ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ದಸರಾ ಮಹೋತ್ಸವ ವಿಜಯದಶಮಿ ಮೆರವಣಿಗೆಯಲ್ಲಿ ಗಜಪಡೆಯದ್ದೇ ದರ್ಬಾರ್ ಸೃಷ್ಟಿಯಾಗಿತ್ತು. ದಸರಾ ಆನೆಗಳ ನಡಿಗೆ ನೋಡಿದ ಲಕ್ಷಾಂತರ ಜನ ಜೈಕಾರದೊಂದಿಗೆ ಸಂಭ್ರಮಿಸಿದರು.ಮೈಸೂರು ಅರಮನೆ ಬಲರಾಮ ದ್ವಾರದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.
ನಿಶಾನೆ ಆನೆ ಧನಂಜಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ನೆರೆದಿದ್ದ ಗಣ್ಯರಿಗೆ, ಜನಸ್ತೋಮಕ್ಕೆ ವಂದಿಸಿ ವಿಜಯದಶಮಿ ಮೆರವಣಿಗೆ ಮುನ್ನಡೆಸಿತು. ಇದನ್ನು ಹಿಂಬಾಲಿಸಿಕೊಂಡು ನೌಫತ್ ಆನೆಯಾಗಿ ಗೋಪಿ ಸಾಗಿ ಬಂತು. ಉಳಿದ ಆನೆಗಳು ಸಾಲಾನೆಗಳಾಗಿ ಸಾಗುವ ಮೂಲಕ ದಸರಾ ಮೆರವಣಿಗೆಗೆ ಮೆರುಗು ಹೆಚ್ಚಿಸಿದವು.14 ಆನೆಗಳೂ ಭಾಗಿ
ಈ ಬಾರಿ ದಸರೆಗಾಗಿ 14 ಆನೆಗಳನ್ನು ಕಾಡಿನಿಂದ ನಾಡಿಗೆ ತರಲಾಗಿತ್ತು. ಎಲ್ಲಾ ಆನೆಗಳು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ ಸಾಗಿದವು. ನಂತರ ಮೊದಲ ಹಂತದ ಸಾಲಾನೆಯಲ್ಲಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ, ಎರಡನೇ ಹಂತದಲ್ಲಿ ಪ್ರಶಾಂತ, ಸುಗ್ರೀವ ಮತ್ತು ಹೇಮಾವತಿ ಹಾಗೂ 3ನೇ ಹಂತದಲ್ಲಿ ಕಂಜನ್, ಭೀಮ, ಏಕಲವ್ಯ ಆನೆಗಳು ಸಾಗಿದವು.
ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಗೆ ಚಿನ್ನದ ಅಂಬಾರಿ ಹೊರಿಸಲಾಯಿತು. ಇದರ ಅಕ್ಕಪಕ್ಕದಲ್ಲಿ ಕಾವೇರಿ ಮತ್ತು ರೂಪಾ ಕುಮ್ಕಿ ಆನೆಗಳು ಸಾಗಿದವು.ಇದೇ ಮೊದಲ ಬಾರಿಗೆ ದಸರೆ ಆಗಮಿಸಿದ್ದ ಶ್ರೀಕಂಠ, ರೂಪಾ ಮತ್ತು ಹೇಮಾವತಿ ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದವು. ಶ್ರೀಕಂಠ ಮತ್ತು ಹೇಮಾವತಿ ಸಾಲಾನೆಗಳಾಗಿ ಸಾಗಿದರೇ, ರೂಪಾ ಆನೆಯು ಅಂಬಾರಿ ಆನೆಗೆ ಕುಮ್ಕಿ ಆನೆಯಾಗಿ ಸಾಗಿ ಸೈ ಎನಿಸಿಕೊಂಡಿತು.
ಮೆರವಣಿಗೆಯಲ್ಲಿ ಕೆಲಕಾಲ ಶ್ರೀಕಂಠ ಆನೆಯು ವಿಚಲಿತವಾಗಿತ್ತು. ಅದರ ಮಾವುತ, ಕಾವಾಡಿ ಶ್ರೀಕಂಠನನ್ನು ಸಮಾಧಾನಪಡಿಸಿ ಮುನ್ನಡೆಸುವಲ್ಲಿ ಯಶಸ್ವಿಯಾದರು.----
ಬಾಕ್ಸ್...ಎಲ್ಲೆಲ್ಲೂ ಭೀಮ ಆನೆಯದ್ದೇ ಹವಾ
ದಸರಾ ಗಜಪಡೆಯಲ್ಲಿರುವ ಆನೆಗಳ ಪೈಕಿ ಭೀಮ ಆನೆಯ ಬಗ್ಗೆ ಜನರಿಗೆ ಕ್ರೇಜ್ ಹೆಚ್ಚಾಗಿದೆ. ತಾಲೀಮಿನ ವೇಳೆಯೂ ಜನರು ಭೀಮ, ಭೀಮ ಎಂದು ಕೂಗಿದರೆ ಅದು ಸೊಂಡಿಲೆತ್ತಿ ನಮಸ್ಕರಿಸುತ್ತಿತ್ತು. ಈ ದಿನ ಅರಮನೆ ಅಂಗಳದಲ್ಲಿ ಜಂಬೂಸವಾರಿ ಸಾಗುವಾಗಲೂ ಇದು ಪುನಾರಾವರ್ತನೆಯಾಯಿತು.ಜಂಬೂಸವಾರಿಯಲ್ಲಿ 11 ಆನೆಗಳು ಸಾಲಾನೆಯಾಗಿ ಸಾಗಿದವು. ಕೊನೆಯ ಸಾಲಿನಲ್ಲಿದ್ದ ಭೀಮನನ್ನು ಕಂಡ ಜನ ಭೀಮ... ಭೀಮ.... ಎಂದು ಕೂಗಲು ಆರಂಭಿಸಿದರು. ಜನರ ಹರ್ಷೋದ್ಘಾರಕ್ಕೆ ಮಣಿದ ಭೀಮ ಸೊಂಡಲೆತ್ತಿ ನಮಿಸುವ ಮೂಲಕ ನೆರೆದಿದ್ದವರ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ದಸರಾ ಗಜಪಡೆಯಲ್ಲಿ 14 ಆನೆಗಳಿದ್ದರೂ ಜನರಿಗೆ ಅಂಬಾರಿ ಹೊರುವ ಅಭಿಮನ್ಯು ಮತ್ತು ಭೀಮ ಆನೆಯ ಹೆಸರು ಮಾತ್ರ ಗೊತ್ತಿರುವುದು. ಹೀಗಾಗಿ, ಯಾವುದೇ ಆನೆಯನ್ನು ಕಂಡರೂ ಭೀಮ ಎಂದು ಕೂಗುತ್ತಿದ್ದು ಸಹ ಕಂಡು ಬಂತು. ಭೀಮ ಆನೆಯನ್ನು ಮಾವುತ ಗುಂಡ ಯಶಸ್ವಿಯಾಗಿ ಮುನ್ನಡೆಸಿದರು.----
ಬಾಕ್ಸ್...ಆನೆಗಳ ಜವಾಬ್ದಾರಿ
ಅಂಬಾರಿ ಆನೆ- ಅಭಿಮನ್ಯುಅಂಬಾರಿ ಆನೆಗೆ ಕುಮ್ಕಿಗಳು- ಕಾವೇರಿ ಮತ್ತು ರೂಪಾ
ನಿಶಾನೆ ಆನೆ- ಧನಂಜಯನೌಫತ್ ಆನೆ- ಗೋಪಿ
ಸಾಲಾನೆಗಳು- ಮಹೇಂದ್ರ, ಶ್ರೀಕಂಠ, ಲಕ್ಷ್ಮಿ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಸುಗ್ರೀವ ಮತ್ತು ಹೇಮಾವತಿ.