ಇಟಗಿ ಪಂಚಮಸಾಲಿ ಪಿಯು ಕಾಲೇಜಿನ ನಿರ್ಮಲ ರಾಜ್ಯಕ್ಕೆ ದ್ವಿತೀಯ

| Published : Apr 09 2025, 12:33 AM IST

ಇಟಗಿ ಪಂಚಮಸಾಲಿ ಪಿಯು ಕಾಲೇಜಿನ ನಿರ್ಮಲ ರಾಜ್ಯಕ್ಕೆ ದ್ವಿತೀಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಇಟಗಿ ಪಂಚಮಸಾಲಿ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಕೆ. ನಿರ್ಮಲ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಇಟಗಿ ಪಂಚಮಸಾಲಿ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಕೆ. ನಿರ್ಮಲ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಮೂಲತಃ ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದ ತಮ್ಮ ಅಜ್ಜಿ ಕೊಟ್ರಮ್ಮನ ಮನೆಯಲ್ಲಿ ಆಶ್ರಯ ಪಡೆದು ಅಭ್ಯಾಸ ಮಾಡುತ್ತಿದ್ದ ನಿರ್ಮಲ ಕಲಾ ವಿಭಾಗದಲ್ಲಿ ಕನ್ನಡ-99, ಸಂಸ್ಕೃತ-100, ಐಚ್ಛಿಕ ಕನ್ನಡ-99, ಇತಿಹಾಸ-100, ರಾಜ್ಯಶಾಸ್ತ್ರ -98, ಶಿಕ್ಷಣ ಶಾಸ್ತ್ರ-100 ಒಟ್ಟು 596 ಅಂಕ ಪಡೆದಿದ್ದಾಳೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಜಂಗಮರಕಲ್ಗುಡಿ ಗ್ರಾಮದ ಬಸವರಾಜ, ಗಿರಿಜಮ್ಮರ ಮಗಳಾದ ನಿರ್ಮಲ, 1ರಿಂದ 8ನೇ ತರಗತಿಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಂಗಮನಕಲ್ಗುಡಿ ಗ್ರಾಮದಲ್ಲಿ ಓದಿದ್ದಾಳೆ. ನಂತರದಲ್ಲಿ ಕನ್ನಿಹಳ್ಳಿ ಗ್ರಾಮಕ್ಕೆ ಬಂದ ನಂತರದಲ್ಲಿ ಇಟಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ್ದಾಳೆ. ಕಾಲೇಜು ಶಿಕ್ಷಣವನ್ನು ತಾಲೂಕಿನ ಇಟಗಿ ಗ್ರಾಮದ ಪಂಚಮಸಾಲಿ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಅಭ್ಯಾಸ ಮಾಡಿದ್ದಾಳೆ.

ನಿರ್ಮಲ ತಂದೆ ಬಸವರಾಜ ಗಂಗಾವತಿ ಡಿಪೋದಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಸಾಧನೆಗೆ ಪಾಲಕರು ಮತ್ತು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಅಭಿನಂದಿಸಿದ್ದಾರೆ.

ನಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಪಾಠ ಮಾಡುವ ಸಂದರ್ಭದಲ್ಲಿ ವಿಷಯ ಸರಿಯಾಗಿ ಅರ್ಥವಾಗದಿದ್ದರೆ, ತರಗತಿಯಲ್ಲೇ ಗೊಂದಲ ಬಗೆ ಹರಿಸಿಕೊಳ್ಳುತ್ತಿದ್ದೆ. ಉಪನ್ಯಾಸಕರ ಮಾರ್ಗದರ್ಶನ ಹಾಗೂ ತಾಯಿ ಪ್ರೇರಣೆಯಿಂದ ನಾನು ರಾಜ್ಯಕ್ಕೆ ಪ್ರಥಮ ಸ್ಥಾನದ ಗುರಿ ಇತ್ತು. ಆದರೆ ಕೇವಲ 1 ಅಂಕದಿಂದ ವಂಚಿತ ಆಗಿದ್ದರಿಂದ, ದ್ವಿತೀಯ ಸ್ಥಾನ ಪಡೆದಿರುವುದು ಖುಷಿ ಇದೆ. ಮುಂದೆ ನಾನು ಪಿಎಸ್‌ಐ ಅಥವಾ ಕೆಎಎಸ್‌, ಐಎಎಸ್‌ ಪರೀಕ್ಷೆ ಎದುರಿಸಿ ಉನ್ನತ ಹುದ್ದೆ ಅಲಂಕರಿಸುವ ಕನಸು ಇದೆ ಎನ್ನುತ್ತಾಳೆ ಕೆ. ನಿರ್ಮಲ.