ಕೇರಳದಲ್ಲಿ ನಿಫಾ, ಮಂಗನ ಕಾಯಿಲೆ ಹಿನ್ನೆಲೆ: ದ.ಕ.ದಲ್ಲಿ ವಿಶೇಷ ನಿಗಾ

| Published : Sep 20 2024, 01:37 AM IST

ಕೇರಳದಲ್ಲಿ ನಿಫಾ, ಮಂಗನ ಕಾಯಿಲೆ ಹಿನ್ನೆಲೆ: ದ.ಕ.ದಲ್ಲಿ ವಿಶೇಷ ನಿಗಾ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ವಾತಾವರಣ ಇದೆ. ರಾತ್ರಿ ವೇಳೆ ಕೆಲವು ಕಡೆ ಮಳೆಯಾಗುತ್ತಿದೆ. ಈ ನಿಟ್ಟಿನಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳುವ ಅಗತ್ಯವಿದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇರಳದಲ್ಲಿ ನಿಫಾ ಬೆನ್ನಲ್ಲೇ ಮಂಗನ ಕಾಯಿಲೆ ಭೀತಿ ಕೂಡ ತಲೆದೋರಿದ್ದು, ಕೇರಳ ಗಡಿಭಾಗ ದ.ಕ. ಜಿಲ್ಲೆಯಲ್ಲಿಯೂ ವಿಶೇಷ ನಿಗಾ ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಆಫ್ರಿಕನ್‌ ದೇಶಗಳಲ್ಲಿಯೂ ಮಂಗನ ಕಾಯಿಲೆ ಹರಡಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಬಂದರಿನ ಮೂಲಕ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಪ್ರತ್ಯೇಕ ಆ್ಯಂಬುಲೆನ್ಸ್‌ ಸನ್ನದ್ಧವಾಗಿದೆ. ಮಂಗನ ಕಾಯಿಲೆ ಪೀಡಿತ ರೋಗಿಗಳ ಚಿಕಿತ್ಸೆಗೆ ಮಂಗಳೂರಿನ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಕಾಯ್ದಿರಿಸಲಾಗಿದೆ. ಆಗಸ್ಟ್‌ ತಿಂಗಳಿನಲ್ಲಿಯೇ ತಪಾಸಣೆ ಆರಂಭಗೊಂಡಿದ್ದು, ಈವರೆಗೆ ಇಬ್ಬರು ಪ್ರಯಾಣಿಕರು ಮಾತ್ರ ಆಫ್ರಿಕನ್‌ ದೇಶಗಳಿಂದ ಮಂಗಳೂರಿಗೆ ಆಗಮಿಸಿದ್ದಾರೆ. ಅವರಲ್ಲಿ ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ.ದ.ಕ. ಜಿಲ್ಲೆಯಲ್ಲಿ ಸದ್ಯಕ್ಕೆ ಮಂಗನ ಕಾಯಿಲೆಯ ಯಾವುದೇ ಆತಂಕ ಇಲ್ಲ. ರಾಜ್ಯ ಸರ್ಕಾರದಿಂದಲೂ ಸದ್ಯಕ್ಕೆ ಯಾವುದೇ ಸೂಚನೆ ಬಂದಿಲ್ಲ. ವಿಮಾನ ನಿಲ್ದಾಣ, ಬಂದರಿನಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿರನ್ನು ನಿರಂತರ ತಪಾಸಣೆ ನಡೆಯುತ್ತಿದೆ. ಮುನ್ನೆಚ್ಚರಿಕೆಗಾಗಿ ವೆನ್ಲಾಕ್‌ನಲ್ಲಿ ಆರು ಬೆಡ್‌ಗಳನ್ನು ಮೀಸಲಿರಿಸಿದ್ದೇವೆ. ಕೇರಳದಲ್ಲಿ ನಿಫಾ ಆತಂಕವೂ ಇದ್ದು, ನಿಗಾ ವಹಿಸಲಾಗಿದೆ. ರೋಗಗಳ ನಿಯಂತ್ರಣ ಹಾಗೂ ಮುನ್ನಚ್ಚರಿಕೆ ಸಲುವಾಗಿ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಸದ್ಯದಲ್ಲೇ ವಿಶೇಷ ಸಭೆ ನಡೆಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದ್ದಾರೆ.ವೈರಲ್‌ ಜ್ವರ ಹೆಚ್ಚಳಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ವೈರಲ್‌ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಕೆಮ್ಮು, ಶೀತ, ಗಂಟಲು ನೋವು ಸಹಿತ ಜ್ವರದ ಲಕ್ಷಣ ಜಿಲ್ಲೆಯ ಅಲ್ಲಲ್ಲಿ ಕಂಡುಬರುತ್ತಿದೆ. ಚಿಕಿತ್ಸೆಗೆ ವೈದ್ಯರ ಬಳಿ ಬರುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಅದರಲ್ಲೂ ಮಕ್ಕಳಿಗೆ ಹೆಚ್ಚಾಗಿ ಜ್ವರ ಕಾಣಿಸಿಕೊಳ್ಳುತ್ತಿದೆ. ನಗರದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ವಾತಾವರಣ ಇದೆ. ರಾತ್ರಿ ವೇಳೆ ಕೆಲವು ಕಡೆ ಮಳೆಯಾಗುತ್ತಿದೆ. ಈ ನಿಟ್ಟಿನಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳುವ ಅಗತ್ಯವಿದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.