ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೈಗಾರಿಕೆ ಹಾಗೂ ಶಿಕ್ಷಣ ರಂಗದಲ್ಲಿ ಕ್ರಾಂತಿ ನಡೆಸಿದ ನಿಟ್ಟೆ ಡೀಮ್ಡ್‌ ವಿಶ್ವವಿದ್ಯಾಲಯ ಕುಲಪತಿ ಡಾ.ಎನ್‌.ವಿನಯ ಹೆಗ್ಡೆ ನಿಧನಕ್ಕೆ ಸ್ಪೀಕರ್‌ ಯು.ಟಿ.ಖಾದರ್‌, ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸೇರಿದಂತೆ ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರ ಸಂತಾಪದ ಮಹಪೂರವೇ ಹರಿದುಬಂದಿದೆ.

ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೈಗಾರಿಕೆ ಹಾಗೂ ಶಿಕ್ಷಣ ರಂಗದಲ್ಲಿ ಕ್ರಾಂತಿ ನಡೆಸಿದ ನಿಟ್ಟೆ ಡೀಮ್ಡ್‌ ವಿಶ್ವವಿದ್ಯಾಲಯ ಕುಲಪತಿ ಡಾ.ಎನ್‌.ವಿನಯ ಹೆಗ್ಡೆ ನಿಧನಕ್ಕೆ ಸ್ಪೀಕರ್‌ ಯು.ಟಿ.ಖಾದರ್‌, ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸೇರಿದಂತೆ ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರ ಸಂತಾಪದ ಮಹಪೂರವೇ ಹರಿದುಬಂದಿದೆ.

ಮಹಾನ್‌ ಚೇತನ ವಿನಯ ಹೆಗ್ಡೆ:

ಕರ್ನಾಟಕದ ಶೈಕ್ಷಣಿಕ ಮತ್ತು ಕೈಗಾರಿಕಾ ಕ್ರಾಂತಿಯ ಹರಿಕಾರ, ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎನ್. ವಿನಯ ಹೆಗ್ಡೆ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ತೀವ್ರ ಆಘಾತವಾಯಿತು.ರಾಜ್ಯದ ಯುವಜನತೆಗೆ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಅವರ ಪಾತ್ರ ಅತಿ ದೊಡ್ಡದು. ಕೈಗಾರಿಕಾ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಇತಿಹಾಸದಲ್ಲಿ ಸದಾ ಉಳಿಯುತ್ತದೆ.

ನಮ್ಮ ದೇಶ ಒಬ್ಬ ಅಪ್ರತಿಮ ಮುತ್ಸದ್ದಿಯನ್ನು ಕಳೆದುಕೊಂಡಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಮತ್ತು ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸಂತಾಪದಲ್ಲಿ ತಿಳಿಸಿದ್ದಾರೆ.

ಐವನ್‌ ಡಿಸೋಜಾ ಸಂತಾಪ:

ನಿಟ್ಟೆ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅವರ ನಿಧನಕ್ಕೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿʼಸೋಜಾ ಸಂತಾಪ ವ್ಯಕ್ತಪಡಿಸಿದ್ದಾರೆ. ನಿಟ್ಟೆ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು, ನನ್ನ ಆತ್ಮೀಯರಾದ ಎನ್. ವಿನಯ ಹೆಗ್ಡೆ ಅವರ ನಿಧನದ ಸುದ್ದಿ ಕೇಳಿ ತೀವ್ರ ಅಘಾತವಾಯಿತು. ಅವರು ಕೇವಲ ಒಬ್ಬ ಮಹಾನ್ ಶಿಕ್ಷಣ ತಜ್ಞರಲ್ಲದೆ, ಸಮಾಜದ ಹಿತಕ್ಕಾಗಿ ಶ್ರಮಿಸಿದ ಶ್ರೇಷ್ಠ ಮಾರ್ಗದರ್ಶಕರು. ​ಅವರ ಅಗಲಿಕೆ ತುಂಬಲಾರದ ನಷ್ಟ. ಭಗವಂತನು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಐವನ್ ಡಿಸೋಜಾ ಸಂತಾಪದಲ್ಲಿ ತಿಳಿಸಿದ್ದಾರೆ.

ಮಂಜುನಾಥ ಭಂಡಾರಿ ಸಂತಾಪ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‌ಶೈಕ್ಷಣಿಕ-ಕೈಗಾರಿಕಾ ಕ್ರಾಂತಿ ನಡೆಸಿದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿನಯ್ ಹೆಗ್ಡೆ ಅವರು ಶಿಕ್ಷಣ ತಜ್ಞ ಮಾತ್ರವಲ್ಲದೆ ಉದ್ಯಮಿ, ಸಮಾಜ ಸೇವಕರಾಗಿ ಹೆಸರು ಪಡೆದಿದ್ದರು. ಅವರು ನಿಟ್ಟೆ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು.‘ನಿಟ್ಟೆ ಎಜುಕೇಶನ್ ಟ್ರಸ್ಟ್’ ಸ್ಥಾಪಿಸಿ ಈ ಶಿಕ್ಷಣ ಸಂಸ್ಥೆಗಳನ್ನು ಮಂಗಳೂರು, ಬೆಂಗಳೂರು ಮತ್ತು ನಿಟ್ಟೆಯಲ್ಲಿ ಒಟ್ಟು 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಮಂಜುನಾಥ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದ.ಕ. ಬಿಜೆಪಿ ಸಂತಾಪ:

ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿ ಎನ್. ವಿನಯ ಹೆಗ್ಡೆ ನಿಧನಕ್ಕೆ ದ.ಕ. ಜಿಲ್ಲಾ ಬಿಜೆಪಿ ಸಂತಾಪ ವ್ಯಕ್ತಪಡಿಸಿದೆ.

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ, ಖ್ಯಾತ ಕೈಗಾರಿಕೋದ್ಯಮಿ, ಶಿಕ್ಷಣ ತಜ್ಞ ಹಾಗೂ ಮಹಾನ್ ದಾನಿ ಎನ್. ವಿನಯ ಹೆಗ್ಡೆ ಅವರ ನಿಧನ ಇಡೀ ದೇಶಕ್ಕೆ ಅತೀವ ನೋವನ್ನುಂಟು ಮಾಡಿದೆ. ಇವರ ನಿಧನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ಪ್ರತಾಪಸಿಂಹ ನಾಯಕ್, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯ್ಕ್‌, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್, ಮಾಜಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್, ನಾಗರಾಜ್ ಶೆಟ್ಟಿ, ಎಸ್.ಅಂಗಾರ, ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್, ಕ್ಯಾ. ಗಣೇಶ್ ಕಾರ್ಣಿಕ್, ಕೆ. ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್ ಹಾಗೂ ಜಿಲ್ಲಾ ಕೋಶಾಧಿಕಾರಿ ಸಂಜಯ ಪ್ರಭು ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.

ತುಳು ಭಾಷೆ, ಸಂಸ್ಕೃತಿಗೆ ಪ್ರೋತ್ಸಾಹ:ಡಾ. ವಿನಯ ಹೆಗ್ಡೆ ಅವರು ತುಳು ಭಾಷೆ ಹಾಗೂ ಸಂಸ್ಕೃತಿಯ ಬಹುದೊಡ್ಡ ಪ್ರೋತ್ಸಾಹಕರಾಗಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅನೇಕ ಯೋಜನೆ, ಕಾರ್ಯಕ್ರಮಗಳಿಗೆ ನಿರಂತರವಾಗಿ ಬೆಂಬಲ ಹಾಗೂ ಪ್ರೋತ್ಸಾಹನೀಡಿದ್ದರು. ಜಿಲ್ಲೆ ಹಾಗೂ ಹೊರಜಿಲ್ಲೆಯ ವಿವಿಧ ತುಳು ಸಂಘ, ಸಂಸ್ಥೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ಸಹಕಾರವನ್ನು ನಿರಂತರವಾಗಿ ನೀಡಿದವರು.

ನಿಟ್ಟೆ ವೈದ್ಯಕೀಯ ಸಂಸ್ಥೆಯಲ್ಲಿ ತುಳು ಸಂಶೋಧನಾ ಕೇಂದ್ರಗಳನ್ನು ಆರಂಭಿಸಿ, ಆ ಮೂಲಕ ತುಳು ಭಾಷೆ ಹಾಗೂಸಂಸ್ಕ್ರತಿಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿರುವುದು ತುಳು ಬೆಳವಣಿಗೆಯ ನಿಟ್ಟಿನಲ್ಲಿ ಅನನ್ಯ ಸೇವೆ ಎಂದು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ನಾಡು ಕಂಡ ಶ್ರೇಷ್ಠ ಉದ್ಯಮಿ:ಶಿಕ್ಷಣ, ವೈದ್ಯಕೀಯ, ಉದ್ಯಮ ಕ್ಷೇತ್ರದಲ್ಲಿ ಬೆಳೆದು ಶ್ರೇಷ್ಠ ಮುತ್ಸದ್ಧಿಯಾಗಿ ರಾಷ್ಟ್ರಪ್ರೇಮ, ಸಮಾಜ ಸೇವಾ ಕೈಂಕರ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಂತ ಉದಾರ ಹೃದಯಿ ನಿಟ್ಟೆ ವಿನಯ ಹೆಗ್ಡೆಯವರ ಅಗಲಿಕೆ ಭರಿಸಲಾಗದ ನಷ್ಟ ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸಂತಾಪ ಸೂಚಿಸಿದ್ದಾರೆ.

ಕಳೆದೆರಡು ದಿನದ ಹಿಂದೆಯಷ್ಟೇ ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ದರ್ಶನ ಪಡೆದು, ಪೂಜ್ಯ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ತೀರ್ಥ ಪ್ರಸಾದ ಸ್ವೀಕರಿಸಿ ಇದೀಗ ಇಹಲೋಕ ತ್ಯಜಿಸಿರುವುದು ಒಂದರ್ಥದಲ್ಲಿ ಇಚ್ಛಾಮರಣಿ ಎಂದು ಅರ್ಥೈಸಬಹುದು ಎಂದರು.ಈ ಹಿಂದೆ ನ್ಯಾಷನಲ್ ಅಥ್ಲೆಟಿಕ್ ಮೀಟ್, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಪೀಠಾರೋಹಣದ 60ನೇ ವರ್ಷಾಚರಣೆ ಪ್ರಯುಕ್ತ ನಡೆದ ಹಿಂದೂ ಸಮಾಜೋತ್ಸವ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ನಡಾವಳಿ, ಉಡುಪಿಯ ಪರ್ಯಾಯ ಹೀಗೆ ಹಲವು ಪ್ರಮುಖ ಕಾರ್ಯಗಳಲ್ಲಿ ವಿನಯ ಹೆಗ್ಡೆ ಯವರೊಂದಿಗೆ ಕಾರ್ಯದರ್ಶಿಯಾಗಿ ಭಾಗವಹಿಸಿರುವ ಅವಕಾಶವನ್ನು ಕಲ್ಕೂರ ಈ ಸಂದರ್ಭ ಸ್ಮರಿಸಿಕೊಂಡಿದ್ದಾರೆ.ಹಿಂದು ಸಮಾಜಕ್ಕೆ ನೋವು: ನಿಟ್ಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎನ್. ವಿನಯ ಹೆಗ್ಡೆ ಅವರ ನಿಧನ ಹಿಂದೂ ಸಮಾಜಕ್ಕೆ ಅತೀವ ನೋವನ್ನು ಉಂಟುಮಾಡಿದೆ. ಇವರ ನಿಧನಕ್ಕೆ ವಿಶ್ವ ಹಿಂದೂ ಪರಿಷದ್ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಸಿದೆ.ಸಮಾಜದಲ್ಲಿ ಅಶಕ್ತರಿಗೆ ಶಕ್ತಿ ತುಂಬುವ ಜೊತೆಗೆ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ ಇವರು ಹಿಂದೂ ರುದ್ರಭೂಮಿಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ, ಗೋ ಶಾಲೆಗಳ ನಿರ್ವಹಣೆಗೆ ಸಹಕಾರ, ಶಾಲೆಗಳ ನಿರ್ಮಾಣ ಸೇರಿದಂತೆ ನೂರಾರು ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲೆ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಪೋಷಕರಾಗಿ ಕೊಡುಗೈ ದಾನಿಯಾಗಿ, ಸಾಂಸ್ಕೃತಿಕ‌‌ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ವಿನಯ ಹೆಗ್ಡೆ ಅವರ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ಪರವಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ. ಕೆ. ಸಂತಾಪದಲ್ಲಿ ತಿಳಿಸಿದ್ದಾರೆ.