ವಳಂಬಿಗೆಯಲ್ಲಿ ನೂತನ ದೇವಾಲಯ ಉದ್ಘಾಟನೆ

| Published : Nov 05 2024, 12:36 AM IST

ಸಾರಾಂಶ

ವಳಂಬಿಗೆ ಗ್ರಾಮದಲ್ಲಿ ಶ್ರೀ ಈಶ್ವರಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಮತ್ತು ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ತಹಸೀಲ್ದಾರ್‌ ಕೆ.ಕೆ.ಕೃಷ್ಣಮೂರ್ತಿ ಮಾತನಾಡಿದರು. ಪ್ರಚಲಿತ ನಾಗರಿಕ ಸಮಾಜದಲ್ಲಿ ಅನಾಗರಿಕ ವರ್ತನೆ ಹೆಚ್ಚುತ್ತಿದ್ದು, ಸಮಾಜದಲ್ಲಿ ಮೊದಲಿಗೆ ಮನುಷ್ಯತ್ವದೊಂದಿಗೆ ಬದುಕುತ್ತಾ, ಸಹಬಾಳ್ವೆಯ ಜೀವನ ನಡೆಸಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪ್ರಚಲಿತ ನಾಗರಿಕ ಸಮಾಜದಲ್ಲಿ ಅನಾಗರಿಕ ವರ್ತನೆ ಹೆಚ್ಚುತ್ತಿದ್ದು, ಸಮಾಜದಲ್ಲಿ ಮೊದಲಿಗೆ ಮನುಷ್ಯತ್ವದೊಂದಿಗೆ ಬದುಕುತ್ತಾ, ಸಹಬಾಳ್ವೆಯ ಜೀವನ ನಡೆಸಬೇಕಿದೆ ಎಂದು ತಹಸೀಲ್ದಾರ್‌ ಕೆ.ಕೆ.ಕೃಷ್ಣಮೂರ್ತಿ ಸಲಹೆ ನೀಡಿದರು.ತಾಲೂಕಿನ ವಳಂಬಿಗೆ ಗ್ರಾಮದಲ್ಲಿ ಶ್ರೀ ಈಶ್ವರಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಮತ್ತು ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ೨೦ ವರ್ಷಗಳ ಹಿಂದೆ ಯಾವುದೇ ರೀತಿಯ ತಾರತಮ್ಯವಿಲ್ಲದೇ ಒಗ್ಗಟ್ಟಿನಿಂದ ಎಲ್ಲಾ ಕಾರ್ಯಗಳು ಸುಲಲಿತವಾಗಿ ಅನ್ಯೋನತೆಯಿಂದ ನಡೆಯುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಧುನೀಕತೆ ಬೆಳೆದಂತ್ತೆ ಎಲ್ಲವೂ ಕಾಣೆಯಾಗಿದೆ. ನಾನತ್ವ, ಶಾಂತಿ, ಸುವ್ಯವಸ್ಥೆ ಇಲ್ಲದ ಬದುಕಿನಲ್ಲಿ ರಾಜಕೀಯ ಸೇರಿಕೊಂಡು ಹಾಲಿನಲ್ಲಿ ಹುಳಿ ಹಿಂಡಿದಂತೆ ಎಲ್ಲರಲ್ಲಿಯೂ ಒಡಕು ಉಂಟಾಗಿದೆ. ಆದ್ದರಿಂದ ನಿಮ್ಮ ಸಾಮರಸ್ಯದ ಬದುಕಿಗಾಗಿ ರಾಜಕೀಯವನ್ನು ಬದಿಗಿಟ್ಟು, ಸಂತೋಷದಿಂದ ನೆಮ್ಮದಿಯ ಬದುಕು ರೂಪಿಸಿಕೊಳ್ಳಿ ಎಂದರು. ಶ್ರೀ ಈಶ್ವರಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಮತ್ತು ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಶನಿವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗಾಪೂಜೆಯೊಂದಿಗೆ ಗೋದೇವತಾ ಸಮೇತ ನೂತನ ವಿಗ್ರಹಗಳು ಮತ್ತು ೧೦೮ ಕುಂಭಗಳ ಪೂಜೆಯೊಂದಿಗೆ ಗ್ರಾಮದೇವತೆ ಸಮೇತ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಮೆರವಣಿಗೆ ನೆಡೆಸಲಾಯಿತು. ಭಾನುವಾರ ಗಂಗಾಪೂಜೆ, ಗಣಪತಿ ಪೂಜೆ ಹಾಗೂ ಹೋಮ ಹವನಾದಿಗಳನ್ನು ನಡೆಸಲಾಯಿತು. ಸೋಮವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಗುರುಹಿರಿಯರ ಉಪಸ್ಥಿತಿಯಲ್ಲಿ ನೂತನ ವಿಗ್ರಹಗಳ ಪ್ರತಿಷ್ಠಾಪನೆ, ನಂತರ ಕಳಹೋಮ, ರುದ್ರಹೋಮ, ಶ್ರೀ ಸ್ವಾಮಿಗೆ ಮೂಲ ಮೂರ್ತಿಗೆ ಪಂಚಾಮೃತ ಹಾಗೂ ಪಂಚಮೃತ್ತಿಕ ಅಭಿಷೇಕ, ಮಹಾರುದ್ರಭಿಷೇಕ ನೆರವೇರಿಸಲಾಯಿತು. ತೇಜೂರು ಶ್ರೀ ಸಿದ್ಧರಾಮೇಶ್ವರ ಮಠದ ಪೂಜ್ಯ ಕಲ್ಯಾಣ ಸ್ವಾಮೀಜಿಗಳು ಗೋಪುರದ ಕಳಸಾರೋಹಣ ನೆರವೇರಿಸಿದರು, ನಂತರ ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಹೇಮಾವತಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರು ಹಾಗೂ ತಾ.ಪಂ. ಮಾಜಿ ಸದಸ್ಯ ವಿ.ಕೆ.ನಾರಾಯಣ್, ವಕೀಲ ನಾಗರಾಜು, ಮುಖಂಡರಾದ ಡಿಶ್ ಮೋಹನ್ ಕುಮಾರ್‌, ವಿ.ಎನ್.ಪ್ರಸನ್ನ, ಜವರೇಗೌಡ, ಯೋಗೇಗೌಡ, ರಮೇಶ, ರಂಗೇಗೌಡ, ವೆಂಕಟರಾಮೇಗೌಡ, ಬಸವರಾಜು ಶೆಟ್ಟಿ, ಸಣ್ಣಕಾಳಮ್ಮ, ವಿ.ಟಿ.ತಿಮ್ಮೇಗೌಡ, ವಿ.ಟಿ.ಸುಬ್ಬೇಗೌಡ, ಸುರೇಶ್ ಹಾಗೂ ಗ್ರಾಮಸ್ಥರು ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.