ಕನಕಗಿರಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಶನಿವಾರ ಇಲಾಖೆಯ ರಾಜ್ಯ ಸಹಾಯಕ ನಿರ್ದೇಶಕಿ ನಿರುಪಮಾ ಮೌಳಿ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನಕಗಿರಿ: ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಶನಿವಾರ ಇಲಾಖೆಯ ರಾಜ್ಯ ಸಹಾಯಕ ನಿರ್ದೇಶಕಿ ನಿರುಪಮಾ ಮೌಳಿ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿನ ಬಾಲಕಿಯರ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳು, ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು, ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ದಸರಾ ರಜೆ ಹಿನ್ನೆಲೆಯಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಮಕ್ಕಳು ಮನೆಗಳಿಗೆ ತೆರಳಿದ್ದರು. ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ತೆರಳಿದ ಅವರು, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯುವ ಉದ್ದೇಶದಿಂದ ಸರ್ಕಾರ ಹೆಣ್ಣು ಹಾಗೂ ಗಂಡು ಮಕ್ಕಳಿಗಾಗಿ ಪ್ರತ್ಯೇಕ ವಸತಿ ನಿಲಯಗಳನ್ನು ಆರಂಭಿಸಿ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ. ವಸತಿ ನಿಲಯದ ವಿದ್ಯಾರ್ಥಿಗಳು ಶ್ರಮವಹಿಸಿ ಓದುವ ಮೂಲಕ ಉತ್ತಮ ನೌಕರಿ ಪಡೆದು ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಬೇಕು. ತಂದೆ ತಾಯಿಯರ ಆಸೆಯನ್ನು ಈಡೇರಿಸಬೇಕು ಎಂದು ಸಲಹೆ ನೀಡಿದರು.
ಬಾಲಕರ ಹಾಸ್ಟೆಲ್ ಆರಂಭಕ್ಕೆ ಪರಿಶೀಲನೆ: ಪಟ್ಟಣದಲ್ಲಿ ಪಿಎಂ ಶ್ರೀ ಆದರ್ಶ ಶಾಲೆ, ಮೌಲಾನಾ ಆಜಾದ್ ಸೇರಿ ಇತರ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಬಾಲಕರಿಗೆ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕೊರತೆಯಿದ್ದು, ಮಕ್ಕಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎನ್ನುವ ಪತ್ರಕರ್ತರ ಪ್ರಶ್ನೆಗೆ, ಇಲಾಖೆಯ ಜಿಲ್ಲಾ ಅಧಿಕಾರಿ ನಾಗಮಣಿ ಅವರಿಗೆ ವಸತಿ ನಿಲಯ ಆರಂಭದ ಕುರಿತು ಮಾಹಿತಿ ಸಲ್ಲಿಸಲು ತಿಳಿಸಿದರು. ಅಲ್ಲದೇ, ಈಗಿರುವ ವಸತಿ ನಿಲಯಗಳಲ್ಲಿನ ಸ್ಥಾನಗಳ ಸಂಖ್ಯೆ ಹೆಚ್ಚಳದ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.ನಿಲಯ ಮೇಲ್ವಿಚಾರಕರಾದ ಮಲ್ಲಯ್ಯ, ಮಲ್ಲಿಕಾರ್ಜುನ, ಹುಸೇನ್ ಬೀ ಯಲಬುರ್ಗಾ, ರೇಣುಕಾ ಪಾಟೀಲ್, ಮಂಜುನಾಥ ಇದ್ದರು.