ಕೆಫೆ ಬಾಂಬ್‌ ಸ್ಫೋಟ: 5ನೇ ಶಂಕಿತ ಹುಬ್ಬಳ್ಳಿಯಲ್ಲಿ ಸೆರೆ

| Published : May 25 2024, 12:54 AM IST / Updated: May 25 2024, 06:27 AM IST

ಸಾರಾಂಶ

ಬೆಂಗಳೂರಿನ ಕುಂದಲಹಳ್ಳಿಯ ಕೆಫೆಯೊಂದರಲ್ಲಿ ಬಾಂಬ್‌ ಸ್ಫೋಟಿಸಿದ ಪ್ರಕರಣದಲ್ಲಿ ಹುಬ್ಬಳ್ಳಿ ಮೂಲದ ಶೋಯೆಬ್‌ ಅಹ್ಮದ್‌ ಮಿರ್ಜಾ ಅಲಿಯಾಸ್‌ ಛೋಟು ಎಂಬಾತನನ್ನು ಹುಬ್ಬಳ್ಳಿಯಲ್ಲೇ ರಾಷ್ಟ್ರೀಯ ತನಿಖಾ ಆಯೋಗ (ಎನ್‌ಐಎ) ಬಂಧಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 5ಕ್ಕೆ ಏರಿಕೆ ಆಗಿದೆ.

 ನವದೆಹಲಿ :  ಬೆಂಗಳೂರಿನ ಕುಂದಲಹಳ್ಳಿಯ ಕೆಫೆಯೊಂದರಲ್ಲಿ ಬಾಂಬ್‌ ಸ್ಫೋಟಿಸಿದ ಪ್ರಕರಣದಲ್ಲಿ ಹುಬ್ಬಳ್ಳಿ ಮೂಲದ ಶೋಯೆಬ್‌ ಅಹ್ಮದ್‌ ಮಿರ್ಜಾ ಅಲಿಯಾಸ್‌ ಛೋಟು ಎಂಬಾತನನ್ನು ಹುಬ್ಬಳ್ಳಿಯಲ್ಲೇ ರಾಷ್ಟ್ರೀಯ ತನಿಖಾ ಆಯೋಗ (ಎನ್‌ಐಎ) ಬಂಧಿಸಿದೆ. 

ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 5ಕ್ಕೆ ಏರಿಕೆ ಆಗಿದೆ.ಮಿರ್ಜಾ ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಪತ್ರಕರ್ತರು ಹಾಗೂ ಬಲಪಂಥೀಯರ ಹತ್ಯೆಗೆ ಲಷ್ಕರ್‌-ಎ-ತೊಯ್ಬಾ ಸಂಘಟನೆಯಿಂದ ಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯದಿಂದ ಪರಿಗಣಿತನಾಗಿ ಸೆರೆವಾಸ ಅನುಭವಿಸಿದ್ದ. 

ಬಳಿಕ ಬಿಡುಗಡೆಯಾಗಿದ್ದ.‘2024ರಂದು ಮಾ.1ರಂದು ಬೆಂಗಳೂರಿನ ಕೆಫೆಯಲ್ಲಿ ಬಾಂಬ್‌ ಸ್ಫೋಟವಾದ ಬಳಿಕ ಎನ್‌ಐಎ ದೇಶಾದ್ಯಂತ 29ಕ್ಕೂ ಹೆಚ್ಚು ಕಡೆ ತನಿಖೆ ಹಾಗೂ ಶೋಧ ನಡೆಸಿದೆ. 3 ದಿನದ ಹಿಂದಷ್ಟೇ 4 ರಾಜ್ಯಗಳಲ್ಲಿ ಶೋಧ ನಡೆಸಿತ್ತು. ಇದರ ಬೆನ್ನಲ್ಲೇ ಛೋಟುನನ್ನು ಬಂಧಿಸಲಾಗಿದೆ’ ಎಂದು ತನಿಖಾ ಏಜೆನ್ಸಿ ಪ್ರಕಟಣೆ ನೀಡಿದೆ.

‘ಈ ಪ್ರಕರಣದಲ್ಲಿ ಇದಕ್ಕೂ ಮೊದಲು ಬಂಧಿತನಾಗಿರುವ ಆರೋಪಿ ಅಬ್ದುಲ್ ಮತೀನ್‌ ತಾಹಾ ಎಂಬಾತನನ್ನು 2018ರಲ್ಲಿ ಅಂತಾರಾಷ್ಟ್ರೀಯ ಹ್ಯಾಂಡ್ಲರ್‌ಗೆ ಪರಿಚಯಿಸಿದ್ದ. ಆ ಹ್ಯಾಂಡ್ಲರ್‌ ಹಾಗೂ ಮತೀನ್‌ ತಾಹಾಗೆ ರಹಸ್ಯ ಸಂಭಾಷಣೆ ನಡೆಸಲು ಇ-ಮೇಲ್‌ ಸಹಾಯ ಒದಗಿಸಿದ್ದ’ ಎಂದು ಎನ್‌ಐಎ ಹೇಳಿದೆ.ತಾಹಾ ಹಾಗೂ ಇನ್ನೊಬ್ಬ ಸಹ-ಆರೋಪಿ ಮುಸಾವಿರ್‌ ಉಸೇನ್‌ ಶಾಜಿಬ್‌ನನ್ನು ಏ.12ರಂದು ಕೋಲ್ಕತಾ ಅಡಗುತಾಣದಲ್ಲಿ ಬಂಧಿಸಲಾಗಿತ್ತು.