ರಾಮನಗರ: ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ವೇದ ವಿದ್ಯಾ ವಿಹಾರದ ವೇದನಾದ ಗುರುಕುಲ ನಿರ್ಮಾಣಕ್ಕೆ ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ಬೆಂಗಳೂರಿನಿಂದ ಬನ್ನಿಕುಪ್ಪೆ ಗ್ರಾಮದಲ್ಲಿ ಗುರುಕುಲ ನಿರ್ಮಾಣ ಸ್ಥಳಕ್ಕೆ ಆಗಮಿಸಿದ ನಿರ್ಮಲಾ ಸೀತಾರಾಮನ್ ಅವರನ್ನು ಉಪವಿಭಾಗಾಧಿಕಾರಿ ಬಿನೋಯ್ ಹಾಗೂ ತಹಸೀಲ್ದಾರ್ ತೇಜಸ್ವಿನಿಯವರು ಹೂಗುಚ್ಛ ನೀಡಿ ಬರ ಮಾಡಿಕೊಂಡರು.

ಆನಂತರ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನೆರವೇರಿದ ಹೋಮ ಹವನಗಳಲ್ಲಿ ನಿರ್ಮಲಾ ಸೀತಾರಾಮನ್ ಕುಟುಂಬ ಸಮೇತ ಪಾಲ್ಗೊಂಡು ವೇದನಾದ ಗುರುಕುಲ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸ್ತ್ರೋಕ್ತವಾಗಿ ಭೂಮಿಪೂಜೆ ನೆರವೇರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿತ್ತ ಸಚಿವರು, ಕಲ್ಯಾಣಪುರಿ ವೈದಿಕ ಸಭಾದ ಭಾಗವಾಗಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಪ್ರಾರಂಭವಾದ ವೇದನಾದ ಗುರುಕುಲದಲ್ಲಿ ಗೋವಿಂದ ಪ್ರಕಾಶ್ ಭಟ್ ಅವರು ಋಗ್ವೇದವನ್ನು ಕಲಿಸುತ್ತಿದ್ದಾರೆ. ಅವರು ಇನ್ನು ಯಜುರ್‌ವೇದ, ಸಾಮವೇದ ಮತ್ತು ಅಥರ್ವ ವೇದವನ್ನು ಕಲಿಸಲು ಉದ್ದೇಶಿಸಿದ್ದು, ಅದಕ್ಕಾಗಿ ವೇದ ಗುರುಕುಲ ಶಾಲೆಯನ್ನು ನೂತನವಾಗಿ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರಿನ ಗುರುಕುಲದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊಸ ಗುರುಕುಲದ ಅವಶ್ಯಕತೆ ಇತ್ತಾದರೂ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆ ಇತ್ತು. ಈ ಭಾಗದಲ್ಲಿ ಗುರುಕುಲ ಪ್ರಾರಂಭಿಸಲು ಭೂಮಿ ಸಿಕ್ಕಿದ್ದು, ಇಲ್ಲಿ ವೇದ ಕಲಿಕಾ ಶಾಲೆ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.


ಗೋವಿಂದ ಭಟ್ ಅವರಿಗೆ ಪರಿಸರ ಮತ್ತು ಹಸಿರಿನ ಬಗ್ಗೆ ಪ್ರಜ್ಞೆ ಇದೆ. ಇನ್ನು ಮುಂದೆ ಪ್ರಕೃತಿ ನಡುವೆ ವೇದಗಳ ಬೋಧನೆ ನಡೆಯಲಿದೆ. ಸ್ಥಳೀಯರಿಗೂ ವೇದ ಶಿಕ್ಷಣದ ಸದುಯೋಗವಾಗಲಿದೆ. ಸುತ್ತಮುತ್ತ ವಾಸಿಸುವ ಜನರು ವೇದ ಗುರುಕುಲ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ಈ ಗ್ರಾಮದಲ್ಲಿ ಒಂದು ಗೊಶಾಲೆಯೂ ಇತ್ತು. ಅದನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಗೋಶಾಲೆಯನ್ನು ಗೋವಿಂದ ಪ್ರಕಾಶ್ ಭಟ್ ಅವರಿಗೆ ಕೊಟ್ಟಿದ್ದು, ಅದನ್ನು ಇಲ್ಲಿಯೇ ಆರಂಭಿಸುತ್ತಿದ್ದಾರೆ. ಗೋಶಾಲೆಗಳು ನಮ್ಮ ಸಂಸ್ಕೃತಿಯ ಒಂದು ಮುಖ್ಯ ಭಾಗ. ಅದನ್ನು ಮುಂದುವರಿಸಬೇಕಾಗಿದೆ. ನಾನು ಸಹ ಗೋಸೇವೆ ಮಾಡುತ್ತೇನೆ ಎಂದು ನಿರ್ಮಲಾ ಸೀತರಾಮನ್ ತಿಳಿಸಿದರು.

ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ವೇದ ಉಪನಿಷತ್ತುಗಳು ಸಾಂಸ್ಕೃತಿಕ ಬೆನ್ನುಲುಬು. ಭಾರತ ಸಂಸ್ಕೃತ ಮತ್ತು ಸಂಸ್ಕೃತಿಯಲ್ಲಿ ಒಳ್ಳೆಯ ಹೆಸರು ಮಾಡಿದೆ. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ದೇಶ. ಗುರುಕುಲದಲ್ಲಿ ಶಿಸ್ತು ಬದ್ಧ ಶಿಕ್ಷಣ ಸಿಗುತ್ತದೆ. ಇದಕ್ಕೆ ಬನ್ನಿಕುಪ್ಪೆ ಪ್ರಾರಂಭವಾಗುತ್ತಿರುವ ವೇದ ಗುರುಕುಲವೂ ಪೂರಕವಾಗಿರಲಿದೆ ಎಂದರು.

ನಾವೆಲ್ಲರೂ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಜಗತ್ತು ತಂತ್ರಜ್ಞಾನದ ಮಡಿಲಲ್ಲಿ ಮುಳುಗಿ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಗುರುಕುಲ ಸಂಸ್ಕೃತಿಯನ್ನು ಉಳಿಸಿಕೊಂಡು ಬರುವುದು ಎಲ್ಲರ ಆದ್ಯ ಕರ್ತವ್ಯ. ಇದರಿಂದ ಸಂಸ್ಕೃತಿ ಜೊತೆಗೆ ಸಂಸ್ಕಾರ ಬೆಳೆಯುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಸೀತರಾಮನ್ ಅವರ ಮಾವ ಪರಕಾಲ ಶೇಷಾವತಾರಾಮ್, ಅತ್ತೆ ಪರಕಾಲ ಕಾಳಿಕಾಂಬಾ, ಸಂಸದ ಡಾ.ಸಿ.ಎನ್.ಮಂಜುನಾಥ್, ಪತ್ನಿ ಅನುಸೂಯಮ್ಮ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ , ವೇದನಾದ ಗುರುಕುಲದ ಗೋವಿಂದ ಪ್ರಕಾಶ್ ಭಟ್ ಮತ್ತಿತರರು ಹಾಜರಿದ್ದರು.

20ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ವೇದ ವಿದ್ಯಾವಿಹಾರದ ವೇದನಾದ ಗುರುಕುಲ ನಿರ್ಮಾಣಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೂಮಿಪೂಜೆ ನೆರವೇರಿಸಿದರು.