ಧಾರವಾಡ:

ಹಳೆಯ ಕಾಲದ ಪತ್ರಿಕೋದ್ಯಮ ಈಗ ಬದಲಾಗಿದ್ದು, ಹೊಸ ಹೊಸ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಪತ್ರಿಕಾ ರಂಗಕ್ಕೆ ಹೊಸ ದಿಕ್ಸೂಚಿ ಮೂಡಿಸಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಇಲ್ಲಿಯ ಕರ್ನಾಟಕ ವಿವಿ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ಎರಡು ದಿನ ಆಯೋಜಿಸಿರುವ ಮೀಡಿಯಾ ಫೆಸ್ಟ್ ಸ್ಪರ್ಧೆಯನ್ನು ಸೋಮವಾರ ಉದ್ಘಾಟಿಸಿದ ಅವರು, ಮಾಧ್ಯಮದ ಮುಂದೆ ಸಾಕಷ್ಟು ಹೊಸ ಸವಾಲುಗಳು ಎದುರಾಗುತ್ತಿದ್ದು, ತಂತ್ರಜ್ಞಾನದ ಜತೆಗೆ ಪತ್ರಿಕೋದ್ಯಮವನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕು ಎಂಬುದನ್ನು ಪತ್ರಿಕೋದ್ಯಮ ಕ್ಷೇತ್ರವು ಅರಿಯಬೇಕಿದೆ ಎಂದರು.

ವಿದ್ಯುನ್ಮಾನ ಮಾಧ್ಯಮ ಬೆಳೆದಂತೆ ಮುದ್ರಣ ಮಾಧ್ಯಮವು ಗೌಣವಾಗುತ್ತಿದೆ. ಡಿಜಿಟಲ್ ಮಾಧ್ಯಮ ಎಲ್ಲವನ್ನೂ ಒಳಗೊಳ್ಳುತ್ತಿದೆ ಎಂದ ಅವರು, ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗವು ಶ್ರೇಷ್ಠ ಮತ್ತು ಗೌರವದ ಸ್ಥಾನಮಾನ ಹೊಂದಿದೆ. ನಾಡಿನ ಇಂದಿನ ಅನೇಕ ಮಾಧ್ಯಮಗಳ ಮುಖ್ಯಸ್ಥರಾಗಿ, ಪ್ರಧಾನ ವರದಿಗಾರರಾಗಿ ಈ ವಿಭಾಗದ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದು ಕವಿವಿಯ ಹೆಮ್ಮೆ. ಈ ವಿಭಾಗಕ್ಕೆ ವಿಶೇಷ ಅವಕಾಶ ಮತ್ತು ಸೌಲಭ್ಯ ನೀಡಿ, ವಿಭಾಗದ ಉನ್ನತೀಕರಣಕ್ಕೆ ವಿವಿ ಸಹಕರಿಸಲಿದೆ ಎಂದು ಕುಲಪತಿ ಭರವಸೆ ನೀಡಿದರು.

ಕವಿವಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎ.ಎಸ್. ಬಾಲಸುಬ್ರಮಣ್ಯ ಮಾತನಾಡಿ, ಧಾರವಾಡದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಸ್ಯಾಟ್‌ಲೈಟ್ ಟಿವಿ ಬಂದಾಗ ಪತ್ರಿಕೆಗಳಿಗೆ ಸ್ವಲ್ಪಮಟ್ಟಿಗೆ ಹೊಡೆತ ಬಿತ್ತು. ಹೊಸ ಹೊಸ ಮಾಧ್ಯಮಗಳಿಂದ ಪತ್ರಿಕೆಗಳು ಕಳೆಗುಂದಿದವು. ಡಿಜಿಟಲ್ ತಂತ್ರಜ್ಞಾನ ಬಂದ ಮೇಲೆ ಪತ್ರಿಕೆಗಳ ಜಾಹೀರಾತು ಕುಂಠಿತವಾಯಿತು ಎಂದರು.


ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಕೆಲಸಗಳು ಆಗಲಿಲ್ಲ. ಡಿಜಿಟಲ್ ಪತ್ರಿಕೋದ್ಯಮ ಎಲ್ಲರಿಗೂ ಸುದ್ದಿಯನ್ನು ಬಿತ್ತರಿಸುವ ಸ್ವಾತಂತ್ರ‍್ಯ ನೀಡಿತು. ಯೂಟ್ಯೂಬ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳು ನಾಗರಿಕರಿಗೆ ಸುದ್ದಿ ಬರೆಯುವ, ಬಿತ್ತರಿಸುವ ಸಂಪೂರ್ಣ ಸ್ವಾತಂತ್ರ‍್ಯ ನೀಡಿದವು. ಇಂದು ಪತ್ರಿಕೆ, ನ್ಯೂಸ್ ಚಾನೆಲ್‌ಗಳು ಸಹ ಯೂಟ್ಯೂಬ್ ಚಾನೆಲ್ ತೆರೆದು ಸುದ್ದಿಗಳನ್ನು ಬಿತ್ತರಿಸುತ್ತಿವೆ. ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ವಿದ್ಯಾರ್ಥಿಗಳು ಹೊಸ ಹೊಸ ಮಾಧ್ಯಮಗಳಿಗೆ ಅವಶ್ಯಕವಾಗಿರುವ ಕೌಶಲ್ಯ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ ನೂಲ್ವಿ ಮಾತನಾಡಿ, ಪ್ರಸ್ತುತ ಪತ್ರಕರ್ತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಕೆಲವು ಸುದ್ದಿ-ಸಂಸ್ಥೆಗಳ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡುತ್ತಿವೆ. ಫ್ಯಾಕ್ಟ್‌ ಚೆಕ್ ಚಾನೆಲ್‌ಗಳು ಆರಂಭವಾಗಿವೆ. ಪ್ರಾಮಾಣಿಕ ಪತ್ರಕರ್ತರು ಕಡಿಮೆಯಾಗಿದ್ದಾರೆ. ಆದ್ದರಿಂದ ಅಭಿವ್ಯಕ್ತಿ ಸ್ವಾತಂತ್ರ‍್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎಂದರು.

ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ, ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಬೇಕು. ಆಯಾ ಕಾಲಕಾಲಕ್ಕೆ ಪತ್ರಕರ್ತರು ಬದಲಾವಣೆ ಹೊಂದಬೇಕು. ಪತ್ರಿಕೋದ್ಯಮ 4 ಚಕ್ರದ ವಾಹನ ಇದ್ದಂತೆ. ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಪತ್ರಿಕೋದ್ಯಮ ವಿಭಾಗಗಳು, ವಾರ್ತಾ ಇಲಾಖೆ ಇವುಗಳಿಂದ ಪತ್ರಿಕೋದ್ಯಮ ಸುಸೂತ್ರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಪತ್ರಕರ್ತರಾದ ಶ್ರೀಕಾಂತ ಕುಬಕಡ್ಡಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಂಜಯಕುಮಾರ ಮಾಲಗತ್ತಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಹಿರೇಮಠ, ಬಸವರಾಜ ಕಂಬಿ, ಪ್ರೊ. ಜೆ.ಎಂ. ಚಂದುನವರ, ಡಾ. ಪ್ರಭಾಕರ ಕಾಂಬಳೆ, ಡಾ. ವಿಶ್ವನಾಥ ಚಿಂತಾಮಣಿ, ಡಾ. ಚಿದಾನಂದ ಕಮ್ಮಾರ ಮತ್ತಿತರರು ಇದ್ದರು. ನಂತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸ್ಕ್ರಿಫ್ಟ್‌ ಬರವಣೆಗೆ, ಕಿರು ಸಂದರ್ಶನ, ವಾಕ್ ಥ್ರೂ ಮತ್ತು ಪಿಟುಸಿ, ರೇಡಿಯೋ ಜಾಕಿ ರೀಲ್ಸ್ ನಿರ್ಮಾಣ, ಮೊಬೈಲ್ ಜರ್ನಲಿಸಂ (ಮೊಜೋ) ಕುರಿತು ವಿವಿಧ ಸ್ಪರ್ಧೆಗಳು ಜರುಗಿದವು.