ಪತ್ರಕರ್ತರು ಸಮಾಜದ ಕಣ್ಣುಗಳಿದ್ದಂತೆ ಸಮಾಜದ ಆಗುಹೋಗು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ

ಕೊಪ್ಪಳ: ಪತ್ರಿಕೆ ಸಮಾಜದ ಜ್ವಲಂತ ಸಮಸ್ಯೆ ನಿವಾರಿಸುವ ಶಕ್ತಿ ಎಂದು ಕುರಿ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.

ತಾಲೂಕಿನ ಅಳವಂಡಿ ಗ್ರಾಮದ ಶ್ರೀಗೋಣಿ ಬಸವೇಶ್ವರ ಸಮುದಾಯ ಭವನದಲ್ಲಿ ಅಳವಂಡಿ ಹೋಬಳಿ ಪತ್ರಕರ್ತರಿಂದ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಭಾರತ ವಿಶಾಲ ಹಾಗೂ ಪ್ರಜಾಪ್ರಭುತ್ವ ದೇಶ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಪತ್ರಿಕಾ ರಂಗವೂ ಒಂದು ಪ್ರಮುಖ ಅಂಗವಾಗಿದೆ. ಮೂರು ಅಂಗ ರಕ್ಷಿಸುವ ಅಂಗವೇ ಪತ್ರಿಕಾ ರಂಗವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗ ಗೌರವಿತವಾದುದು. ಪತ್ರಕರ್ತರು ಜನಸಾಮಾನ್ಯರ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕು.ನಿಖರತೆ ಬರೆಯುವುದು ಪತ್ರಕರ್ತರ ಕೆಲಸ. ಸುದ್ದಿ ನಾವು ಹುಡುಕಿಕೊಂಡು ಹೋಗಬೇಕು. ಅಂದಾಗ ನಮ್ಮನ್ನು ಪತ್ರಿಕೆ ಗುರುತಿಸುತ್ತದೆ. ಪತ್ರಿಕೆ ಎನ್ನುವುದು ಸಮಾಜದಲ್ಲಿನ ಜ್ವಲಂತ ಸಮಸ್ಯೆ ನಿವಾರಿಸುವ ಶಕ್ತಿಯಾಗಿದೆ ಎಂದರು.

ಶ್ರೀಮರುಳಾರಾದ್ಯ ಶಿವಾಚಾರ್ಯ ಸ್ವಾಮಿ ಮಾತನಾಡಿ, ಪತ್ರಕರ್ತರು ಸಮಾಜದ ಕಣ್ಣುಗಳಿದ್ದಂತೆ ಸಮಾಜದ ಆಗುಹೋಗು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸತ್ಯ, ನಿಷ್ಠೆ ಮತ್ತು ವಾಸ್ತವಾಂಶಗಳಿಗೆ ಆದ್ಯತೆ ನೀಡಿ ಸಮಾಜದ ಧ್ವನಿಯಾಗಬೇಕು ಎಂದರು.

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ವಿರೇಶ ಸಜ್ಜನ ಮಾತನಾಡಿ, ಪತ್ರಿಕೋಧ್ಯಮವು ಕೇವಲ ಸುದ್ದಿ ಪ್ರಕಟಿಸುವ ಮಾಧ್ಯಮವಾಗಿರದೆ ಸಮಾಜದ ಸಮಸ್ಯೆ ಬೆಳಕಿಗೆ ತಂದು ಸಂಬಂಧಿಸಿದವರ ಗಮನ ಸೆಳೆಯುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿಯುತ ವೇದಿಕೆಯಾಗಿದೆ. ಗ್ರಾಮೀಣ ಭಾಗದ ಪತ್ರಕರ್ತರು ಸ್ಥಳೀಯ ಜನರ ಸಮಸ್ಯೆ, ರೈತರ ಸಂಕಷ್ಟ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿಗೆ ಸಂಬಂಧಿಸಿದ ವಿಷಯ ನಿರಂತರವಾಗಿ ವರದಿ ಮಾಡುವ ಮೂಲಕ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ತಾಪಂ ಮಾಜಿ ಸದಸ್ಯ ಡಾ. ಸಿದ್ದಲಿಂಗಸ್ವಾಮಿ ಇನಾಮದಾರ ಮಾತನಾಡಿ, ಅಳವಂಡಿ ಹೋಬಳಿಯ ಪತ್ರಕರ್ತರು ಗ್ರಾಮೀಣ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಪತ್ರಿಕಾ ವರದಿ ಪ್ರಮುಖ ಪಾತ್ರ ವಹಿಸುತ್ತಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ಸಾರ್ವಜನಿಕರ ಸಮಸ್ಯೆ ತಂದು, ಅವುಗಳಿಗೆ ಸ್ಪಂದನೆ ದೊರಕುವಂತೆ ಮಾಡುವಲ್ಲಿ ಪತ್ರಕರ್ತರ ಸೇವೆ ಶ್ಲಾಘನೀಯವಾಗಿದೆ ಎಂದರು.

ವಕೀಲ ಗುರುಬಸವರಾಜ ಹಳ್ಳಿಕೇರಿ ಮಾತನಾಡಿ, ವರದಿಗಾರಿಕೆಯಲ್ಲಿ ದಕ್ಷತೆ,ನಿಷ್ಠುರತೆ ಹಾಗೂ ನಿಖರತೆ ಕಂಡುಕೊಳ್ಳಬೇಕು. ಇದರಲ್ಲಿ ಭಾಷ ಪ್ರವೃತ್ತಿ ಸಾಧಿಸಬೇಕು. ಮಾಧ್ಯಮಗಳಲ್ಲಿ ಮುದ್ರಣ ಮಾಧ್ಯಮ ಎನ್ನುವುದು ಬಹುಮುಖ್ಯವಾಗಿದೆ ಎಂದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಿಎಸ್ಐ ಪ್ರಹ್ಲಾದ ನಾಯಕ, ಭರಮಪ್ಪ ನಗರ, ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಗುರುಬಸವರಾಜ ಹಳ್ಳಿಕೇರಿ, ಅನ್ವರಹುಸೇನ ಗಡಾದ, ಚೌಡಪ್ಪ ಜಂತ್ಲಿ, ವೀರೇಶ ಸಜ್ಜನ, ಸಂಜಯ ಚವಡಾಳ, ಕೊಟ್ರಪ್ಪ ಅಂಗಡಿ, ನೀಲಪ್ಪ ಕರಿಗಾರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ ಪಾಟೀಲ, ಡಾ. ನಾಗರಾಜ ಹಾವಿನಾಳ, ನವೀನ ಇನಾಮದಾರ, ರೂಪಾ ನಾಯ್ದು, ಶರಣಬಸನಗೌಡ ಪಾಟೀಲ, ಹನುಂಮತಪ್ಪ ಕುರಿ, ರಮೇಶ ಬುಡ್ಡನಗೌಡ, ನೀಲಪ್ಪ ಹಕ್ಕಂಡಿ ಇತರರು ಇದ್ದರು.