ಹೊಸ ವರ್ಷಾಚರಣೆ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರಾಜ್ಯದ ಹಲವೆಡೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷಾಚರಣೆ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರಾಜ್ಯದ ಹಲವೆಡೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ಡಿ.31ರ ಮಧ್ಯಾಹ್ನ 3 ಗಂಟೆಯಿಂದ ಜನವರಿ 1ರ ಬೆಳಗ್ಗೆ 10 ಗಂಟೆಯವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ನಂದಿಬೆಟ್ಟ ಪ್ರವೇಶದ ಜತೆಗೆ ಹೋಟೆಲ್‌, ರೆಸಾರ್ಟ್‌, ಹೋಂಸ್ಟೇಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಷರತ್ತು ವಿಧಿಸಲಾಗಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಠಾಣಾ ವ್ಯಾಪ್ತಿಯ ಕರಿಘಟ್ಟದ ದೇವಸ್ಥಾನ, ಗಂಜಾಂನ ಘೋಸಾಯ್ ಘಾಟ್, ಸಂಗಮ್‌ನ ಕಾವೇರಿ ನದಿಯ ಸುತ್ತಮುತ್ತಲಿನ ಪ್ರದೇಶ, ಬಲಮುರಿ ಹಾಗೂ ಎಡಮುರಿ ಪ್ರದೇಶ ಸೇರಿ ಕಾವೇರಿ ಹಿನ್ನಿರು ಪ್ರದೇಶಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ತಹಸೀಲ್ದಾರ್ ಆದೇಶ ಹೊರಡಿಸಿದ್ದಾರೆ. ಪ್ರವೇಶದ್ವಾರಗಳಲ್ಲಿ ಬ್ಯಾರಿಕೇಡ್‌ ಹಾಕಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಪ್ರವಾಸಿ ತಾಣಗಳ ಬಳಿಯಲ್ಲಿರುವ ಅಂಗಡಿಗಳನ್ನು ತೆರೆಯದಂತೆ ಆದೇಶ ಹೊರಡಿಸಲಾಗಿದೆ.

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ, ಹೆಬ್ಬೆ ಫಾಲ್ಸ್‌ ಸೇರಿ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳ ಪ್ರವೇಶಕ್ಕೆ ಡಿಸೆಂಬರ್‌ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ, ಗೋಕರ್ಣ ಹಾಗೂ ಕಾರವಾರ ಬೀಚ್‌ಗಳಲ್ಲಿ ಹೊಸ ವರ್ಷಾಚರಣೆ ಸಂದರ್ಭ ಸಂಜೆ 6.30ರ ಬಳಿಕ ಯಾರೂ ಸಮುದ್ರ ಹಾಗೂ ನದಿಗೆ ಇಳಿಯದಂತೆ ಜಿಲ್ಲಾಡಳಿತದಿಂದ ಖಡಕ್ ಸೂಚನೆ ನೀಡಲಾಗಿದೆ. ಅತಿ ಅಪಾಯಕಾರಿ ಫಾಲ್ಸ್‌ಗಳ ಬಳಿ ತೆರಳದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.