ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ‘ಬಳ್ಳಾರಿ ಇಸ್ಲಾಮಿಕ್ ಸ್ಟೇಟ್ಸ್ ಮಾಡ್ಯೂಲ್’ನ ನಾಲ್ವರು ಶಂಕಿತ ಐಸಿಎಸ್ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ದಿನಗಳಿಂದ ವಿಚಾರಣೆಗೊಳಪಡಿಸಿದೆ.
ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿ ಜತೆ ನಂಟು ಹೊಂದಿದ ಅನುಮಾನದ ಮೇರೆಗೆ ನಾಲ್ವರು ಶಂಕಿತ ಉಗ್ರರಾದ ಬಳ್ಳಾರಿ ಕೌಲ್ ಬಜಾರ್‌ನ ಮಿನಾಜ್ ಅಲಿಯಾಸ್ ಸುಲೇಮಾನ್, ಸೈಯದ್ ಸಮೀರ್, ಮುಂಬೈನ ಅನಾಸ್ ಇಕ್ಬಾಲ್ ಶೇಕ್ ಹಾಗೂ ದೆಹಲಿಯ ಶಯಾನ್ ರೆಹಮಾನ್ ಅವರನ್ನು ಎನ್‌ಐಎ ಸುದೀರ್ಘವಾಗಿ ವಿಚಾರಣೆ ನಡೆಸಿದೆ.
ಆದರೆ, ಇದುವರೆಗೆ ಕೆಫೆ ಬಾಂಬರ್‌ನ ಕುರಿತು ಯಾವುದೇ ಖಚಿತ ಮಾಹಿತಿಯನ್ನು ಬಳ್ಳಾರಿ ಗ್ಯಾಂಗ್ ಬಾಯ್ಬಿಟ್ಟಿಲ್ಲ ಎಂದು ತಿಳಿದು ಬಂದಿದೆ.ಕಳೆದ ಡಿಸೆಂಬರ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳ ಶಂಕೆ ಮೇರೆಗೆ ಬಳ್ಳಾರಿಯಲ್ಲಿ ದಾಳಿ ನಡೆಸಿ ಈ ನಾಲ್ವರನ್ನು ಎನ್‌ಐಎ ಬಂಧಿಸಿತ್ತು.
ಅಂದಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಶಂಕಿತ ಉಗ್ರರನ್ನು ಮತ್ತೆ ನ್ಯಾಯಾಲಯದ ಅನುಮತಿ ಪಡೆದು ಜೈಲಿನಲ್ಲೇ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆದರೆ ಈ ಶಂಕಿತ ಉಗ್ರರನ್ನು ಜೈಲಿನಿಂದ ಹೊರಗೆ ಕರೆದೊಯ್ದಿಲ್ಲ ಎಂದು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಜೈಲಿನಲ್ಲೇ ಶಂಕಿತರಿಗೆ ಎನ್ಐಎ ಗ್ರಿಲ್: ಕೆಫೆ ಬಾಂಬ್ ಸ್ಫೋಟ ಕೃತ್ಯಕ್ಕೂ ಮಂಗಳೂರು ಕುಕ್ಕರ್ ಹಾಗೂ ಶಿವಮೊಗ್ಗ ಬಾಂಬ್ ಪ್ರಯೋಗ ಪ್ರಕರಣಗಳಿಗೆ ನಂಟು ಪತ್ತೆಯಾದ ಕೂಡಲೇ ಚುರುಕಾದ ಎನ್‌ಐಎ ಅಧಿಕಾರಿಗಳು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಹಳೇ ಪ್ರಕರಣಗಳ ಶಾಕೀರ್ ಹಾಗೂ ಆತನ ಸಹಚರರು ಸೇರಿದಂತೆ ಕೆಲವು ಶಂಕಿತ ಉಗ್ರರನ್ನು ವಿಚಾರಣೆಗೊಳಪಡಿಸಿದ್ದರು.
ಇದಕ್ಕೆ ಆಕ್ಷೇಪಿಸಿದ ಕೆಲವು ಶಂಕಿತ ಉಗ್ರರು, ತಮಗೆ ಅನಗತ್ಯವಾಗಿ ಎನ್ಐಎ ಅಧಿಕಾರಿಗಳು ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು ಎನ್ನಲಾಗಿದೆ.
ಹೀಗಾಗಿ ಬಳ್ಳಾರಿ ಗ್ಯಾಂಗ್ ವಿಚಾರಣೆಗೆ ನ್ಯಾಯಾಲಯದ ಅನುಮತಿ ಪಡೆದು ಎನ್‌ಐಎ ಅಧಿಕಾರಿಗಳು ಈಗ ಕೆಫೆ ಸ್ಫೋಟದ ಕುರಿತು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪ್ರತ್ಯೇಕವಾಗಿ ನಾಲ್ವರನ್ನು ಸತತ ಮೂರು ದಿನಗಳಿಂದ ಎನ್‌ಐಎ ವಿಚಾರಣೆ ಮಾಡಿದೆ. ವಿಚಾರಣೆಗೆ ನ್ಯಾಯಾಲಯ ನೀಡಿರುವ ಸಮಯ ಶನಿವಾರ ಅಂತ್ಯವಾಗಲಿದೆ ಎಂದು ಗೊತ್ತಾಗಿದೆ.
ಬಳ್ಳಾರಿ ನಗರದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸಕ್ರಿಯ ಕಾರ್ಯಕರ್ತರಾಗಿದ್ದ ಸುಲೇಮಾನ್ ಹಾಗೂ ಸಮೀರ್, ಯುವ ಜನರಿಗೆ ಇಸ್ಲಾಂ ಮೂಲಭೂತ ಬೋಧಿಸಿ ಅಕ್ರಮ ಚಟುವಟಿಕೆಗಳಿಗೆ ಸೆಳೆಯುತ್ತಿದ್ದರು.
ಬಳ್ಳಾರಿ ನಗರದ ಕೌಲ್ ಬಜಾರ್‌ನಲ್ಲಿ ಸುಲೇಮಾನ್ ಬಟ್ಟೆ ಅಂಗಡಿ ಇಟ್ಟಿದ್ದರೆ, ಸಮೀರ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಮುಸ್ಲಿಂ ಸಮುದಾಯದ ವಿಚಾರವಾಗಿ ಹೋರಾಟಗಳಲ್ಲಿ ಸಹ ಸಮೀರ್ ಗುರುತಿಸಿಕೊಂಡಿದ್ದ.
ಕಳೆದ ನವೆಂಬರ್‌ನಲ್ಲಿ ಇಸ್ಲಾಂ ಧರ್ಮಗುರು ಕುರಿತು ಉಪನ್ಯಾಸಕನೊಬ್ಬ ಅವಹೇಳನ ಮಾಡಿದ್ದಾನೆ ಎಂದು ಆರೋಪಿಸಿ ನಡೆದ ಪ್ರತಿಭಟನೆಯಲ್ಲಿ ಸಮೀರ್ ಮುಂಚೂಣಿಯಲ್ಲಿದ್ದ.
ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಮಾಹಿತಿ ಮೇರೆಗೆ ಡಿ.18 ರಂದು ಬಳ್ಳಾರಿ ಸೇರಿದಂತೆ ದೇಶದ 19 ಕಡೆ ಎನ್ಐಎ ದಾಳಿ ನಡೆಸಿತ್ತು. ಅಂದು ಬಳ್ಳಾರಿಯ ಸುಲೇಮಾನ್ ಹಾಗೂ ಸಮೀರ್‌ನನ್ನು ಬಂಧಿಸಲಾಗಿತ್ತು.
ಹೊರ ರಾಜ್ಯಗಳಲ್ಲಿ ಸುಲೇಮಾನ್ ನಂಟು: ಜೆಮ್‌ಶೆಡ್‌ಪುರ, ಮುಂಬೈ, ಆಂಧ್ರಪ್ರದೇಶದ ಅಮರಾವತಿ, ಪುಣೆ ಹೀಗೆ ರಾಜ್ಯ ಹಾಗೂ ಹೊರ ರಾಜ್ಯಗಳ ಐಸಿಸ್ ಶಂಕಿತ ಉಗ್ರರ ಜತೆ ಸುಲೇಮಾನ್‌ಗೆ ನಿಕಟ ಸಂಬಂಧವಿತ್ತು.
ಈ ಸಂಪರ್ಕ ಬಳಸಿಕೊಂಡೇ ಬಳ್ಳಾರಿ ಸೀಮೆಯಲ್ಲಿ ಅತ್ಯುಗ್ರ ಭಯೋತ್ಪಾತ್ಪದಕ ಸಂಘಟನೆ ಐಸಿಸ್‌ಗೆ ನೀರೆರದು ಪೋಷಿಸಲು ಆತ ಪ್ರಯತ್ನಿಸಿದ್ದ ಎನ್ನಲಾಗಿದೆ.
ಬಳ್ಳಾರಿಯಲ್ಲಿ ಎನ್‌ಐಎ-ಸಿಸಿಬಿ ಆಪರೇಷನ್: ಬಳ್ಳಾರಿ ನಗರದಲ್ಲಿ ಎನ್‌ಐಎ ಹಾಗೂ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಆದರೆ ಶಂಕಿತ ವ್ಯಕ್ತಿ ಕುರಿತು ಇದುವರೆಗೆ ನಿಖರ ಮಾಹಿತಿ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ರಸಗೊಬ್ಬರ ವ್ಯಾಪಾರಿಯಿಂದ ಬಾಂಬ್ ಸಾಮಗ್ರಿ ಖರೀದಿ: ಕಳೆದ ಅಕ್ಟೋಬರ್ ತಿಂಗಳಲ್ಲಿ ಬಳ್ಳಾರಿ ನಗರದ ರಸಗೊಬ್ಬರ ವ್ಯಾಪಾರಿಯೊಬ್ಬರಿಂದ ಬಾಂಬ್ ತಯಾರಿಕೆಗೆ ಅಗತ್ಯವಾದ ರಾಸಾಯನಿಕ ವಸ್ತುಗಳನ್ನು ಮಿನಾಜ್ ಸುಲೇಮಾನ್ ಹಾಗೂ ಸಮೀರ್ ಖರೀದಿಸಿದ್ದರು.
ಈ ಹಿಂದೆ ಶಂಕಿತರ ಮನೆಗಳ ಮೇಲೆ ಎನ್‌ಐಎ ದಾಳಿ ನಡೆಸಿದಾಗ ಸಲ್ಫರ್, ಗನ್ ಪೌಡರ್, ಪೊಟಾಶಿಯಂ ನೈಟ್ರೇಟ್, ಶುಗರ್ ಹಾಗೂ ಎಥನಾಲ್ ಅನ್ನು ಜಪ್ತಿ ಮಾಡಿದ್ದರು. ಆದರೆ ಈ ವಸ್ತುಗಳನ್ನು ಕೆಫೆ ಸ್ಫೋಟಕಕ್ಕೆ ಬಳಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಬಳ್ಳಾರಿ ನಂತರ ಎಲ್ಲಿಗೆ ಹೋದ ಬಾಂಬರ್?
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ ಬಳಿಕ ಬೆಂಗಳೂರು ತೊರೆದು ಅಂದೇ ರಾತ್ರಿ 8.58ರ ಸುಮಾರಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಶಂಕಿತ ವ್ಯಕ್ತಿ ಬಳ್ಳಾರಿ ತಲುಪಿದ್ದಾನೆ. ಆನಂತರ ಅಲ್ಲಿಂದ ಆತ ಎಲ್ಲಿಗೆ ಹೋದ ಎಂಬುದು ಖಚಿತವಾಗಿಲ್ಲ.
ಹೀಗಾಗಿ ಕೆಲವರು ಭಟ್ಕಳ, ಇನ್ನು ಕೆಲವರು ಬೀದರ ಜಿಲ್ಲೆಯ ಹುಮ್ನಾಬಾದ್ ಕಡೆ ಎಂದಿದ್ದಾರೆ. ಆದರೆ ಬಳ್ಳಾರಿ ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಆತನ ಸುಳಿವು ಬಿಟ್ಟರೆ ಬೇರೆಲ್ಲೂ ಇದುವರೆಗೆ ನಿಖರವಾಗಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.