ ಭಾರೀ ಪ್ರಮಾಣದಲ್ಲಿ ಬದಲಾವಣೆಯಾಗುತ್ತಿದ್ದು, ಅದನ್ನು ತಡೆಯಲು ಪ್ರತಿ ವಾಹನ ಪ್ರತಿ ವರ್ಷ ವಾಯು ಮಾಲಿನ್ಯ ತಪಾಸಣೆ ಮಾಡಿ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. 

 ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡುವುದರಲ್ಲಿ ಸಾಕಷ್ಟು ಲೋಪಗಳಾಗುತ್ತಿದ್ದು, ನಕಲಿ ಪ್ರಮಾಣಪತ್ರಗಳ ಹಾವಳಿ ಹೆಚ್ಚಾಗಿದೆ ಹಾಗೂ ಪ್ರಮಾಣಪತ್ರಗಳ ನೀಡಿಕೆ ಕುರಿತು ಸಾರಿಗೆ ಇಲಾಖೆಗೆ ಪೂರ್ಣ ಪ್ರಮಾಣದ ಮಾಹಿತಿ ಸಿಗುತ್ತಿಲ್ಲ. ಈ ಕಾರಣದಿಂದಾಗಿ ಸದ್ಯ ಇರುವ ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡುವ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತಿದ್ದು, ಅದಕ್ಕಾಗಿ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

67 ಆರ್‌ಟಿಒ, 2,460 ಮಾಲಿನ್ಯ ತಪಾಸಣಾ ಕೇಂದ್ರ:ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ 71 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (ಆರ್‌ಟಿಒ)ಯಿದ್ದು, ಅದರಲ್ಲಿ 67 ಆರ್‌ಟಿಒಗಳ ವ್ಯಾಪ್ತಿಯಲ್ಲಿ ಮಾತ್ರ ಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ರಾಜ್ಯದಲ್ಲಿ ಒಟ್ಟು 2,460 ಮಾಲಿನ್ಯ ತಪಾಸಣಾ ಕೇಂದ್ರಗಳಿದ್ದು, ಅದರಲ್ಲಿ ಬೆಂಗಳೂರಿನಲ್ಲಿಯೇ 562 ಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಆದರೆ, ಈ ತಪಾಸಣಾ ಕೇಂದ್ರಗಳಲ್ಲಿ ವಾಹನಗಳ ತಪಾಸಣೆ ನಡೆಸಿ ಪ್ರಮಾಣಪತ್ರ ನೀಡುವಲ್ಲಿ ಲೋಪಗಳು ಕಂಡುಬರುತ್ತಿರುವ ಕಾರಣ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.

ಈಗಿರುವ ವ್ಯವಸ್ಥೆಯಲ್ಲಿನ ಸಮಸ್ಯೆ:ಸದ್ಯ ಇರುವ ವ್ಯವಸ್ಥೆಯಂತೆ ಮಾಲಿನ್ಯ ತಪಾಸಣೆ ನಡೆಸುವ ಸಂದರ್ಭದಲ್ಲಿ ತಂತ್ರಾಂಶದಲ್ಲಿ ನಮೂದಿಸಲಾಗುವ ವಾಹನ ನೋಂದಣಿ ಸಂಖ್ಯೆಯ ವಾಹನವನ್ನೇ ಪರೀಕ್ಷೆಗೊಳಪಡಿಸಲಾಗಿದೆಯೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಹೀಗಾಗಿ ಯಾವುದೋ ವಾಹನದ ತಪಾಸಣಾ ಪ್ರಮಾಣಪತ್ರಕ್ಕೆ ಮತ್ಯಾವುದೋ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ ಪ್ರಮಾಣಪತ್ರ ನೀಡಲಾಗುತ್ತಿದೆ. ಅದರ ಜತೆಗೆ ಮಾಲಿನ್ಯ ಪರೀಕ್ಷೆ ನಡೆಸುವ ತಂತ್ರಾಂಶವು ಹಳೆಯದಾಗಿದ್ದು, ಸಮಸ್ಯೆಗಳು ಎದುರಾಗುತ್ತಿವೆ. ಹಾಗೆಯೇ, ಸದ್ಯ ಇರುವ ವ್ಯವಸ್ಥೆಯಲ್ಲಿ ನಕಲಿ ಪ್ರಮಾಣಪತ್ರವನ್ನು ಸೃಷ್ಟಿಸುವ ಅವಕಾಶ ಹೆಚ್ಚಿದೆ. ಜತೆಗೆ ಪ್ರಮಾಣಪತ್ರ ನವೀಕರಿಸುವುದಕ್ಕೆ ಸಂಬಂಧಿಸಿದಂತೆ ವಾಹನ ಮಾಲೀಕರಿಗೆ ಸೂಚನೆ ನೀಡುವ ವ್ಯವಸ್ಥೆಯಿಲ್ಲ.

ನಕಲಿ ತಡೆಗೆ ಮುಂದಾಗಿರುವ ಇಲಾಖೆ:ಸದ್ಯ ಇರುವ ವ್ಯವಸ್ಥೆಯಲ್ಲಿರುವ ಸಮಸ್ಯೆಗಳು ಹಾಗೂ ನಕಲಿ ಪ್ರಮಾಣಪತ್ರ ಹಾವಳಿ ತಡೆಗೆ ಪರಿಹಾರ ಎನ್ನುವಂತೆ ಹೊಸ ತಂತ್ರಾಂಶ ಸಿದ್ಧಪಡಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಅದರ ಪ್ರಕಾರ ಮಾಲಿನ್ಯ ತಪಾಸಣೆಗೊಳಪಡಿಸುವ ವಾಹನಗಳ ಪೂರ್ಣ ವಿವರ, ಭಾವಚಿತ್ರವನ್ನು ಜಿಯೋ ಟ್ಯಾಗಿಂಗ್‌ ಮೂಲಕ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಹೊಸ ಮೊಬೈಲ್ ಆ್ಯಪ್‌ ಅಭಿವೃದ್ಧಿಪಡಿಸಿ ವಾಹನ ಮಾಲೀಕರ ಬಳಕೆಗೆ ನೀಡಬೇಕು. ಅದರಿಂದ ಪ್ರಮಾಣಪತ್ರದ ಅವಧಿ ಮುಗಿಯುವುದು ತಿಳಿದು, ಕೂಡಲೆ ವಾಹನಗಳನ್ನು ಮಾಲಿನ್ಯ ತಪಾಸಣೆಗೊಳಪಡಿಸಲು ಸಹಕಾರಿಯಾಗಲಿದೆ. ಅದರ ಜತೆಗೆ ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಕೂಡ ಕಳುಹಿಸಲು ನಿರ್ಧರಿಸಲಾಗಿದೆ.

ಹಾಗೆಯೇ, ಎಲ್ಲ 2,460 ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆಗೊಳಪಡುವ ವಾಹನಗಳ ಮಾಲಿನ್ಯ ತಪಾಸಣೆಯ ಮಾಹಿತಿಯನ್ನು ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯಲ್ಲಿನ ಸರ್ವರ್‌ಗೆ ತಕ್ಷಣವೇ ರವಾನೆಯಾಗುವಂತೆ ಮಾಡಲಾಗುತ್ತದೆ. ಅದರಿಂದ ಪ್ರತಿ ವಾಹನದ ಮಾಹಿತಿ ಇಲಾಖೆಗೆ ದೊರೆಯಲಿದ್ದು, ನಕಲಿ ಪ್ರಮಾಣಪತ್ರದ ಹಾವಳಿ ತಡೆಯಲು ಸಹಕಾರಿಯಾಗಲಿದೆ ಎಂಬುದು ಸಾರಿಗೆ ಇಲಾಖೆ ಅಧಿಕಾರಿಗಳ ವಾದವಾಗಿದೆ.

ಮಾಲಿನ್ಯ ತಪಾಸಣೆ ಶುಲ್ಕದ ವಿವರ

ದ್ವಿಚಕ್ರ: 65 ರು.,

3 ಚಕ್ರ: 75 ರು.,

4 ಚಕ್ರ: 115 ರು.,

ಎಲ್ಲ ಡೀಸೆಲ್‌ ವಾಹನಗಳು: 160 ರು.ವಾಹನಗಳ ಮಾಲಿನ್ಯ ತಪಾಸಣಾ ಪ್ರಮಾಣಪತ್ರ ನೀಡುವುದಕ್ಕೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿ ಮಾಲಿನ್ಯ ತಪಾಸಣಾ ಪ್ರಮಾಣಪತ್ರ ನೀಡುವ ಎಲ್ಲ ಮಾಹಿತಿಯೂ ಸಾರಿಗೆ ಇಲಾಖೆಗೆ ದೊರಕುವಂತೆ ಮಾಡಲಾಗುತ್ತಿದೆ. ಅದರ ಜತೆಗೆ ಹಲವು ಕ್ರಮಗಳೊಂದಿಗೆ ನಕಲಿ ಪ್ರಮಾಣಪತ್ರ ವಿತರಣೆಯನ್ನು ತಡೆಯುವ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ.ಎ.ಎಂ. ಯೋಗೀಶ್‌ಸಾರಿಗೆ ಆಯುಕ್ತ