ಸಾರಾಂಶ
ನಿಡ್ತ ಗ್ರಾ.ಪಂ.ಯ ೨೦೨೩-೨೪ನೇ ಸಾಲಿನ ಉದ್ಯೋಗ ಖಾತ್ರಿ ಮತ್ತು ೧೫ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಶುಕ್ರವಾರ ಗ್ರಾ.ಪಂ.ಅಧ್ಯಕ್ಷ ಎಚ್.ಡಿ.ಮನು ಅಧ್ಯಕ್ಷತೆಯಲ್ಲಿ ನಡೆಯಿತು. ಉದ್ಯೋಗ ಖಾತ್ರಿ ಯೋಜನೆಯ ಸೋಮವಾರಪೇಟೆ ತಾಲೂಕು ಲೆಕ್ಕ ಪರಿಶೋಧನಾಧಿಕಾರಿ ಅಬ್ದುಲ್ ಸಲಾಂ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ನಿಡ್ತ ಗ್ರಾ.ಪಂ.ಯ ೨೦೨೩-೨೪ನೇ ಸಾಲಿನ ಉದ್ಯೋಗ ಖಾತ್ರಿ ಮತ್ತು ೧೫ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಶುಕ್ರವಾರ ಗ್ರಾ.ಪಂ.ಅಧ್ಯಕ್ಷ ಎಚ್.ಡಿ.ಮನು ಅಧ್ಯಕ್ಷತೆಯಲ್ಲಿ ನಡೆಯಿತು.ಉದ್ಯೋಗ ಖಾತ್ರಿ ಯೋಜನೆಯ ಸೋಮವಾರಪೇಟೆ ತಾಲೂಕು ಲೆಕ್ಕ ಪರಿಶೋಧನಾಧಿಕಾರಿ ಅಬ್ದುಲ್ ಸಲಾಂ ೨೦೨೩-೨೪ನೇ ಸಾಲಿನಲ್ಲಿ ನಿಡ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಮತ್ತು ೧೫ನೇ ಹಣಕಾಸು ಯೋಜನೆಯಿಂದ ಆಗಿರುವ ಕಾಮಗಾರಿಗಳು ಮತ್ತು ಕಾಮಗಾರಿಗಳಿಗೆ ಖರ್ಚಾಗಿರುವ ಮೊತ್ತವನ್ನು ವರದಿ ಮೂಲಕ ಗ್ರಾಮಸ್ಥರ ಮುಂದಿಟ್ಟರು.
ನಿಡ್ತ ಗ್ರಾ.ಪಂ.ವ್ಯಾಪ್ತಿಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ೧೫ನೇ ಹಣಕಾಸು ಯೋಜನೆಯಲ್ಲಿ ಒಟ್ಟು ೪೫ ಕಾಮಗಾರಿಗಳನ್ನು ನಡೆಸಲಾಗಿದ್ದು ಇದಕ್ಕಾಗಿ ೨೭,೯೦,೬೬೨ ಲಕ್ಷ ರು. ವೆಚ್ಚ ಮಾಡಲಾಗಿದ್ದು ಉದ್ಯೋಗ ಖಾತ್ರಿ ಯೋಜನೆಯ ವಿವಿಧ ಕಾಮಗಾರಿಗಳಿಗೆ ೧೦ ಲಕ್ಷ ರು. ವಿನಿಯೋಗಿಸಲಾಗಿದೆ ಎಂದು ಅಬ್ದುಲ್ ಸಲಾಂ ವರದಿಯಲ್ಲಿ ಮಂಡಿಸಿದರು.ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ಮತ್ತು ಸಭೆಯ ನೋಡಲ್ ಅಧಿಕಾರಿ ಪಿ.ವಿ. ಶ್ರೀನಿವಾಸ್ ಮಾತನಾಡಿ, ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಮತ್ತು ೧೫ನೇ ಹಣಕಾಸು ಯೋಜನೆಗಳ ವತಿಯಿಂದ ಆಗಿರುವ ನಾನಾ ಕಾಮಗಾರಿಗಳು ಹಾಗೂ ಕಾಮಗಾರಿಗಳಿಗೆ ವೆಚ್ಚವಾಗಿರುವ ವಿವರಗಳನ್ನು ಗ್ರಾಮಸ್ಥರ ಮುಂದಿಡುವ ಉದ್ದೇಶದಿಂದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ನಡೆಸಲಾಗುತ್ತದೆ ಎಂದರು.ಗ್ರಾಮಸಭೆಯಲ್ಲಿ ಗ್ರಾ.ಪಂ.ಯ ಸದಸ್ಯರು, ಉದ್ಯೋಗ ಖಾತ್ರಿ ಯೋಜನೆಯ ಅಭಿಯಂತರ ಲೋಕೇಶ್, ಪಿಡಿಒ ಮಾನಸ, ಗ್ರಾ.ಪಂ.ಸಿಬ್ಬಂದಿ, ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.