ರಫೀಕ ಕಲೇಗಾರ
ಅಣ್ಣಿಗೇರಿ: ನವಲಗುಂದ ತಾಲೂಕು ವ್ಯಾಪ್ತಿಯಲ್ಲಿ ಈ ಮೊದಲು ಪುರಸಭೆಯಾಗಿದ್ದ ಅಣ್ಣಿಗೇರಿಯು ನೂತನ ತಾಲೂಕಾಗಿ ಬರೋಬ್ಬರಿ ಏಳು ವರ್ಷಗಳು ಕಳೆದರೂ ಹೊಸ ತಾಲೂಕಿನ ಕಳೆ ಮಾತ್ರ ಕಿಂಚಿತ್ತೂ ಕಂಡಿಲ್ಲ. ಇನ್ನೂ ಅದೇ ರಸ್ತೆಗಳು, ಹಳೇಯ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಅಣ್ಣಿಗೇರಿ ಜನರಿಗೆ ನಾವು ಹೊಸ ತಾಲೂಕು ಸ್ಥಾನಮಾನ ಹೊಂದಿದ್ದೇವೆ ಎಂಬ ಭಾವನೆಯೇ ಬರುತ್ತಿಲ್ಲ.₹2.20 ಕೋಟಿ ವೆಚ್ಚದಲ್ಲಿ 2022ರಲ್ಲಿ ಶುರುವಾಗಿದ್ದ ತಾಲೂಕು ಪಂಚಾಯಿತಿ ಕಟ್ಟಡ ಕಾಮಗಾರಿ ಇನ್ನೂ ಮುಗಿದಿಲ್ಲ. ಅಂತಿಮ ಹಂತಕ್ಕೆ ಬಂದಿದ್ದು ಉದ್ಘಾಟನೆ ಭಾಗ್ಯ ಯಾವಾಗ ಎಂಬ ಪ್ರಶ್ನೆ ಎದ್ದಿದೆ. ಹೊಸ ತಾಪಂ ಕಚೇರಿ ಜೊತೆಗೆ ವಿವಿಧ ಇಲಾಖೆಗಳು ಕಾರ್ಯಾರಂಭ ಆಗಲಿವೆ ಎಂಬುದು ಇಲ್ಲಿಯ ಜನರ ಆಶಯ.
ನವಲಗುಂದಕ್ಕೇ ಹೋಗಬೇಕು: 2021-22ರ ಪೂರ್ವದಲ್ಲಿ ದಾಖಲಾತಿ ತರಲು ನವಲಗುಂದಕ್ಕೆ ಹೋಗಬೇಕಾದ ಸ್ಥಿತಿ ಇದೆ. ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಅಣ್ಣಿಗೇರಿ ತಾಲೂಕಿಗೆ ನಿಯೋಜನೆ ಮೇರೆಗೆ ಹಾಕಿದ್ದು, ಬಹುತೇಕ ಅವರೆಲ್ಲರೂ ನವಲಗುಂದ ಕೇಂದ್ರ ಸ್ಥಾನದಲ್ಲಿಯೇ ಕೆಲಸ ಮಾಡುತ್ತಾರೆ. ಹೀಗಾಗಿ, ಅಣ್ಣಿಗೇರಿ ತಾಲೂಕು ಜನರಿಗೆ ಅಧಿಕಾರಿಗಳೇ ಹೆಚ್ಚು ಲಭ್ಯವಾಗುವುದಿಲ್ಲ ಎನ್ನುವುದು ಸ್ಥಳೀಯರ ಬೇಸರ.ಆರೋಗ್ಯ ಇಲ್ಲದ ಕೇಂದ್ರ: ಇಲ್ಲಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಈ ಆದೇಶ ಕಾಗದದ ರೂಪದಲ್ಲಿ ಮಾತ್ರ ಇದ್ದು, ಕಾರ್ಯ ರೂಪಕ್ಕೆ ಬಂದಿಲ್ಲ. ತಜ್ಞ ವೈದ್ಯರಿಲ್ಲ. ಮೂಲಭೂತ ಸೌಕರ್ಯಗಳಿಲ್ಲ. ಸ್ವಚ್ಛತೆ ಮತ್ತು ಆರೋಗ್ಯ ಸಂಬಂಧಿ ಸೌಲಭ್ಯಗಳಿಲ್ಲ. ತಾಂತ್ರಿಕ ಉಪಕರಣಗಳಿಲ್ಲ, ಇಸಿಜಿ ಉಪಕರಣ ಇದ್ದರೂ ಉಪಯೋಗಿಸುವ ವೈದ್ಯರಿಲ್ಲ. ಹೀಗಾಗಿ ರೋಗಿಗಳು ನವಲಗುಂದ ಹಾಗೂ ಹುಬ್ಬಳ್ಳಿ ಕಡೆಗೆ ಮುಖ ಮಾಡಬೇಕಾದ ಅನಿವಾರ್ಯತೆ ಇದೆ.
ಅಣ್ಣಿಗೇರಿಯು ಹಳ್ಳಿಕೇರಿ, ನಾವಳ್ಳಿ, ತುಪ್ಪದ ಕುರಹಟ್ಟಿ, ನಲವಡಿ, ಶಿಶುವಿನಹಳ್ಳಿ, ಸಾಸ್ವಿಹಳ್ಳಿ, ಭದ್ರಾಪುರ ಹಾಗೂ ಶಲವಡಿ ಗ್ರಾಮ ಪಂಚಾಯ್ತಿ ಹಾಗೂ ಈ ವ್ಯಾಪ್ತಿಯ 20 ಗ್ರಾಮ ಹೊಂದಿದೆ. ಅಣ್ಣಿಗೇರಿಯು ಧಾರವಾಡ ಜಿಲ್ಲೆಯ ಐತಿಹಾಸಿಕ ಊರು. 11ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾದ ಅಮೃತೇಶ್ವರ ದೇವಾಲಯ ಹಾಗೂ ಕನ್ನಡದ ಆದಿಕವಿ ಪಂಪನು ಜನಿಸಿದ ಊರು. ಐತಿಹಾಸಿಕ ಅಣ್ಣಿಗೇರಿ ಅಭಿವೃದ್ಧಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ.
ಹೊಸ ತಾಲೂಕಾಗಿ ಏಳು ವರ್ಷಗಳಾಗಿದ್ದು ಕೂಡಲೇ ಸರ್ಕಾರಿ ಕಚೇರಿಗಳು ನಿರ್ಮಾಣವಾಗಲಿ. ಶಿಕ್ಷಣಾಧಿಕಾರಿ ಕಚೇರಿ, ಶತಮಾನ ಕಂಡ ಶಾಲೆಯ ಕಟ್ಟಡ ಪುನರ್ ನಿರ್ಮಾಣ, ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಸ್ಥಾಪನೆ, ತಾಲೂಕು ನ್ಯಾಯಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳು ನಿರ್ಮಾಣವಾಗಬೇಕು. ಈ ಮೂಲಕ ನವಲಗುಂದ ಅವಲಂಬನೆ ತಪ್ಪಿಸಬೇಕು ಎಂದು ಸ್ಥಳೀಯರಾದ ಪ್ರೊ, ಎಸ್.ಎಸ್. ಹರ್ಲಾಪುರ ಆಗ್ರಹಿಸಿದ್ದಾರೆ.