ಸಾರಾಂಶ
ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುರಾಜ್ಯದ 11 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟಿನ ನಿರ್ಬಂಧವನ್ನು ರಾತ್ರಿ 1 ಗಂಟೆವರೆಗೆ ವಿಸ್ತರಿಸಿ ಬಜೆಟ್ ಲ್ಲಿ ಘೋಷಣೆಯಾಗಿ ಏಳೆಂಟು ತಿಂಗಳೇ ಕಳೆದಿವೆ. ಆದರೆ ಮಂಗಳೂರು ಸೇರಿದಂತೆ ಬಹುತೇಕ ಮಹಾನಗರಗಳಲ್ಲಿ ಇದು ಜಾರಿಯೇ ಆಗಿಲ್ಲ. ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ಅಧೀನ ಸಂಸ್ಥೆಗಳೇ ಇದನ್ನು ಜಾರಿ ಮಾಡಲು ಬಿಡುತ್ತಿಲ್ಲ.
ಇದರಿಂದ ಮಂಗಳೂರು ಸೇರಿದಂತೆ ಪ್ರವಾಸೋದ್ಯಮ ಅವಕಾಶ ಹೆಚ್ಚಿರುವ ಮಹಾನಗರಗಳ ಬೆಳವಣಿಗೆ, ಐಟಿ ಹೂಡಿಕೆ, ಪ್ರವಾಸೋದ್ಯಮ ಉತ್ತೇಜನಕ್ಕೆ ಅಡ್ಡಿಯಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.ಮಂಗಳೂರಿನಲ್ಲಿ ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ಈ ವಿಚಾರ ಪ್ರಧಾನವಾಗಿ ಚರ್ಚೆಗೆ ಬಂದಿತ್ತು. ನೈಟ್ ಲೈಫ್ ಆದೇಶ ಜಾರಿ ಮಾಡಲು ಅವಕಾಶ ಕೊಡಬೇಕು, ವ್ಯಾಪಾರ ವಹಿವಾಟು ಹೆಚ್ಚಿಸಬೇಕು ಎಂಬ ಒತ್ತಾಯ ಪ್ರವಾಸೋದ್ಯಮ ಕ್ಷೇತ್ರದ ಸ್ಟಾಕ್ ಹೋಲ್ಡರ್‌ಗಳಿಂದ ಕೇಳಿಬಂದಿತ್ತು. ಇದಕ್ಕೆ ಜಿಲ್ಲಾಧಿಕಾರಿಯೂ ಸಹಮತ ವ್ಯಕ್ತಪಡಿಸಿದ್ದರು.
7 ಗಂಟೆಗೆ ಬೀಚ್‌ನಿಂದ ಹೊರದಬ್ತಾರೆ!:ಸರ್ಕಾರದ ನಿರ್ದೇಶನದಂತೆ ಮಹಾನಗರ ವ್ಯಾಪ್ತಿಯ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳನ್ನು 1 ಗಂಟೆವರೆಗೂ ತೆರೆದಿಡಬಹುದು. ನಗರದೊಳಗಿನ ಬೀಚ್‌ಗಳಲ್ಲೂ ರಾತ್ರಿ 1 ಗಂಟೆವರೆಗೆ ಪ್ರವಾಸಿಗರು ಓಡಾಡಲು, ವ್ಯಾಪಾರ ಮಾಡಲು ಅವಕಾಶವಿದೆ. ಆದರೆ ತಣ್ಣೀರುಬಾವಿ ಬೀಚ್‌ಗೆ ಹೋದರೆ ರಾತ್ರಿ 7-8 ಗಂಟೆಯೊಳಗೆ ಪ್ರವಾಸಿಗರನ್ನು ಬಲವಂತವಾಗಿ ಹೊರಕಳಿಸಲಾಗುತ್ತಿದೆ. 9ರ ವೇಳೆಗೆ ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಬಾರ್ ಆಂಡ್ ರೆಸ್ಟೋರೆಂಟ್‌ಗಳನ್ನಂತೂ 11 ಗಂಟೆಗೇ ಮುಚ್ಚಿಸುತ್ತಿದ್ದಾರೆ. ಅದೇ ರೀತಿ ಗೂಡಂಗಡಿಯವರು, ಬೀದಿ ಬದಿ ವ್ಯಾಪಾರವನ್ನೂ ನಿಲ್ಲಿಸಲಾಗುತ್ತಿದೆ ಎಂದು ವ್ಯಾಪಾರಸ್ಥರು ಆರೋಪಿಸುತ್ತಾರೆ.
ಓಡಾಡದ ಬಸ್ಸುಗಳು: ನೈಟ್ ಲೈಫ್ ಜಾರಿಯಾಗಬೇಕಾದರೆ ಸಾರ್ವಜನಿಕ ಸಾರಿಗೆ ಕಾರ್ಯ ನಿರ್ವಹಿಸುವುದು ಅತ್ಯಗತ್ಯ. ಕೊರೋನಾ ಮೊದಲು ರಾತ್ರಿ 10-11 ಗಂಟೆ ವರೆಗೂ ಸೇವೆ ನೀಡುತ್ತಿದ್ದ ಮಂಗಳೂರಿನ ಖಾಸಗಿ ಬಸ್ಸುಗಳು ಕೊರೋನಾ ಬಳಿಕ ಪ್ರಯಾಣಿಕರ ಕೊರತೆಯಿಂದ 8-9 ಗಂಟೆಗೇ ಸಂಚಾರ ನಿಲ್ಲಿಸಿವೆ. ಹೀಗೇ ಮುಂದುವರಿದರೆ ಸ್ಮಾರ್ಟ್ ಸಿಟಿ ಎಂಬ ಹೆಸರಿಗೇ ಕಳಂಕ ಬರುವುದು ನಿಶ್ಚಿತ. ಸರ್ಕಾರದ ಆದೇಶದಂತೆ ನಗರದಲ್ಲಿ ವ್ಯಾಪಾರ ವಹಿವಾಟಿಗೆ ನಿರ್ಬಂಧ ಹೇರದೆ ಮುಕ್ತ ಅವಕಾಶ ನೀಡಿದರೆ ಜನರ ಓಡಾಟ ಹೆಚ್ಚಲಿದೆ. ಆಗ ಸಹಜವಾಗಿ ಬಸ್ಸುಗಳು ಸಂಚಾರ ಮಾಡಿಯೇ ಮಾಡಲಿವೆ ಎಂದು ಬಸ್ಸು ಮಾಲೀಕರೊಬ್ಬರು ಹೇಳುತ್ತಾರೆ.‘ಖಾಸಗಿ ಸಾರಿಗೆ ವ್ಯವಸ್ಥೆಯು 110 ವರ್ಷಗಳ ಸುದೀರ್ಘ ಕಾಲ ಅತ್ಯುತ್ತಮ ಸೇವೆ ನೀಡಿದ್ದರಿಂದ ಶಿಕ್ಷಣ, ಆರೋಗ್ಯ, ಉದ್ಯಮ ಕ್ಷೇತ್ರದಲ್ಲಿ ಮಂಗಳೂರು ಇಷ್ಟು ಬೆಳೆಯಲು ಕಾರಣವಾಗಿದೆ. ಸರ್ಕಾರ ಆದೇಶ ಮಾಡಿದಂತೆ ರಾತ್ರಿ 1 ಗಂಟೆವರೆಗೆ ಎಲ್ಲ ರೀತಿಯ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಿದರೆ ಅಷ್ಟೂ ಸಮಯ ನಾವು ಸಾರಿಗೆ ಸೇವೆಯನ್ನು ನೀಡಲು ಬದ್ಧ’ ಎನ್ನುತ್ತಾರೆ ದ.ಕ. ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ.
ಬಂದ್ ಮಾಡಿದರೆ ಐಟಿ ಕಂಪೆನಿ ಬರ್ತವಾ?:‘ಅಭಿವೃದ್ಧಿ ದೃಷ್ಟಿಯಿಂದ ರಾತ್ರಿ 1 ಗಂಟೆವರೆಗೆ ಮಂಗಳೂರು ನಗರವನ್ನು ತೆರೆದಿಡಬೇಕು ಎನ್ನುವುದು ಮೊದಲಿನಿಂದಲೂ ಇದ್ದ ಬೇಡಿಕೆ. ಬೆಳೆಯುವ ನಗರವನ್ನು ಬಂದ್ ಮಾಡಿದರೆ ಇಲ್ಲಿ ಸಾಫ್ಟ್‌ವೇರ್ ಉದ್ಯಮಗಳು ಬರುವುದು ಹೇಗೆ? ಅಭಿವೃದ್ಧಿ ಆಗೋದು ಹೇಗೆ? ಕಾನೂನು ಪ್ರಕಾರ ವ್ಯಾಪಾರಕ್ಕೆ ಅವಕಾಶ ಇರುವಷ್ಟು ಸಮಯ ನಗರವನ್ನು ಓಪನ್ ಇಟ್ಟರೆ ಜನರ ಓಡಾಟ ಹೆಚ್ಚಿ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಆಗಲ್ಲ. ಹೀಗೆ ಮಾಡಿದರೆ ಪ್ರವಾಸೋದ್ಯಮ ಸೇರಿದಂತೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ’ ಎನ್ನುತ್ತಾರೆ ಟೂರಿಸಂ ಪ್ರಮೋಟರ್ ಯತೀಶ್ ಬೈಕಂಪಾಡಿ.-------
ದಕ್ಷಿಣ ಕನ್ನಡದಲ್ಲಿ ನೈಟ್ ಕಲ್ಚರ್ ಮೊದಲಿನಿಂದಲೂ ಇದೆ. ಯಕ್ಷಗಾನ, ಜಾತ್ರೆ, ಕೋಲ, ಕಂಬಳ ಇತ್ಯಾದಿಗಳು ರಾತ್ರಿ ವೇಳೆಯಲ್ಲಿ ಸುಲಲಿತವಾಗಿ ನಡೆದುಕೊಂಡು ಬಂದಿವೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಯಾವ ಸಮಸ್ಯೆಯೂ ಆದದ್ದಿಲ್ಲ. ಈಗ ಸರ್ಕಾರದ ಆದೇಶವೇ ಇರುವಾಗ ಅದನ್ನು ಜಾರಿ ಮಾಡುವ ತುರ್ತು ಅಗತ್ಯವಿದೆ.- ಯತೀಶ್ ಬೈಕಂಪಾಡಿ, ಟೂರಿಸಂ ಪ್ರಮೋಟರ್.