ಕನ್ನಡಪ್ರಭ ವಾರ್ತೆ ತಿಪಟೂರು

ಮಾ.೨ರಂದು ತಿಪಟೂರಿಗೆ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದು ಜೆಡಿಎಸ್ ಪಕ್ಷಕ್ಕೆ ೨೫ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಂದು ಬೃಹತ್ ಸಮಾವೇಶದ ಮೂಲಕ ಜೆಡಿಎಸ್ ಬೆಳ್ಳಿ ಹಬ್ಬ ಆಚರಿಸಲಾಗುವುದು ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು.

ನಗರದ ನಡೆದ ತಾಲೂಕು ಜೆಡಿಎಸ್‌ನ ಬೂತ್‌ಮಟ್ಟದ ಕಾರ್ಯಕರ್ತರ ಸಭೆ ಮತ್ತು ವಿಶೇಷ ಸಮಗ್ರ ಮತ ಪರಿಷ್ಕರಣೆಯ ಬಿಎಲ್‌ಎ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂದು ನಗರಕ್ಕೆ ಆಗಮಿಸುವ ನಿಖಿಲ್ ಕುಮಾರಸ್ವಾಮಿಯವರನ್ನು ಕೋಡಿಸರ್ಕಲ್‌ನಲ್ಲಿ ಬೈಕ್ ರ‍್ಯಾಲಿ ಮೂಲಕ ಸ್ವಾಗತಿಸಿ ನಗರದ ಪ್ರಮುಖ ರಸ್ತೆಯ ಮೂಲಕ ಹಾದು ಸಮಾರಂಭ ನಡೆಯುವ ಕಂಚಾಘಟ್ಟ ರಸ್ತೆಯ ಜಿ.ಕೆ.ಬಾಬು ಲೇಔಟ್‌ನಲ್ಲಿ ನಿರ್ಮಿಸಲಾಗುವ ಬೃಹತ್ ವೇದಿಕೆಗೆ ಕರೆತಂದು ಅಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಜರುಗಲಿದೆ ಎಂದರು. ರಾಜ್ಯದ ಜನತೆಯ ನೆಚ್ಚಿನ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ೨೫ವರ್ಷಗಳು ತುಂಬಿದ್ದು ಎಚ್.ಡಿ.ದೇವೇಗೌಡರಂತಹ ಧೀಮಂತ ನಾಯಕನನ್ನು ಪ್ರಧಾನಿಯಾಗಿ ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಿದೆ. ಇಂತಹ ಒಂದು ಪ್ರಾದೇಶಿಕ ಪಕ್ಷ ಈಗ ಒಂದು ದೊಡ್ಡ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಮುಂಬರುವ ಚುನಾವಣೆಯನ್ನು ಎದುರಿಸಲಿದೆ. ಸೋಲಿನ ಭಯದಿಂದ ಇದುವರೆಗೂ ಸ್ಥಳೀಯ ಚುನಾವಣೆಗಳನ್ನು ಮುಂದೂಡುತ್ತಾ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಆದ್ದರಿಂದ ಜೆಡಿಎಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಿ ಎನ್‌ಡಿಎ ಅಭ್ಯರ್ಥಿ ತಿಪಟೂರು ಕ್ಷೇತ್ರದಲ್ಲಿ ಗೆಲ್ಲುವ ಹಾಗೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಈ ವರ್ಷ ಚುನಾವಣೆಗಳ ವರ್ಷ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳ ಜೊತೆ ನಗರಸಭೆಗೂ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯೊಂದಿಗೆ ಎನ್‌ಡಿಎ ಅಭ್ಯರ್ಥಿಗಳು ರಾಜ್ಯದೆಲ್ಲೆಡೆ ಕನಿಷ್ಠ ೧೫೦ ಸೀಟುಗಳಲ್ಲಿ ಗೆಲುವು ಸಾಧಿಸಲಿದೆ. ಮೈತ್ರಿಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದ ಸೀಟು ಜೆಡಿಎಸ್ ಅಭ್ಯರ್ಥಿಗೆ ಬಂದರೆ ಎನ್‌ಡಿಎ ಅಭ್ಯರ್ಥಿಯಾಗಿ ತಾವು ಕಣಕ್ಕಿಳಿದು ಗೆದ್ದು ಎನ್‌ಡಿಎಗೆ ಬಲತುಂಬುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ರಾಜ್ಯ ವಕ್ತಾರ ದೇವರಾಜು ಮಾತನಾಡಿ, ಚುನಾವಣೆಗಳು ಮಾರ್ಚ್ ೧೫ರಿಂದ ಏಪ್ರಿಲ್ ೧೫ರವೆರೆಗೂ ನಡೆಯಲಿದ್ದು ಈ ಸಮಯದಲ್ಲಿ ಜೆಡಿಎಸ್ ಕಾರ್ಯಕರ್ತರು ತಮ್ಮ ಗ್ರಾಮಗಳಲ್ಲಿ ಬೂತ್‌ಮಟ್ಟದಲ್ಲಿ ಯಾವುದೇ ಅನಧಿಕೃತ ಮತದಾರರು ಕಂಡುಬಂದರೆ ಅವರನ್ನು ಮತಪಟ್ಟಿಯಲ್ಲಿ ಡಿಲೀಟ್ ಮಾಡಿಸಬೇಕು. ಯಾರದ್ದಾದರೂ ಅರ್ಹ ವ್ಯಕ್ತಿಯ ಹೆಸರು ಬಿಟ್ಟುಹೋಗಿದ್ದರೆ ಸೇರಿಸಲು ಸಹಾಯ ಮಾಡಬೇಕು. ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗವಹಿಸುವ ಮೂಲಕ ರಾಷ್ಟ್ರಸೇವೆಯಲ್ಲಿ ಭಾಗಿಯಾಗಬೇಕು ಎಂದರು. ಜೆಡಿಎಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಶಿವಸ್ವಾಮಿ, ನಗರಾಧ್ಯ್ಯಕ್ಷ ರಾಜು ಕಂಚಾಘಟ್ಟ, ಮುಖಂಡರಾದ ನಟರಾಜು ಮೇಲಾಪುರ, ಸುದರ್ಶನ್, ಇಮ್ರಾನ್, ಸಂತೋಷ್, ಮೋಹನ್, ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.