NH tree removal begins amidst land acquisition process

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮೂಡಿಗೆರೆ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ-173ರ ಭೂಸ್ವಾಧೀನ ಪ್ರಕ್ರಿಯೆ ಬಾಕಿ ನಡುವೆಯೂ ಮರ ತೆರವು ಕಾರ್ಯ ಆರಂಭಿಸಲಾಗಿದ್ದು, ಸಿವಿಲ್‌ ಕಾಮಗಾರಿ ಆರಂಭ ಯಾವಾಗ ಎಂಬುದು ಇನ್ನೂ ಖಾತ್ರಿ ಇಲ್ಲ.

ಕಳೆದ 2023-24ರಲ್ಲಿ ಮೂಡಿಗೆರೆಯಿಂದ ಮೂಗುತಿಹಳ್ಳಿ ವರೆಗಿನ ರಾಷ್ಟ್ರೀಯ ಹೆದ್ದಾರಿ 173ರಲ್ಲಿ 26 ಕಿ.ಮೀ ಉದ್ದದ ರಸ್ತೆಯನ್ನು ₹400 ಕೋಟಿ ವಚ್ಚದಲ್ಲಿ ಅಭಿವೃದ್ಧಿ ಪಡಿಸುದರೆ, ಭೂಸ್ವಾಧೀನ ಪ್ರಕ್ರಿಯೆ ಗೊಂದಲದಿಂದ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಕಳೆದ ಸೆ.2ರಂದು ಸಂಸದರ ಅಧ್ಯಕ್ಷತೆಯಲ್ಲಿ ನಡೆಸಲಾದ ದಿಶಾ ಸಭೆಯಲ್ಲಿ ಸೆ.15ರ ಒಳಗೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ಸೆ.16ಕ್ಕೆ ಕಾಮಗಾರಿ ಆರಂಭಿಸಬೇಕೆಂದು ಭೂಸ್ವಾಧೀನ ಅಧಿಕಾರಿಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಗಡುವು ನೀಡಲಾಗಿತ್ತು.ಆದರೆ, ಭೂಸ್ವಾಧೀನ ಪ್ರಕ್ರಿಯೆ ತೊಡಕು ಇನ್ನೂ ಪರಿಹಾರಗೊಂಡಿಲ್ಲ. ಆದರೂ ಮರ ತೆರವು ಕಾಮಗಾರಿಯನ್ನು ಕಳೆದ ಮೂರ್ನಾಲ್ಕು ದಿನಗಳಿಂದ ಆರಂಭಿಸಲಾಗಿದೆ.

ಸದ್ಯ ವಸ್ತಾರೆ ಹಾಗೂ ಅಡಗೂರು ಬಳಿ ತಲಾ ಒಂದೊಂದು ತಂಡಗಳು ಮರ ತೆರವು ಕಾರ್ಯ ನಡೆಸಲಾಗುತ್ತಿದ್ದು, ಮತ್ತೊಂದು ತಂಡವನ್ನು ಮೂಡಿಗೆರೆ ಕಡೆಯಿಂದ ಆರಂಭಿಸುವುದಕ್ಕೆ ಚಿಂತನೆ ನಡೆಸಲಾಗಿದೆ.ದಿನಕ್ಕೆ ಪ್ರತಿ ತಂಡ 6 ರಿಂದ 7 ಮರಗಳನ್ನು ತೆರವು ಮಾಡಲಾಗುತ್ತಿದ್ದು, ಒಟ್ಟು 2326 ಮರಗಳನ್ನು ತೆರವುಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಹಾರವಾಗದ ಪ್ರಕ್ರಿಯೆ:ಒಟ್ಟು 271 ಸರ್ವೇ ನಂಬರ್‌ ನಲ್ಲಿ ಭೂಸ್ವಾಧೀನ ಮಾಡಿಕೊಳ್ಳಬೇಕಿತ್ತು. ಈ ಪೈಕಿ 27 ಸರ್ಕಾರ ಭೂಮಿ ಇದೆ. ಉಳಿದಂತೆ ಖಾಸಗಿಯ 244ರಲ್ಲಿ ಈಗಾಗಲೇ 107 ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. 53 ಸಂತ್ರಸ್ತರಿಗೆ ನೀಡಬೇಕಾದ ಪರಿಹಾರವನ್ನು ಕೋರ್ಟ್‌ಗೆ ಠೇವಣೆ ಮಾಡಲಾಗಿದೆ. ಇನ್ನೂ 84 ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಹಣ ನೀಡುವುದಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ದಾಖಲಾತಿ ನೀಡದಿರುವುದರಿಂದ ಕೋರ್ಟ್‌ಗೆ ಠೇವಣಿಗೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಎಸಿ ಬದಲಾವಣೆ ತೊಡಕು:ಚಿಕ್ಕಮಗಳೂರು ಉಪ ವಿಭಾಗದ ಕಂದಾಯ ಉಪವಿಭಾಗಾಧಿಕಾರಿ ಅವರಿಗೆ ಭೂಸ್ವಾಧೀನದ ಕಾರ್ಯದ ಜವಾಬ್ದಾರಿ ನೀಡಲಾಗಿದೆ. ಆದರೆ, ಪದೇ ಪದೆ ಉಪ ವಿಭಾಗಾಧಿಕಾರಿ ವರ್ಗಾವಣೆ ಸಹ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಇತ್ತೇಚೆಗೆ ಸರ್ಕಾರಿ ಉಪ ವಿಭಾಗಾಧಿಕಾರಿಯನ್ನು ನಿಯೋಜನೆ ಮಾಡಲಾಗಿದ್ದ ಎಸ್‌.ರವಿ ಅವರನ್ನು ವರ್ಗಾವಣೆ ಮಾಡಿ ಪ್ರೊಫೇಷನರಿ ಐಎಎಸ್‌ ಅಧಿಕಾರಿ ಪುರುರಾಜ್‌ ಸಿಂಗ್‌ ಸೋಲಂಕಿ ಅವರನ್ನು ನಿಯೋಜಿಸಲಾಗಿದೆ. ಇದು ಸಹ ಭೂಸ್ವಾಧೀನ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಬಾಕ್ಸ್‌...

ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಮರಗಳ ತೆರವಿಗೆ ವಿರೋಧ

ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 173ರ ಮೂಡಿಗೆರೆ-ಮೂಗುತಿಹಳ್ಳಿ ನಡುವಿನ 26.326 ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿಗಾಗಿ 2,500ಕ್ಕೂ ಅಧಿಕ ಮರ ಹಾಗೂ ಎರಡು ಎಕರೆ ಅರಣ್ಯ ಪ್ರದೇಶ ತೆರವುಗೊಳಿಸಲು ಮುಂದಾಗಿರುವುದಕ್ಕೆ ಪರಿಸರ ಸಂರಕ್ಷಣಾ ಕಾರ್ಯಕರ್ತ ಜಿ. ವೀರೇಶ್ ವಿರೋಧ ವ್ಯಕ್ತಪಡಿಸಿದ್ದಾರೆ.

ರಸ್ತೆ ಬದಿಯಲ್ಲಿರುವ ನೂರು ವರ್ಷಕ್ಕೂ ಹಳೆಯದಾದ ವಿವಿಧ ಜಾತಿಯ ಬೃಹತ್ ಮರಗಳ ಪೈಕಿ ಈಗಾಗಲೇ 50ಕ್ಕೂ ಹೆಚ್ಚು ಮರ ಕಡಿದು ತೆರವುಗೊಳಿಸಲಾಗುತ್ತಿದೆ. ಶಿರಗುಂದ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮರಗಳ ತೆರವು ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವೃಕ್ಷ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಹಾಗೂ ನಿಯಮಗಳಂತೆ ಮರಗಳ ತೆರವು ಕುರಿತು ಸಾರ್ವಜನಿಕ ಅಹವಾಲು ಸಭೆ ನಡೆಸಬೇಕಾಗಿದ್ದರೂ, ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಸಭೆ ನಡೆದಿರುವ ಬಗ್ಗೆಯೂ ಮಾಹಿತಿ ಲಭ್ಯವಿಲ್ಲ. ಮರಗಳ ಕಡಿತಕ್ಕೆ ಅಗತ್ಯ ಅನುಮತಿ ಪಡೆಯಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಆರೋಪಿಸಿದ್ದಾರೆ.

ರಾ.ಹೆ ಪ್ರಾಧಿಕಾರದ ಹಸಿರು ಹೆದ್ದಾರಿ ನೀತಿ (Green Highway Policy) ಯಲ್ಲಿ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಿ ಇಲ್ಲವೇ ಸಂರಕ್ಷಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ರಾಜ್ಯ ಅರಣ್ಯ ಇಲಾಖೆಯ ಮಾರ್ಗಸೂಚಿಗಳಿದ್ದರೂ ಅವುಗಳನ್ನು ಪರಿಗಣಿಸದೆ ಮರಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ವೀರೇಶ್ ಹೇಳಿದ್ದಾರೆ.

ಮರಗಳ ತೆರವು ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಿ, ಕಾನೂನು ಹಾಗೂ ಮಾರ್ಗ ಸೂಚಿಗಳನ್ನು ಪಾಲಿಸುವ ಜತೆಗೆ ಸಾಧ್ಯವಿರುವ ಮರಗಳನ್ನು ಸ್ಥಳಾಂತರಿಸಿ ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ನಿಯಮ ಉಲ್ಲಂಘಿಸಿ ಮರ ತೆರವುಗೊಳಿಸಿದ್ದರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೀರೇಶ್ ಆಗ್ರಹಿಸಿದ್ದಾರೆ.