ಸಾರಾಂಶ
ಸಾಂಸ್ಕೃತಿಕ ನಗರಿ ಮೈಸೂರಿನ ಜನರು ಭಾನುವಾರ ರಾತ್ರಿ 2023ನೇ ವರ್ಷಕ್ಕೆ ವಿದಾಯ ಹೇಳಿ, 2024ನೇ ವರ್ಷವನ್ನು ಸಂಭ್ರಮ ಸಡಗರದಿಂದ ಸ್ವಾಗತಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನ ಜನರು ಭಾನುವಾರ ರಾತ್ರಿ 2023ನೇ ವರ್ಷಕ್ಕೆ ವಿದಾಯ ಹೇಳಿ, 2024ನೇ ವರ್ಷವನ್ನು ಸಂಭ್ರಮ ಸಡಗರದಿಂದ ಸ್ವಾಗತಿಸಿದರು.ಭಾನುವಾರ ರಾತ್ರಿ ವಿವಿಧ ಹೊಟೇಲ್, ಪಬ್, ಕ್ಲಬ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೇಕ್ ಕತ್ತರಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರಿದರು. ಕ್ಲಬ್, ಪಬ್ ಗಳಲ್ಲಿ ಸಂಗೀತಕ್ಕೆ ಕುಣಿದು ಸಂಭ್ರಮಿಸಿದರು.
ಮೈಸೂರು ಅರಮನೆ ಆವರಣದಲ್ಲಿ ಪೊಲೀಸ್ ಬ್ಯಾಂಡ್ ನಿಂದ ಸಂಗೀತ ರಸ ಮಂಜರಿ ಜರುಗಿತು. ಮಧ್ಯರಾತ್ರಿ 12ಕ್ಕೆ ಹಸಿರು ಪಟಾಕಿ ಸಿಡಿಸುವ ಮೂಲಕ ಹೊಸ ವರ್ಷವನ್ನು ಸಡಗರದಿಂದ ಸ್ವಾಗತಿಸಲಾಯಿತು. ಸಾವಿರಾರು ಮಂದಿ ಅರಮನೆ ಒಳಗೂ ಹೊರಗೂ ನೆರೆದಿದ್ದರು.ದೇವರ ದರ್ಶನ
ಮೈಸೂರಿಗರು ಸೋಮವಾರ ಬೆಳಗ್ಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ವರ್ಷದ ಮೊದಲ ದಿನವನ್ನು ದೇವರ ದರ್ಶನದೊಂದಿಗೆ ಆರಂಭಿಸಿದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ದೇವಸ್ಥಾನಗಳು, ಚರ್ಚ್ ಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಪೂಜೆ ಸಲ್ಲಿಸಿದರು.ಹೊಸ ವರ್ಷಾರಂಭದ ದಿನ ನಗರದ ಬಹುತೇಕ ದೇವಾಲಯಗಳಲ್ಲಿ ಬೆಳಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ 1 ಲಕ್ಷ ಲಾಡು ವಿತರಿಸಲಾಯಿತು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತರಿಗೆ ಉಚಿತವಾಗಿ ಲಾಡು ಪ್ರಸಾದ ನೀಡಲಾಯಿತು.ಚಾಮುಂಡಿಬೆಟ್ಟದಲ್ಲಿ ಜನವೋ ಜನ
ಹೊಸ ವರ್ಷದ ಮೊದಲ ದಿನವಾದ ಸೋಮವಾರ ಚಾಮುಂಡಿಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದರಿಂದಾಗಿ ಚಾಮುಂಡಿಬೆಟ್ಟದಲ್ಲಿ ಜನಸಂದಣಿ ಹೆಚ್ಚಾಗಿತ್ತು.ದೇವಾಲಯದಲ್ಲಿ ಸೋಮವಾರ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾದವು. 6 ಗಂಟೆ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು.
ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸರದಿಯಲ್ಲಿ ಆಗಮಿಸಿ ಚಾಮುಂಡೇಶ್ವರಿ ದರ್ಶನ ಪಡೆದರು. ಹೊಸ ವರ್ಷದ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದ ಒಳಾಂಗಣವನ್ನು ವಿಶೇಷವಾಗಿ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.ಹೊಸ ವರ್ಷದ ಹಿನ್ನೆಲೆಯಲ್ಲಿ ಸಾವಿರಾರು ಪ್ರವಾಸಿಗರು, ಭಕ್ತರು ಬೆಟ್ಟಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ವಾಹನ ಸಂಚಾರ ದಟ್ಟವಾಗಿತ್ತು. ಮಹಿಷಾಸುರ ಪ್ರತಿಮೆ ಹಾಗೂ ದೇವಿಕೆರೆ ಬಳಿ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದ್ದರೂ, ನೂರಾರು ವಾಹನಗಳು ಆಗಮಿಸಿದ ಹಿನ್ನೆಲೆಯಲ್ಲಿ ಸಂಪೂರ್ಣ ಭರ್ತಿಯಾಗಿತ್ತು.