ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭ ವಾರ್ತೆ ಚಿತ್ರದುರ್ಗ ಏಕೀಕರಣ ಕರ್ನಾಟಕದ ರುವಾರಿ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗದ ನಿವಾಸ ವಿನಯ (ಶ್ವೇತ ಭವನ)ಇನ್ನು ಮೇಲೆ ಸರ್ಕಾರದ ಆಸ್ತಿ. 4.18 ಕೋಟಿ ರು. ಕಿಮ್ಮತ್ತು ಕಟ್ಟಿ ಗುರುವಾರ ಖರೀದಿಸಲಾಯಿತು.
ಎಸ್.ಎನ್.ಪುತ್ರ ಕಿರಣ್ ಶಂಕರ್ ಈ ಸಂಬಂಧದ ಕ್ರಯ ಪತ್ರವನ್ನು ತಹಸೀಲ್ದಾರ್ ನಾಗವೇಣಿ ಅವರಿಗೆ ನೀಡುವುದರ ಮೂಲಕ ಮಾರಾಟ ಪ್ರಕ್ರಿಯೆಯ ಅಂತಿಮಗೊಳಿಸಿದರು. ಖರೀದಿ ಪ್ರಕ್ರಿಯೆ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಮಾಜಿ ಮುಖ್ಯಮಂತ್ರಿ.ಎಸ್.ನಿಜಲಿಂಗಪ್ಪನವರು ವಾಸವಿದ್ದ ಮನೆಯನ್ನು ಸರ್ಕಾರದ ವತಿಯಿಂದ ಖರೀದಿ ಮಾಡಿ ಸಂರಕ್ಷಣೆ ಮಾಡುವ ಸಂಬಂಧ ಹಿಂದೆ ಸರ್ಕಾರದಿಂದ ರು.4,18,49,016 ರು. ಅನುದಾನ ಬಿಡುಗಡೆಯಾಗಿತ್ತು. ರಾಜ್ಯಪಾಲರ ಹೆಸರಿಗೆ ಖರೀದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ನಿಜಲಿಂಗಪ್ಪಅವರ 123ನೇ ಜನ್ಮದಿನ ಆಚರಿಸಲಾಗಿತ್ತು. ಜನ್ಮದಿನದ ಆಸುಪಾಸಿನಲ್ಲಿ ಅವರ ನಿವಾಸ ಮಾರಾಟವಾಗಿ ಸರ್ಕಾರದ ವಶವಾಗಿದೆ.ಚಿತ್ರದುರ್ಗದಲ್ಲಿ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ನಿಜಲಿಂಗಪ್ಪ ಅವರ ನಿವಾಸ ಖರೀದಿಸುವ ಪ್ರಸ್ತಾಪಗಳು ನಡೆದಿದ್ದವು. ಎಸ್ಸೆನ್ ಪುತ್ರ ಕಿರಣ್ ಶಂಕರ್ ಈ ಸಂಬಂಧ ಸರ್ಕಾರದ ಜೊತೆ ಪತ್ರವ್ಯವಹಾರ ನಡೆಸಿದ್ದರು. ಒಂದುವರೆ ದಶಕದಷ್ಟು ಸುದೀರ್ಘಪತ್ರ ವ್ಯವಹಾರ ಹಾಗೂ ಮಾತುಕತೆ ನಂತರ ಖರೀದಿ ಮುಗಿದಿದೆ. ಈ ವಿಚಾರವಾಗಿ ಕಿರಣ್ ಶಂಕರ್ ಕೆಲವು ಸಲ ಸರ್ಕಾರದೊಂದಿಗೆ ಸಂಘರ್ಷಕ್ಕೂ ಇಳಿದಿದ್ದರೂ. ಬಂಡೆದ್ದು ಖಾಸಗಿಯವರಿಗೆ ಮಾರಾಟ ಮಾಡುವುದಾಗಿ ಹೇಳಿದ್ದರು. ಏತನ್ಮಧ್ಯೆ ಕಾಂಗ್ರೆಸ್ ನಿಜಲಿಂಗಪ್ಪ ಅವರ ನಿವಾಸ ಖರೀದಿ ಮಾಡುವ ಆಸಕ್ತಿ ವಹಿಸಿತ್ತು.ಬದುಕಿದ್ದಾಗಲೆ ವಿಲ್ ಬರೆದಿದ್ದರು:ನಿಜಲಿಂಗಪ್ಪ ಅವರ ಬದುಕಿದ್ದಾಗಲೇ 28-3-1989 ರಂದು ತಮ್ಮ ಮೊಮ್ಮಗ ವಿನಯ್ ಹೆಸರಲ್ಲಿ ವಿಲ್ ಬರೆದಿದ್ದರು. ವಿಲ್ ಪ್ರಕಾರ ತನ್ನ ಮೂವರು ಮಕ್ಕಳು ಅನುಭವಿಸಿದ ನಂತರ ಮೊಮ್ಮಗ ವಿನಯ್ ( ಕಿರಣ್ ಶಂಕರ್ ಪುತ್ರ) ಗೆ ಮನೆ ಹೋಗಬೇಕೆಂಬುದ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ನಿಜಲಿಂಗಪ್ಪ ಅವರ ಎರಡನೇ ಮಗ ರಾಜಶೇಖರ್ ನಿಧನರಾಗಿದ್ದು, ಮೂರನೇ ಮಗ ಉಮಾಕಾಂತ ಆಸ್ತಿ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟಿದ್ದರು. ಇದಾದ ತರುವಾಯ ರಾಜ್ಯ ಸರ್ಕಾರ ಮನೆ ಖರೀದಿ ಮಾಡಲು ಮುಂದಾದಾಗ ಹಿರಿಯ ಮಗ ಕಿರಣ್ ಶಂಕರ್ ಮನೆಯ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟು ನೇರವಾಗಿ ಮಗ ವಿನಯ್ ಗೆ ಸೇರಿದ ಆಸ್ತಿಯೆಂಬುದ ಸ್ಪಷ್ಟ ಪಡಿಸಿದ್ದರು. ನಿಜಲಿಂಗಪ್ಪ ಅವರ ಇಬ್ಬರು ಪುತ್ರರು ನೀಡಿದ ಬಿಡುಗಡೆ ಪತ್ರದ ಪ್ರಕಾರ, ವಿನಯ್ ಅವರು ನಿಜಲಿಂಗಪ್ಪ ಅವರ ಮನೆಯ ಮೇಲೆ ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದ್ದರು.
ಹಲವು ಘಟ್ಟಗಳು ದಾಟಿದ ನಂತರ ಅಂತೂ ನಿಜಲಿಂಗಪ್ಪ ಅವರ ನಿವಾಸವನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ. ನಿಜಲಿಂಗಪ್ಪ ಅವರು ಬಳಸುತ್ತಿದ್ದ ವಸ್ತುಗಳು ಮಂಚ ಕುರ್ಚಿ, ದೀವಾನ ಕಾಟ್ ಸೇರಿದಂತೆ ಹಲವು ವಸ್ತುಗಳನ್ನಿಟ್ಟು ಪುಟ್ಟದೊಂದು ಮ್ಯೂಜಿಯಂ ಮಾಡುವ ಉದ್ದೇಶ ಹೊಂದಲಾಗಿದೆ. ಹಿಂದೊಮ್ಮೆ ಕಳ್ಳರು ನಿಜಲಿಂಗಪ್ಪ ಅವರ ಮನೆ ಬೀಗ ಮುರಿದು ಕೆಲ ಅಮೂಲ್ಯವಾದ ನೆನಪಿನ ಕಾಣಿಕೆ, ಫಲಕಗಳ ಹೊತ್ತೊಯ್ದಿದ್ದರು. ಇದಾದ ತರುವಾಯ ಮನೆಯಲ್ಲಿದ್ದ ವಸ್ತುಗಳ ಸೀಬಾರದ ಬಳಿ ಇರುವ ಅವರ ಸಮಾಧಿ ಸ್ಥಳದ ಕೊಠಡಿಯಲ್ಲಿ ಇಡಲಾಗಿತ್ತು. ಈಗ ಮ್ಯೂಜಿಯಂ ಆದಲ್ಲಿ ಎಲ್ಲ ವಸ್ತುಗಳು ಮರಳಿ ನಿಜಲಿಂಗಪ್ಪ ಅವರ ಮನೆಯಲ್ಲಿ ನೋಡುಗರ ಗಮನ ಸೆಳೆಯಲಿವೆ.