ನಮಗೆ ಯುಗಾದಿಯಂದೇ ಹೊಸ ವರ್ಷ ಎನಿಸಬೇಕು: ಶಿವಾನಂದ ಗುರೂಜಿ

| Published : Feb 02 2025, 01:03 AM IST

ಸಾರಾಂಶ

ಜನವರಿ 1ರಂದು ಹೊಸ ವರ್ಷ ಎಂದು ಕುಪ್ಪಳಿಸಿ ಕುಣಿಯುವುದು ಹಿರಿಯ ಸಾಹಿತ್ಯಾಸಕ್ತರಿಗೆ ದ್ರೋಹ ಬಗೆದಂತೆ. ಹೊಸ ವರ್ಷದ ಆಚರಣೆಯಲ್ಲಿ ಕನ್ನಡಿಗರು ತಪ್ಪು ಹೆಜ್ಜೆಯಲ್ಲಿ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಸಾಹಿತಿ, ಆಧ್ಯಾತ್ಮಿಕ ಚಿಂತಕ ಹಾಗೂ ಸಮ್ಮೇಳನ ಸರ್ವಾಧ್ಯಕ್ಷ ಶಿವಾನಂದ ಗುರೂಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.

- ಕುವೆಂಪು ಕನ್ನಡ ಭವನದಲ್ಲಿ ದಾವಣಗೆರೆ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಜನವರಿ 1ರಂದು ಹೊಸ ವರ್ಷ ಎಂದು ಕುಪ್ಪಳಿಸಿ ಕುಣಿಯುವುದು ಹಿರಿಯ ಸಾಹಿತ್ಯಾಸಕ್ತರಿಗೆ ದ್ರೋಹ ಬಗೆದಂತೆ. ಹೊಸ ವರ್ಷದ ಆಚರಣೆಯಲ್ಲಿ ಕನ್ನಡಿಗರು ತಪ್ಪು ಹೆಜ್ಜೆಯಲ್ಲಿ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಸಾಹಿತಿ, ಆಧ್ಯಾತ್ಮಿಕ ಚಿಂತಕ ಹಾಗೂ ಸಮ್ಮೇಳನ ಸರ್ವಾಧ್ಯಕ್ಷ ಶಿವಾನಂದ ಗುರೂಜಿ ನುಡಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ದಾವಣಗೆರೆ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕವಿ ದ.ರಾ.ಬೇಂದ್ರೆ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಕಾವ್ಯದ ಆಶಯದಂತೆ ಗಣ್ಯ ಸಾಹಿತ್ಯಾಸಕ್ತರು ಯುಗಾದಿಯೇ ಹೊಸ ವರ್ಷದ ಆರಂಭವೆಂದು ನಿರ್ಣಯಿಸಿದ್ದಾರೆ. ಇದಕ್ಕೆ ಹಿರಿಯ ಸಾಹಿತಿಗಳು, ಕವಿಗಳು ಹಲವು ರೀತಿಯ ಕಾವ್ಯ, ಪ್ರಬಂಧಗಳನ್ನು ಮಂಡಿಸಿದ್ದಾರೆ. ಆದ್ದರಿಂದ ನಾವು ಇನ್ನಾದರೂ ಹೊಸ ವರ್ಷದ ಹಬ್ಬವನ್ನು ಯುಗಾದಿಯಂದೇ ಆರಂಭಿಸಬೇಕು ಎಂದರು.

ಹಬ್ಬಗಳಲ್ಲಿ ಕುಡಿತ, ಜೂಜಾಟಗಳ ವಿಕೃತಿ ನಿಲ್ಲಬೇಕು. ಹಿತ-ಮಿತ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬೇಕು. ನಾವಿದ್ದಲ್ಲೇ, ನಮ್ಮಲ್ಲೇ ದೇವರಿದ್ದಾನೆ ಎಂಬ ತಿಳಿವಳಿಕೆಯೊಂದಿಗೆ ನಮ್ಮೊಳಗಣ ರಾಕ್ಷಸೀ ಪ್ರವೃತ್ತಿ ಕೈಬಿಟ್ಟು, ಕನ್ನಡಮಾತೆಯ ನಿಜ ಪುತ್ರರಾಗಿ ಬಾಳುವುದನ್ನು ಕಲಿಯಬೇಕು ಎಂದರು.

ಸಂಕೇತದ ಹಿಂದಿನ ತತ್ವಗಳನ್ನು ನಮ್ಮ ದೈನಂದಿನ ಬದುಕಿನಲ್ಲಿರಿಸಿಕೊಳ್ಳದೇ, ಲಂಗುಲಗಾಮಿಲ್ಲದ ಕುದುರೆಯಂತೆ ಓಡುವುದು ಅಪರಾಧವಾಗಿದೆ. ಗಣಪತಿಯನ್ನು ನೀರಲ್ಲಿ ಮುಳುಗಿಸುವುದೆಂದರೆ ನಾವು ತತ್ವಗಳನ್ನು ಆಚರಿಸದಿದ್ದಲ್ಲಿ ಸತ್ತಂತೆ ಎಂಬ ಸಂದೇಶವಿದೆ. ಶಿವರಾತ್ರಿ ಹಬ್ಬದಲ್ಲಿ ಸದಾ ಜಾಗೃತನಾಗಿ ಇರಬೇಕೆಂಬ ಸಂದೇಶ ಅಡಗಿದೆ. ರಾತ್ರಿಯೆಲ್ಲಾ ದೂರದರ್ಶನ, ಸಿನಿಮಾ ಅಥವಾ ಇಸ್ಪೀಟ್ ಆಟದಲ್ಲಿ ಮಗ್ನರಾಗುವುದು ಹುಚ್ಚುತನದ ಆಚರಣೆ. ಗಣಪತಿ ಆಕೃತಿಯಲ್ಲಿರುವ ಸಂದೇಶವನ್ನು ಅರ್ಥ ಮಾಡಿಕೊಂಡು ಗಣೇಶ ಚತುರ್ಥಿ ಆಚರಿಸಬೇಕು. ಹಬ್ಬಗಳು ಅನುಭಾವಿಗಳು ಮೆಚ್ಚುವಂತೆ ಇರಬೇಕು ಎಂದು ಸಲಹೆ ನೀಡಿದರು.

ಹಿತವಾದ ಆಹಾರವನ್ನು ಮಿತವಾಗಿ ಸೇವಿಸುವುದು, ಕಾಲಮಾನಕ್ಕೆ ಅನುಸರಿಸಿ ಆಹಾರ ಸೇವನೆ ಇದ್ದರೆ ಯಾವುದೇ ರೋಗಗಳ ಕಾಟವಿರದು. ಒಂದುವೇಳೆ ರೋಗ ಬಂದರೆ ಆಯುರ್ವೇದ, ವ್ಯಾಯಾಮ, ಪ್ರಾಣಾಯಾಮ, ನಿಯಮಿತ ಆಹಾರ ಸೇವನೆಯಿಂದ ದೂರ ಮಾಡಬಹುದು. ಮೊಬೈಲ್ ದಾಸರಾಗದೇ ಸತ್ಯಶುದ್ಧ ಆಚರಣೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮೊಬೈಲ್, ಹೋಟೆಲ್ ನಮಗಾಗಿ ಇರಲಿ. ನಾವು ಅವುಗಳಿಗಾಗಿ ಇರುವುದು ಬೇಡ. ಕೆಟ್ಟ ಚಟಗಳ ದಾಸರಾಗದೇ, ಹಿರಿಯರು ಮೆಚ್ಚುವ ಸದಾಚಾರಗಳು ನಮಗಿರಲಿ ಎಂದು ಅವರು ತಮ್ಮದೇ ವಚನವೊಂದನ್ನು ಉಲ್ಲೇಖಿಸಿ ಸೂಚ್ಯವಾಗಿ ಹೇಳಿದರು.

ಸಮ್ಮೇಳನವನ್ನು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಶೆಟ್ಟಿ ಉದ್ಘಾಟಿಸಿದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಬಿ.ಟಿ.ಜಾಹ್ನವಿ, ಹಿರಿಯ ಸಾಹಿತಿ ಡಾ.ಲೋಕೇಶ ಅಗಸನಕಟ್ಟೆ, ಮಹಾನಗರ ಪಾಲಿಕೆ ಸದಸ್ಯರಾದ ಗೀತಾ ದಿಳ್ಯಪ್ಪ, ವೀಣಾ ನಂಜಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ ಒಡೇನಪುರ, ಮಾಜಿ ಜಿಲ್ಲಾಧ್ಯಕ್ಷ ಕೆ.ಶಿವಶಂಕರ, ಕಸಾಪ ಪದಾಧಿಕಾರಿಗಳಾದ ಜಿಗಳಿ ಪ್ರಕಾಶ್, ಬಿ.ದಿಳ್ಯಪ್ಪ, ಕೆ.ಪಿ.ಲಿಂಗರಾಜ, ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ವೀಣಾ ಕೃಷ್ಣಮೂರ್ತಿ ಕಸಾಪ ಪದಾಧಿಕಾರಿಗಳು ಇತರರು ಇದ್ದರು.

- - -

ಬಾಕ್ಸ್‌ * ಮಾನವೀಯತೆಗೆ ಜೈ ಎನ್ನಬೇಕು

ಹಿಂದಿ, ಕನ್ನಡ, ತಮಿಳು, ತೆಲುಗು, ಮಲೆಯಾಳ, ತುಳು ಈ ರೀತಿಯ ಒಣ ಒಡಕುಗಳನ್ನು ತೊರೆಯಬೇಕು. ಮನ ಉರಿದ, ಮನೆ ಮುರಿವ ಮುರ್ಖರನ್ನು ಜರಿದು, ಮಾನವೀಯತೆಗೆ ಜೈ ಎನ್ನಬೇಕು. ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡದ ಕಂಪನ್ನು ಕವಿ, ಸಾಹಿತಿಗಳ ಆಶಯದಂತೆ ಆಚರಣೆಯಲ್ಲಿ ಇರಿಸಿಕೊಳ್ಳಬೇಕು. ನಿತ್ಯ ಜೀವನದಲ್ಲಿ ಕನ್ನಡತನದ ಸೊಗಡನ್ನು ಆರಿಸಿಕೊಳ್ಳಬೇಕು. ಜೀವನದಲ್ಲಿ ಬೆಳಕು-ಕತ್ತಲೆ, ಶುಭ-ಅಶುಭ, ಬಲ-ಎಡ, ಹುಣ್ಣಿಮೆ- ಅಮಾವಾಸ್ಯೆ, ಹಗಲು-ರಾತ್ರಿ ಎಂಬ ಕಲ್ಪನೆಗೆ ಒಳಗಾಗುವುದು ಸರಿಯಲ್ಲ. ಇವೆಲ್ಲವೂ ಪ್ರಕೃತಿಯಲ್ಲಿನ ಕ್ರಮಗಳಾಗಿವೆ. ಇವುಗಳಾಚೆ ನಿಂತು, ಇದಕ್ಕೆ ಪೂರಕವಾಗುವಂತೆ, ಹೃನ್ಮನಗಳು ಆರಳುವಂತೆ ಸಾಹಿತ್ಯ ಕೃತಿಗಳನ್ನು ಅವಲೋಕಿಸುವ ಪ್ರಯತ್ನ ನಡೆಯಬೇಕು ಎಂದು ಸಮ್ಮೇಳನ ಸರ್ವಾಧ್ಯಕ್ಷರು ನುಡಿದರು.

- - - -1ಕೆಡಿವಿಜಿ34.ಜೆಪಿಜಿ:

ದಾವಣಗೆರೆಯಲ್ಲಿ ನಡೆದ ದಾವಣಗೆರೆ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಉದ್ಘಾಟಿಸಿದರು.