ನೂತನ ವಸಂತದ ಸಂಭ್ರಮಾಚರಣೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆಗಟ್ಟಿತು.

ಹೊಸಪೇಟೆ: ನೂತನ ವಸಂತದ ಸಂಭ್ರಮಾಚರಣೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆಗಟ್ಟಿತು. ನಾನಾ ಕಡೆಗಳಲ್ಲಿ ಕೇಕ್ ಕತ್ತರಿಸಿ, ಕುಣಿದು ಕುಪ್ಪಳಿಸಿ, ಭರ್ಜರಿ ಪಾರ್ಟಿಯಲ್ಲಿ ಮುಳುಗಿದ್ದರು. 2026ರ ಹೊಸ ವರ್ಷದ ಮೊದಲ ದಿನ ಗುರುವಾರ ಬೆಳಗ್ಗೆಯಿಂದಲೇ ಮನೆಗಳ ಮುಂದೆ ರಂಗೋಲಿ ಹಾಕಿ ಕೇಕ್‌ಗಳನ್ನು ಕತ್ತರಿಸುವ ಮೂಲಕ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಮಿಂದೆದ್ದರು.

ಬುಧವಾರ ರಾತ್ರಿಯೇ ಜಿಲ್ಲೆಯಾದ್ಯಂತ ಮೋಜು ಮಸ್ತಿಯ ಪಾರ್ಟಿಗಳಲ್ಲಿ ತೊಡಗಿದ್ದರು. ಬಹುತೇಕ ಕಡೆಗಳಲ್ಲಿ ಕುಟುಂಬ ಸಮೇತ ದೇವಸ್ಥಾನ, ಪಾರ್ಕ್‌ಗಳಲ್ಲಿ ಸಂಭ್ರಮ ಜೋರಾಗಿತ್ತು. ಜಿಲ್ಲೆಯ ಎಲ್ಲೆಡೆಯೂ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಬೆಳಗ್ಗೆಯಿಂದಲೇ ಹೊಸ ಬಟ್ಟೆ ಉಟ್ಟು ದೇವಸ್ಥಾನ ಮತ್ತು ತಮ್ಮಿಷ್ಟದ ಸ್ಥಳಗಳಿಗೆ ತೆರಳಿ ಸಂತಸಪಟ್ಟರು.

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸೇರಿ ಕೇಕ್ ಕತ್ತರಿಸಿ ಹೊಸ ವರ್ಷಾಚರಿಸಿದರು. ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳ ಸಮೇತ ಸಿಬ್ಬಂದಿಗಳೆಲ್ಲರೂ ಒಂದೇ ಧಿರಿಸಿನಲ್ಲಿ ಮಿಂಚಿದರು.

ಹಂಪಿಯಲ್ಲಿ ದೇಶ, ವಿದೇಶದ ಪ್ರವಾಸಿಗರು ಹೊಸ ವರ್ಷದ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು. ಶಾಲಾ ವಿದ್ಯಾರ್ಥಿಗಳು, ಯುವಜನರ ಗುಂಪುಗಳು ಸ್ಮಾರಕಗಳ ವೀಕ್ಷಣೆಗೆ ಆಗಮಿಸಿದ್ದರು. ಸೂರ್ಯೋದಯ ವೀಕ್ಷಣೆ:

ಹಂಪಿಯ ಮಾತಂಗ ಪರ್ವತ, ಸಾಸಿವೆಕಾಳು ಗಣಪತಿ ದೇವಾಲಯ, ಹೇಮಕೂಟ, ಮಹಾನವಮಿ ದಿಬ್ಬ, ಮಾಲ್ಯವಂತ ದೇಗುಲ ಸೇರಿದಂತೆ ನಾನಾ ಕಡೆಯಲ್ಲಿ ದೇಶ-ವಿದೇಶಿ ಪ್ರವಾಸಿಗರು ಸೋಮವಾರ ಬೆಳಗ್ಗೆ ನೂತನ ವರ್ಷದ ಮೊದಲ ಸೂರ್ಯೊದಯ ವೀಕ್ಷಿಸಿ ಸಂಭ್ರಮಿಸಿದರು. ಇದಕ್ಕಾಗಿಯೇ ಮೊದಲೇ ಪ್ರವಾಸಿಗರು ಹಂಪಿಗೆ ಲಗ್ಗೆ ಇಟ್ಟಿದ್ದರು. ತುಂಗಭದ್ರೆಯಲ್ಲಿ ಪುಣ್ಯಸ್ನಾನ ಮಾಡಿ ಪಂಪಾವಿರೂಪಾಕ್ಷೇಶ್ವರ, ಯಂತ್ರೋದ್ಧಾರಕ ಆಂಜನೇಯ, ಕೋದಂಡ ರಾಮಸ್ವಾಮಿ, ಮಾಲ್ಯವಂತ ರಘುನಾಥ ಸ್ವಾಮಿ ಸೇರಿದಂತೆ ನಾನಾ ದೇಗುಲಗಳಲ್ಲಿ ದರ್ಶನ ಪಡೆದರು.

ಇನ್ನು ಹಂಪಿ ವಿಜಯವಿಠಲ ದೇಗುಲದ ಆವರಣದಲ್ಲಿರುವ ಕಲ್ಲಿನ ರಥ, ಉಗ್ರನರಸಿಂಹ ಸೇರಿದಂತೆ ಇತರೆ ಸ್ಮಾರಕಗಳ ಬಳಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಜತೆಗೆ ತುಂಗಭದ್ರಾ ಜಲಾಶಯ ಹಾಗೂ ಹಂಪಿ ಜೂ ಸೇರಿ ನಾನಾ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದರು.

ಮದ್ಯ ಖರೀದಿ ಜೋರು:

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದ ನಾನಾ ಬಾರ್‌ಗಳ ಮುಂದೆ ಜನರು ಮದ್ಯ ಖರೀದಿಗೆ ಮುಗಿಬಿದ್ದಿದ್ದರು. ಹೊಷ ವರ್ಷವನ್ನು ಸಂಭ್ರಮಿಸಲು ಮದ್ಯ ಖರೀದಿಸುವ ಸಲುವಾಗಿ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ಮಾಂಸದ ವ್ಯಾಪಾರವೂ ಜೋರಾಗಿ ನಡೆಯಿತು.