ಸಾರಾಂಶ
ಧಾರವಾಡ: ಪ್ರಸ್ತುತ ಅಧಿಕಾರದ ವ್ಯವಸ್ಥೆಯು ಸಮಾಜದಲ್ಲಿ ನಮ್ಮನ್ನು ಮತ್ತೆ ಗುಲಾಮಗಿರಿಗೆ ಒತ್ತಾಯದಿಂದ ತಳ್ಳುತ್ತಿದ್ದು, ಮತ್ತೆ ಬದುಕಿನ ಪರವಾಗಿ ನಿರ್ದಿಗಂತ ಉತ್ಸವ ನಡೆಯುತ್ತಿರುವುದು ಕರ್ನಾಟಕ, ಭಾರತ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಹೊಸ ಆಶಯ ಚಿಗುರುವ ಹಾಗೆ ಮಾಡಿದೆ ಎಂದು ಹಿರಿಯ ಭಾಷಾತಜ್ಞ, ಚಿಂತಕ ಗಣೇಶ ಎನ್. ದೇವಿ ಹೇಳಿದರು.
ಖ್ಯಾತ ಚಿತ್ರನಟ ಪ್ರಕಾಶ ರಾಜ್ ನೇತೃತ್ವದ ನಿರ್ದಿಗಂತ ಸಂಸ್ಥೆಯು ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ನಿರ್ದಿಗಂತ ಉತ್ಸವಕ್ಕೆ ವೀಣೆ ಬಾರಿಸುವ ಮೂಲಕ ಶನಿವಾರ ಚಾಲನೆ ನೀಡಿದ ದೇವಿ, ಇತ್ತೀಚೆಗೆ ನಮ್ಮಲ್ಲಿ ಒಂದು ಚಟ ಬೆಳೆಸಿಕೊಂಡಿದ್ದೇವೆ. ನಮ್ಮ ಸಹನೆ, ತಾಳ್ಮೆಯನ್ನು ಕಳೆದುಕೊಂಡಿದ್ದೇವೆ. ಇನ್ನೊಬ್ಬರ ದೃಷ್ಟಿಕೋನವನ್ನು ಮಾನ್ಯ ಮಾಡದೇ ಇರುವ ದುರಭ್ಯಾಸ ಕಲಿತುಕೊಂಡಿದ್ದೇವೆ. ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಯಾವ ಸಂಗತಿ ವಾಸ್ತವ? ಯಾವುದು ನಾಟಕ? ಎಂಬುದನ್ನು ಸಹ ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿದ್ದೇವೆ ಎಂದು ಡಾ. ದೇವಿ ಖೇದ ವ್ಯಕ್ತಪಡಿಸಿದರು.ಬದುಕು ಅಥವಾ ಜೀವನವು ಕೊನೆ ಇಲ್ಲದೇ ಸಾಗುತ್ತಿರಬೇಕು ಎನ್ನುವ ಎಲ್ಲರ ಆಶಯದಂತೆ ಅಭಿವ್ಯಕ್ತಿ ಹೊರ ಹಾಕುವ ಇಂತಹ ಉತ್ಸವಗಳು ನಡೆಯಬೇಕು. ಉತ್ಸವ ಜೀವನದ ಕನ್ನಡಿ ಮಾತ್ರವಲ್ಲದೇ, ಜೀವನದ ಸಂಭ್ರಮ, ಅಭಿವ್ಯಕ್ತಿ ಆಗಿರುತ್ತದೆ ಎಂದರು.
ಸಂಸ್ಕೃತಿಯ ಜೀವಾಳ ನಾಟಕನಾಟಕ ಅಥವಾ ರಂಗಭೂಮಿ ಆಯಾ ಸಂಸ್ಕೃತಿಯ ಜೀವಾಳ. ಎಲ್ಲಿಯ ವರೆಗೂ ಈ ನಾಟಕಗಳು ಜೀವಂತವಾಗಿರುತ್ತವೆಯೋ ಅಲ್ಲಿಯ ವರೆಗೆ ಆ ಸಂಸ್ಕೃತಿ ಜೀವಂತವಾಗಿರುತ್ತದೆ. ಅದು ಕಳೆಗುಂದಿದರೆ ಅಲ್ಲಿಯ ಸಂಸ್ಕೃತಿ ಉಳಿಯೋದಿಲ್ಲ. ನಾಟಕ ನೋಡುವುದು ಅಥವಾ ಅಭಿನಯಿಸುವುದು ಎರಡೂ ನಾನಲ್ಲದ ಇನ್ನೊಬ್ಬನಾಗುವ, ಪರಕಾಯ ಪ್ರವೇಶ ಪಡೆಯುವುದು ಮುಖ್ಯವಾಗಿರುವುದರಿಂದ ಅದರಿಂದ ಕಲಿಯವುದು ಬಹಳ ಇದೆ ಎಂದು ದೇವಿ ಮರಾಠಿ -ಕನ್ನಡ ರಂಗಭೂಮಿ ಸಂಬಂಧ ಕುರಿತು ಪ್ರಸ್ತಾಪಿಸಿದರು. ಕೇಡುಗಾಲದಲ್ಲಿ ರಂಗಕರ್ಮಿ ಕಷ್ಟದ ದಿನಗಳಲ್ಲಿ ಇದ್ದಾನೆ. ವೇದಿಕೆ ಮೇಲೆ ರಂಗಕರ್ಮಿ ನಾಲ್ಕು ಸುಂದರ ಕ್ಷಣಗಳನ್ನು ಕಳೆಯಬಹುದು. ಮಿಕ್ಕಿದ್ದೆಲ್ಲವೂ ಶ್ರಮ. ಸುತ್ತಲೂ ವಾತಾವರಣದಲ್ಲಿ ಯಾವುದೇ ಸತ್ಯ, ನಾಟಕ ಎಂಬುದು ಗೊತ್ತಾಗದ ಪ್ರಜ್ಞಾಹೀನ ಸ್ಥಿತಿಯಲ್ಲಿ ಆತನಿದ್ದಾನೆ. ಇದು ಕಷ್ಟದ ದಾರಿ. ಕತ್ತಿಯಂಚಿನ ದಾರಿಯಾಗಿದ್ದು, ಯಾವ ಸಂದರ್ಭದಲ್ಲಿ ಈ ದಾರಿಯಲ್ಲಿ ಪಾದಗಳಲ್ಲಿ ರಕ್ತ ಬರುತ್ತದೆಯೋ ಗೊತ್ತಿಲ್ಲ. ಆದರೆ, ನಡೆಯುತ್ತಾ ಹೋದರೆ, ಇನ್ನೊಂದು ದಿಗಂತ, ಇನ್ನೊಂದು ದಿಗಂತವಾಗಿ ನಿರ್ದಿಗಂತವಾಗುತ್ತದೆ ಎಂದು ರಂಗಕರ್ಮಿಗಳ ಕುರಿತು ದೇವಿ ಪ್ರಸ್ತಾಪಿಸಿದರು.
ನಿರ್ದಿಗಂತ ಸಂಸ್ಥೆಯ ಮುಖ್ಯಸ್ಥ ಪ್ರಕಾಶ ರಾಜ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಧಾರವಾಡ ಪ್ರಮುಖ ಪಾತ್ರ ವಹಿಸಿದ್ದು ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಧಾರವಾಡದಲ್ಲಿ ಈ ಉತ್ಸವ ಮಾಡಬೇಕೆಂಬ ಕನಸು ಸಾಕಾರಗೊಂಡಿದೆ. ಬರೀ ನಾಟಕ ಮಾತ್ರವಲ್ಲದೇ ಚರ್ಚೆ, ಸಂವಾದವೂ ಇಲ್ಲಿ ಪ್ರಮುಖ ಎನಿಸಿದೆ ಎಂದರು. ಧಾರವಾಡದ ಮನೋಹರ ಗ್ರಂಥಮಾಲಾದಲ್ಲಿ ಹಸ್ತಪ್ರತಿಗಳನ್ನು ವೀಕ್ಷಿಸುವಾಗ ಜಿ.ಬಿ. ಜೋಶಿ ಅವರು ಬರಹಗಾರರಿಂದ ಒತ್ತಾಯ ಪೂರ್ವಕವಾಗಿ ಬರಹಗಳನ್ನು ಬರೆಯಿಸುವ ಮೂಲಕ ಸಾಹಿತ್ಯ ರಚನೆ ಮಾಡಿರುವ ಸಂಗತಿ ಅಚ್ಚರಿ ಎನ್ನಿಸಿತು. ಸಮಾಜಕ್ಕೆ ಮನೋಹರ ಗ್ರಂಥಮಾಲಾ ಆರೋಗ್ಯಕರ ಪುಸ್ತಕ ನೀಡಿದೆ ಎಂದು ಶ್ಲಾಘಿಸಿದರು. ಹಿರಿಯ ಚಿಂತಕ ರಾಜೇಂದ್ರ ಚೆನ್ನಿ ಆಶಯ ಭಾಷಣ ಮಾಡಿದರು. ಪ್ರಕಾಶ ಗರುಡ ಪ್ರಾಸ್ತಾವಿಕ ಮಾತನಾಡಿದರು.