ಎಂಬೆಸಿ ಸ್ಫೋಟ ಸಂಚಿನ ರೂವಾರಿ ಮೈಸೂರಲ್ಲಿ ಸೆರೆ

| Published : May 16 2024, 12:48 AM IST / Updated: May 16 2024, 08:38 AM IST

ಸಾರಾಂಶ

ಬೆಂಗಳೂರಿನ ಇಸ್ರೇಲ್‌ ದೂತಾವಾಸ ಕಚೇರಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿರುವ ದೂತಾವಾಸ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ ಪ್ರಕರಣದ ಪ್ರಮುಖ ಆರೋಪಿ ನೂರುದ್ದೀನ್‌ ಅಲಿಯಾಸ್‌ ರಫಿ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಮಂಗಳವಾರ ಮೈಸೂರಿನಲ್ಲಿ ಬಂಧಿಸಿದೆ

ನವದೆಹಲಿ: ಬೆಂಗಳೂರಿನ ಇಸ್ರೇಲ್‌ ದೂತಾವಾಸ ಕಚೇರಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿರುವ ದೂತಾವಾಸ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ ಪ್ರಕರಣದ ಪ್ರಮುಖ ಆರೋಪಿ ನೂರುದ್ದೀನ್‌ ಅಲಿಯಾಸ್‌ ರಫಿ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಮಂಗಳವಾರ ಮೈಸೂರಿನಲ್ಲಿ ಬಂಧಿಸಿದೆ.

ಪ್ರಕರಣ ಸಂಬಂಧ ಬಂಧಿತನಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಈತ ಬಳಿಕ ನಾಪತ್ತೆಯಾಗಿದ್ದ. ವಿಚಾರಣೆಗೂ ಗೈರಾಗಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಚೆನ್ನೈನ ನ್ಯಾಯಾಲಯ ಘೋಷಿತ ಅಪರಾಧಿ ಎಂದು ಪ್ರಕಟಿಸಿತ್ತು. 

ಅದರ ಬೆನ್ನಲ್ಲೇ ಆತ ಮೈಸೂರಿನ ರಾಜೀವ್‌ ನಗರದಲ್ಲಿ ಅಡಗಿದ್ಧಾನೆ ಎಂಬ ಸುಳಿವನ ಮೇಲೆ ದಾಳಿ ನಡೆಸಿದ ಎನ್‌ಐಎ ತಂಡ, ಮಂಗಳವಾರ ನೂರುದ್ದೀನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಸ್ಫೋಟಕ್ಕೆ ಸಂಚು:ನೂರುದ್ದೀನ್‌, ಪಾಕಿಸ್ತಾನದ ಅಮಿರ್‌ ಜುಬೇ್‌ ಸಿದ್ಧಿಕೆ ಮತ್ತು ಶ್ರೀಲಂಕಾದ ಮುಹಮ್ಮದ್‌ ಪ್ರಜೆಗಳ ಜೊತೆ ಸೇರಿಕೊಂಡು ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿ ಮತ್ತು ಬೆಂಗಳೂರಿನಲ್ಲಿರುವ ಇಸ್ರೇಲ್‌ ದೂತಾವಾಸ ಕಚೇರಿಯನ್ನು ಸ್ಫೋಟಿಸುವ ಕುರಿತು 2014ರಲ್ಲಿ ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಅಗತ್ಯವಾದ ಹಣವನ್ನು ನೂರೂದ್ದೀನ್ ನಕಲಿ ನೋಟು ಚಲಾವಣೆಯ ಮೂಲಕ ನೀಡಿದ್ದ.

ಈ ಪ್ರಕರಣದಲ್ಲಿ ಆತನ ಬಂಧನವಾಗಿ ಆತನ ವಿರುದ್ಧ ಬೇಹುಗಾರಿಕೆ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಆತನ ಬಂಧನವಾಗಿತ್ತಾದರೂ ಆತನಿಗೆ 2023ರಲ್ಲಿ ಷರತ್ತಬದ್ಧ ಜಾಮೀನು ನೀಡಲಾಗಿತ್ತು. ಬಳಿಕ ಈತ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಈತನ ಕುರಿತು ಸುಳಿವು ನೀಡಿದವರಿಗೆ 5 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು. ಇತ್ತೀಚೆಗೆ ಮೇ 7ರಂದು ಈತನನ್ನು ಎನ್‌ಐಎ ವಿಶೇಷ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿತ್ತು.