ನಿಜಗುಣ ದೇವರ ಬದುಕು ತುಂಬಾ ಅದ್ಭುತ: ಡಾ.ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿ

| Published : Jan 02 2024, 02:15 AM IST

ನಿಜಗುಣ ದೇವರ ಬದುಕು ತುಂಬಾ ಅದ್ಭುತ: ಡಾ.ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನಿಜಗುಣ ದೇವರ ಷಷ್ಠಬ್ಧಿ ಸಂಭ್ರಮ ಸಮಾರಂಭದ 25ನೇ ಸತ್ಸಂಗದಲ್ಲಿ ಡಾ.ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ನಿಜಗುಣ ದೇವರು ಎಲ್ಲ ಸಂಪ್ರದಾಯದೊಂದಿಗೆ ಬೆರೆತು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಕೊಲ್ಹಾಪುರದ ಸಿದ್ಧಗಿರಿ ಕನ್ನೇರಿಮಠದ ಡಾ.ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.

ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಸೋಮವಾರ ಜರುಗಿದ ನಿಜಗುಣ ದೇವರ ಷಷ್ಠಬ್ಧಿ ಸಂಭ್ರಮ ಸಮಾರಂಭದ 25ನೇ ಸತ್ಸಂಗ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಮಠಕ್ಕೆ ಎಲ್ಲ ಪರಂಪರೆಯ ಸ್ವಾಮಿಗಳು ಬರುತ್ತಾರೆ ಎಂದರೆ ನಿಜಗುಣ ದೇವರ ಒಂದು ಉದ್ದೇಶ ಪ್ರೀತಿಯೇ ದೇವರು. ಎಲ್ಲರನ್ನೂ ಪ್ರೀತಿಸುವುದು ಎನ್ನವುದು ಅವರ ತತ್ವವಾಗಿದೆ. ಭಗವಂತನು ಒಲಿಯುವುದು ಪ್ರೀತಿಗಾಗಿ. ಇವತ್ತು ನಿಜಗುಣ ದೇವರ ಬದುಕು ತುಂಬಾ ಅದ್ಭುತವಾದದ್ದು ಎಂದರು.

ಬೆಳಗಳೂರಿನ ವಿಭೂತಿಪೂರಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ನಿಜಗುಣ ದೇವರ ಸಾಹಿತ್ಯಕ್ಕೆ ನಾವು ಕೂಡಾ ಮಾರು ಹೋದವರೇ ಎಂದರಲ್ಲದೇ ನಗದು ಇಲ್ಲದೇ ಇರುವವನು ಬಡವನಲ್ಲ. ನಗು ಇಲ್ಲದವನು ಬಡವ. ಯಾವಾಗಲೂ ನಗುವ ನಿಜಗುಣ ದೇವರ ವ್ಯಕ್ತಿತ್ವ ಎಲ್ಲರಿಗೂ ಕೂಡಾ ಮಾದರಿಯಾಗಿದೆ ಎಂದರು.

ಷಷ್ಠಬ್ಧಿ ಸಂಭ್ರಮದ ಗೌರವಾಧ್ಯಕರು ಹಾಗೂ ಬೆಳಗಾವಿ-ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸಂತ ಎಂದರೆ ಸ್ವಂತ ವಿಚಾರ. ಸ್ವಂತಕ್ಕಾಗಿ ಬದುಕುವವನಲ್ಲಾ ಎಲ್ಲರೂ ನನ್ನವರು ಎಂದು ಬದುಕುವವನು ನಿಜವಾದ ಸಂತ ಆ ಸಾಲಿನಲ್ಲಿ ನಿಜಗುಣ ದೇವರು ಇದ್ದಾರೆ ಎಂದರು.

ವೇದಿಕೆ ಮೇಲೆ ಶ್ರೀಮಠದ ನಿಜಗುಣ ದೇವರು, ಅರಕೇರಿಯ ಅವಧೂತ ಸಿದ್ಧ ಮಹಾರಾಜರು, ಜಗದ್ಗುರು ಶ್ರೀ ವೃಷಭಲಿಂಗ ಮಹಾಸ್ವಾಮಿಗಳು, ಮಹಾದೇವಾನಂದ ಸರಸ್ವತಿ ಮಹಾಸ್ವಾಮಿಗಳು, ಸದಾನಂದ ಮಹಾಸ್ವಾಮಿಗಳು, ಸುಣಧೋಳಿಯ ಅಭಿನವ ಶಿವಾನಂದ ಮಹಾಸ್ವಾಮೀಜಿ, ನಯಾನಗರದ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿ, ಮಾತೋಶ್ರೀ ಸಿದ್ದೇಶ್ವರಿ ತಾಯಿಯವರು, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಕೃಪಾನಂದ ಮಹಾಸ್ವಾಮೀಜಿ ಸೇರಿದಂತೆ ಅನೇಕ ಮಹಾತ್ಮರು ಉಪಸ್ಥಿತರಿದ್ದರು. ಗಣೇಶ ಮಹಾರಾಜರು ಕಾರ್ಯಕ್ರಮ ನಿರೂಪಿಸಿದರು.

ಸುಕ್ಷೇತ್ರ ಮಹಾಧ್ವಾರದಿಂದ ಶ್ರೀಮಠಕ್ಕೆ ಶೃಂಗಾರ ರಥದಲ್ಲಿ ಮಹಾತ್ಮರನ್ನು ಸಹಸ್ರ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ವೈರಾಗ್ಯನಿಧಿ ಮಾತೋಶ್ರೀ ಚಂಪಮ್ಮಾ ತಾಯಿವರ ಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಜರುಗಿತು. ಬೆಳಗ್ಗೆ ಸಿದ್ಧಲಿಂಗ ಯತಿರಾಜರ, ಶಾಂಭವಿ ಮಾತೆಯ, ಸಿದ್ಧಲಿಂಗ ಮಹಾರಾಜರ ಮೂರ್ತಿಗಳಿಗೆ ರುದ್ರಾಭಿಷೇಕ ಜರುಗಿತು. ಓಂಕಾರ ಧ್ವಜಾರೋಹಣ, ಸಿದ್ಧಲಿಂಗ ರಥದ ಕಳಸಾರೋಹಣ, ನಂತರ ಸಹಸ್ರ ಮುತ್ತೈದೆಯರ ಉಡಿ ತುಂಬುವು ಕಾರ್ಯಕ್ರಮ ಜರುಗಿತು.