ಪತ್ರಿಕಾ ವಿತರಣೆ ಮಾಡುವುದು ನಾಚಿಕೆಪಡುವ ವಿಷಯವಲ್ಲ ಎಂದು ಹೇಳಿದರು. ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದ ದಿವಂಗತ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸಹ ಬಾಲ್ಯದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿದ್ದರು ಎಂಬುದನ್ನು ಸ್ಮರಿಸಿದರು. ಪತ್ರಿಕೆ ವಿತರಣೆಯಿಂದ ದೊರಕುವ ಆದಾಯವನ್ನು ಯುವಕರು ತಮ್ಮ ವಿದ್ಯಾಭ್ಯಾಸಕ್ಕೆ ಬಳಸಿಕೊಂಡು ಪೋಷಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬೇಕು ಹಾಗೂ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪತ್ರಕರ್ತರು ಸಂಗ್ರಹಿಸುವ ಸುದ್ದಿಯನ್ನು ಓದುಗರ ಮನೆಬಾಗಿಲಿಗೆ ತಲುಪಿಸುವ ಪತ್ರಿಕಾ ವಿತರಕರೂ ಸಹ ಸುದ್ದಿಯ ಮಹತ್ವದ ರಾಯಭಾರಿಗಳೇ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಡಿ. ಪ್ರಸಾದ್ ಹೇಳಿದರು.

ನಗರದ ರಾಘವೇಂದ್ರ ಹೋಟೆಲ್‌ನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತಾಲೂಕು ಪತ್ರಿಕಾ ವಿತರಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹೊಸ ವರ್ಷ 2026ರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಯ ಹಾಗೂ ಆತಂಕವಿಲ್ಲದೆ ವರದಿ ಮಾಡುವ ವರದಿಗಾರರ ಪರಿಶ್ರಮ ಮತ್ತು ಚಳಿ, ಮಳೆ ಎನ್ನದೆ ಮುಂಜಾನೆಯೇ ಪತ್ರಿಕೆಯನ್ನು ಓದುಗರಿಗೆ ತಲುಪಿಸುವ ವಿತರಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ರಾಘವೇಂದ್ರ ಮಾತನಾಡಿ, ಪತ್ರಿಕಾ ವಿತರಣೆ ಮಾಡುವುದು ನಾಚಿಕೆಪಡುವ ವಿಷಯವಲ್ಲ ಎಂದು ಹೇಳಿದರು. ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದ ದಿವಂಗತ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸಹ ಬಾಲ್ಯದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿದ್ದರು ಎಂಬುದನ್ನು ಸ್ಮರಿಸಿದರು. ಪತ್ರಿಕೆ ವಿತರಣೆಯಿಂದ ದೊರಕುವ ಆದಾಯವನ್ನು ಯುವಕರು ತಮ್ಮ ವಿದ್ಯಾಭ್ಯಾಸಕ್ಕೆ ಬಳಸಿಕೊಂಡು ಪೋಷಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬೇಕು ಹಾಗೂ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ. ಆನಂದ್ ಮಾತನಾಡಿ, ಸಂಘಟನೆ ಇಲ್ಲದೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ ಎಂದರು. ಪತ್ರಕರ್ತರ ಸಂಘದಂತೆ ಪತ್ರಿಕಾ ವಿತರಕರ ಸಂಘದ ಸದಸ್ಯರ ಸಮಸ್ಯೆ, ನೋವು ನಲಿವಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸದಾ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ಸಭಾ ಕಾರ್ಯಕ್ರಮದ ನಂತರ ಪತ್ರಿಕಾ ವಿತರಕರಿಗೆ ಸಿಹಿತಿಂಡಿ ಹಾಗೂ ಉಡುಗೊರೆಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ರಾಮಚಂದ್ರ ಮತ್ತು ಕಣಕಟ್ಟೆ ಕುಮಾರ್, ಶಾಸಕರ ಆಪ್ತ ಸಹಾಯಕ ಲಕ್ಷ್ಮೀಶ್ ಬಾಬು, ಜಿಲ್ಲಾ ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜಿ.ಎನ್. ಮನೋಜ್ ಕುಮಾರ್, ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಾಲಕೃಷ್ಣ, ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೇಮಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್. ವಿ. ನವೀನ್ ಕುಮಾರ್, ಕಾರ್ಯದರ್ಶಿ ಟಿ.ಎಸ್. ಸ್ವಾಮಿ, ನಿರ್ದೇಶಕರಾದ ವಿಜಯ್ ಕುಮಾರ್, ಜಗದೀಶ್ ಸೇರಿದಂತೆ ಪತ್ರಕರ್ತರಾದ ಜೀವನ್, ರವಿ, ಸುರೇಶ್ ಹಾಗೂ ಇತರರು ಉಪಸ್ಥಿತರಿದ್ದರು.