ಸಾರಾಂಶ
ಕುಮಟಾ: ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಸುತ್ತಿಲ್ಲ. ವಿಳಂಬದಿಂದ ಸಮಸ್ಯೆಗಳಾಗುತ್ತಿರುವುದು ಗಮನಕ್ಕೆ ಬಂದಿದೆ.ಎನ್.ಎಚ್.ಎ.ಐ ಬೇಜವಾಬ್ದಾರಿ ಬಿಟ್ಟು ಹೆದ್ದಾರಿ ಕಾಮಗಾರಿ ಸಮರ್ಪಕವಾಗಿ ಮಾಡಿ ಸಾರ್ವಜನಿಕರಿಗೆ ರಸ್ತೆ ಬಿಟ್ಟುಕೊಡಬೇಕೆಂದು ನಾನು ಕೇಂದ್ರ ಸರ್ಕಾರಕ್ಕೆ ಜನರ ಪರ ಆಗ್ರಹಿಸುತ್ತೇನೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕುಮಟಾದ ಆಡಳಿತ ಸೌಧಕ್ಕೆ ಮಂಗಳವಾರ ಭೇಟಿ ನೀಡಿ ಭೂಸುರಕ್ಷಾ ಯೋಜನೆಯಡಿ ಹಳೆ ದಾಖಲಾತಿಗಳ ಡಿಜಿಟಲೀಕರಣ ಕಾರ್ಯದ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ರಾ. ಹೆದ್ದಾರಿ ಅಂಚಿನಲ್ಲಿ ಗುಡ್ಡಗಳನ್ನು ಕಡಿದಾಗಿ ಕತ್ತರಿಸಿದ್ದರಿಂದ ಸಮಸ್ಯೆ ಉಂಟಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಸ್ವಾಧೀನಗೊಂಡ ಅರಣ್ಯ ಭೂಮಿಗೆ ಪರ್ಯಾಯವಾಗಿ ಹಾವೇರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕಂದಾಯ ಭೂಮಿ ನೀಡಲಾಗಿದೆ. ಆದರೂ ಕಾಮಗಾರಿ ವೇಗ ಪಡೆಯುತ್ತಿಲ್ಲ ಎಂದರು.ರಾಜ್ಯದಲ್ಲಿ ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಭೂಸುರಕ್ಷಾ ಯೋಜನೆಯಡಿ ಒಂದು ಅಭಿಯಾನ ರೂಪದಲ್ಲಿ ಈ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ರಾಜ್ಯದಲ್ಲಿ ೧೦೦ ಕೋಟಿ ಪುಟಗಳಷ್ಟು ಮೂಲದಾಖಲೆಗಳಿದ್ದು ಅವುಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಸ್ಥಳೀಯ ನಾಡಕಚೇರಿಯಲ್ಲಿಯೇ ಆನ್‌ಲೈನ್ ಅರ್ಜಿ ಸಲ್ಲಿಸಿ ಅಲ್ಲಿಯೇ ದಾಖಲೆಗಳನ್ನು ಸಾರ್ವಜನಿಕರು ಪಡೆಯುವಂತಾಗಬೇಕು. ಮಧ್ಯವರ್ತಿಗಳ ಅವಲಂಬನೆ ಇಲ್ಲದೇ, ಕಚೇರಿಗಳಿಗೆ ಅಲೆದಾಡದೇ ಮನೆಯಲ್ಲಿಯೇ ಕುಳಿತು ದಾಖಲೆ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ಡಿಜಿಟಲೀಕರಣ ನಡೆದಿದೆ. ಕೆಲವು ಹಳೆಯ ದಾಖಲೆಗಳು ಹಾಳಾಗುವ ಹಂತದಲ್ಲಿವೆ. ಕೆಲವೆಡೆ ದಾಖಲೆ ಕಳೆದುಹೋಗಿ ತೊಂದರೆ ಆಗಿದೆ. ಮುಂದೆ ಹಾಗಾಗದಂತೆ ತಡೆಯುವುದರಿಂದ ಅನೇಕ ಕುಟುಂಬಗಳಿಗೆ ಅನುಕೂಲವಾಗಲಿದೆ.
ರಾಜ್ಯದ ಬೇಡಿಕೆಯಂತೆ ಫೈನಾನ್ಸ್ ಕಮಿಷನ್ ಗ್ರ್ಯಾಂಟ್‌ನ್ನು ಕೇಂದ್ರ ಸರ್ಕಾರ ಈವರೆಗೆ ಬಿಡುಗಡೆ ಮಾಡಿಲ್ಲ. ಬಿಡುಗಡೆಯಾದ ಹಣದ ಬಗ್ಗೆ ಕ್ರಿಯಾ ಯೋಜನೆ ಮಾಡಲಾಗಿದೆ. ಹಾಗೆಂದು ನಾವು ಸುಮ್ಮನೆ ಕೂತಿಲ್ಲ. ನಮಗೆ ಬರಬೇಕಾದ ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದೇವೆ. ಆ ಹಣ ಬಿಡುಗಡೆಯಾಗದ ಕಾರಣದಿಂದಾಗಿಯೇ ಕಡಲು ಕೊರೆತ ತಡೆಗೋಡೆ ಮತ್ತಿತರ ಕಾಮಗಾರಿ ವಿಳಂಬವಾಗುತ್ತಿದೆ ಎಂದರು.ತಾಲೂಕಿನಲ್ಲಿ ಕೆಲವರಿಗೆ ಫೌತಿ ಖಾತೆ ನೀಡುವಲ್ಲಿ ಕೆಲವು ಸಮಸ್ಯೆಗಳು ಎದುರಾಗಿವೆ ಎಂದು ಶಾಸಕ ದಿನಕರ ಶೆಟ್ಟಿ ಸಚಿವರ ಗಮನ ಸೆಳೆದರು. ಬಳಿಕ ಫೌತಿ ಖಾತೆ ಪಡೆಯಲು ಸಮಸ್ಯೆ ಎದುರಿಸುತ್ತಿರುವ ಸ್ಥಳೀಯ ನಿವಾಸಿಗಳ ಮನೆಗೇ ತೆರಳಿದ ಸಚಿವ ಕೃಷ್ಣ ಬೈರೇಗೌಡ ತಹಸೀಲ್ದಾರ ಹಾಗೂ ಕಂದಾಯ ಅಧಿಕಾರಿಗಳಿಂದ ಸಮಸ್ಯೆಯ ವಿವರಣೆ ಪಡೆದರು. ಕುಮಟಾ ತಾಲೂಕು ಸೌಧಕ್ಕೆ ಭೇಟಿಗೂ ಮುನ್ನ ಶಿರಸಿ-ಕುಮಟಾ ರಸ್ತೆಯ ಗುಡ್ಡ ಕುಸಿತದ ಪ್ರದೇಶವನ್ನು ಸಚಿವರು ವೀಕ್ಷಿಸಿದರು. ಸಾರ್ವಜನಿಕರ ಹಲವು ಮನವಿಗಳನ್ನು ಸ್ವೀಕರಿಸಿದರು.
ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳುವೈದ್ಯ, ಶಾಸಕ ದಿನಕರ ಶೆಟ್ಟಿ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ ಶ್ರೀಕೃಷ್ಣ ಕಾಮಕರ, ಹೊನ್ನಾವರ ತಹಸೀಲ್ದಾರ ಪ್ರವೀಣ ಕರಾಂಡೆ, ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಇತರರು ಇದ್ದರು.