ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಹಾಡಿ ಸಮುದಾಯ‌ಭವನ ಬಳಿ ತೋಟದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಜನಿಸಿದ ಕೆಲವೇ ಗಂಟೆಗಳ ಅವಧಿಯ ಹೆಣ್ಣು ಶಿಶುವನ್ನು ತೋಟದಲ್ಲಿ ಎಸೆದು ಹೋದ ಪ್ರಸಂಗ ನಡೆದಿದೆ.

ಈ ವಿಷಯದ ಬಗ್ಗೆ ಸ್ಥಳೀಯರು ಕುಶಾಲನಗರ ಗ್ರಾಮಾಂತರ ಪೊಲೀಸರಿಗೆ, ಮತ್ತು ಆರೋಗ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ಸ್ಧಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ತಾಲೂಕು ವೈದ್ಯಾಧಿಕಾರಿ ಇಂದೂಧರ್, ಕುಶಾಲನಗರ ಪೊಲೀಸ್ ವೃತ್ತಾಧಿಕಾರಿ ದಿನೇಶ್ ಕುಮಾರ್ , ಗ್ರಾಮಾಂತರ ಠಾಣಾಧಿಕಾರಿ ಸ್ವಾಮಿ ಅವರು ಸ್ಧಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಹಜರ್ ಮಾಡಿ ನಂತರ ನವಜಾತ ಶಿಶುವನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇಲಾಖೆಯ ನಿಯಮಾನುಸಾರ ದಾಖಲು ಮಾಡಿಲಾಗಿದೆ.

ಈ ಪ್ರಕರಣ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೋಲಿಸ್ ಇಲಾಖೆ ಮೂಲಕ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.


ಈ ಸಂದರ್ಭದಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಆರ್.ಚಂದ್ರು, ನಂಜರಾಯಪಟ್ಟಣ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರತಾಪ್ ಸಾಗರ್, ಜಿಲ್ಲಾ ಡಿ.ಎಸ್ .ಓ. ಡಾ. ಶ್ರೀನಿವಾಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ, ಪೊಲೀಸ್ ಪೇದೆಗಳಾದ ಕಾಂತಿ, ಸುನಿಲ್ ಕುಮಾರ್, ದಿನೇಶ್ , ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.