ಬೆಂಗಳೂರಿನಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿರುವ ಶಿವಕುಮಾರ ಎಂಬವರ ಜೊತೆ ಯರಬಳ್ಳಿ ತಾಂಡದ ಕೌಶಲ್ಯ ಅವರ ವಿವಾಹ ಮೂರು ತಿಂಗಳ ಹಿಂದೆ ನಡೆದಿತ್ತು.

ಹರಪನಹಳ್ಳಿ: ತಾಲೂಕಿನ ಗುಳೇದಹಟ್ಟಿ ತಾಂಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಕೌಶಲ್ಯ(25) ಮೃತಪಟ್ಟ ನವವಿವಾಹಿತೆ.

ಬೆಂಗಳೂರಿನಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿರುವ ಶಿವಕುಮಾರ ಎಂಬವರ ಜೊತೆ ಯರಬಳ್ಳಿ ತಾಂಡದ ಕೌಶಲ್ಯ ಅವರ ವಿವಾಹ ಮೂರು ತಿಂಗಳ ಹಿಂದೆ ನಡೆದಿತ್ತು.

ನಿನ್ನೆ ಗ್ರಾಮಕ್ಕೆ ಬಂದಿದ್ದ ಪತಿ ಶಿವಕುಮಾರ ಹಾಗೂ ಅವರ ಸಂಬಂಧಿಕರು ಸೇರಿ ಆಕೆಯ ಶೀಲ ಶಂಕಿಸಿದ್ದಲ್ಲದೇ ವರದಕ್ಷಿಣೆ ಕಿರುಕುಳ ನೀಡಿದ್ದರು. ಆ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

18 ತೊಲೆ ಬಂಗಾರ, ಮೂರು ಲಕ್ಷ ರು. ನಗದು ನೀಡಿ ಹರಪನಹಳ್ಳಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಿಕೊಟ್ಟಿದ್ದೆವು. ಆದರೆ ಈಚೆಗೆ ವರದಕ್ಷಿಣೆ ಕೇಳುತ್ತಿದ್ದರು. ಇದೇ ಕಾರಣಕ್ಕೆ ಹೊಡೆದು ಹಾಕಿ ಆತ್ಮಹತ್ಯೆ ಕತೆ ಕಟ್ಟುತ್ತಿದ್ದಾರೆ ಎನ್ನುವುದು ಮೃತ ಮಹಿಳೆಯ ಸಂಬಂಧಿಕರ ಆರೋಪವಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಂತೋಷ ಚವ್ಹಾಣ, ವೃತ್ತ ನಿರೀಕ್ಷಕ ಮಹಾಂತೇಶ ಸಜ್ಜನ್, ಪಿಎಸ್‌ಐ ವಿಜಯಕೃಷ್ಣ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತಳ ತಾಯಿ ಅರಸೀಕೆರೆ ಪೊಲೀಸ್‌ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ.